ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಕೋಟೆಯಲ್ಲಿ ಸೆಪ್ಟೆಂಬರ್‌ 8, 9ರಂದು ‘ಏರ್‌ ಶೋ’

Published : 5 ಸೆಪ್ಟೆಂಬರ್ 2023, 14:36 IST
Last Updated : 5 ಸೆಪ್ಟೆಂಬರ್ 2023, 14:36 IST
ಫಾಲೋ ಮಾಡಿ
Comments

ಬೀದರ್‌: ಜಿಲ್ಲಾಡಳಿತ ಹಾಗೂ ಸ್ಥಳೀಯ ಏರ್‌ ಫೋರ್ಸ್‌ ಸ್ಟೇಶನ್‌ನಿಂದ ಬರುವ ಸೆಪ್ಟೆಂಬರ್‌ 8, 9ರಂದು ನಗರದ ಬೀದರ್‌ ಬಹಮನಿ ಕೋಟೆಯ ಆಗಸದಲ್ಲಿ ಏರ್‌ ಶೋ ಹಮ್ಮಿಕೊಳ್ಳಲಾಗಿದೆ.

ಎರಡೂ ದಿನ ಸಂಜೆ 4ಕ್ಕೆ ಕಾರ್ಯಕ್ರಮ ನಡೆಯಲಿದೆ. ಸೆ. 8ರಂದು ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ, ಸೆ. 9ರಂದು ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.  ಸೂರ್ಯಕಿರಣ ‘ಏರೋಬ್ಯಾಟಿಕ್ ಟೀಮ್’ ಆಕರ್ಷಕ ವೈಮಾನಿಕ ಪ್ರದರ್ಶನ ನಡೆಸಿಕೊಡಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ರಾತ್ರಿ ನಡೆದ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಸಿಆರ್‌ಸಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಬರುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಆಯಾ ಶಾಲಾ- ಕಾಲೇಜಿನವರು ನೋಡಿಕೊಳ್ಳಬೇಕು.  ಸ್ಕೂಲ್‌ಬ್ಯಾಗ್‌ ಇಲ್ಲದೆ ಮಕ್ಕಳನ್ನು ಕರೆದುಕೊಂಡು ಬರಬೇಕು.  ಜೊತೆಗೆ ಮಕ್ಕಳನ್ನು ಕರೆತರಬೇಡಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳನ್ನು ಶಾಲಾ ವಾಹನಗಳಲ್ಲಿ ಸುರಕ್ಷಿತವಾಗಿ ಏರ್ ಶೋಗೂ ಮುನ್ನ ಕೋಟೆಯೊಳಗೆ ತಂದು ಕೂರಿಸಬೇಕು. ಯಾವ ಶಾಲೆಗಳಲ್ಲಿ ವಾಹನಗಳಿಗೆ ವ್ಯವಸ್ಥೆ ಇಲ್ಲವೋ ದಾನಿಗಳಿಂದ ವ್ಯವಸ್ಥೆ ಮಾಡಿಕೊಳ್ಳಬಹುದು. ಮಾಹಿತಿ ನೀಡಿದರೆ ಜಿಲ್ಲಾಡಳಿತವು ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು.

ಹೋದ ವರ್ಷ ನಡೆದ ಕಾರ್ಯಕ್ರಮದಲ್ಲಿ 20 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಷ್ಟು ವಿದ್ಯಾರ್ಥಿಗಳು ಬರುತ್ತಾರೆ ಎಂಬ ಮಾಹಿತಿ ಕ್ಲಸ್ಟರ್ ಹಂತದಲ್ಲಿ ನೀಡಿದರೆ ವಾಹನಗಳ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ ಎಂದರು.

ನಮ್ಮ ನಗರದಲ್ಲಿಯೇ ಏರ್‌ಫೋರ್ಸ್‌ ಇರುವುದರಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಕ್ಕಳು ಕಾರ್ಯಕ್ರಮ ವೀಕ್ಷಿಸಿ ಆನಂದ ಪಡುತ್ತಾರೆ. ಆಗಸದಲ್ಲಿ ವಿಮಾನಗಳ ವೈಮಾನಿಕ ಪ್ರದರ್ಶನ ಕಂಡು ಸ್ಫೂರ್ತಿ ಪಡೆದು ಭವಿಷ್ಯದಲ್ಲಿ ಅವರು ಕೂಡ ಏನಾದರೂ ಆಗಬೇಕೆಂಬ ಕನಸು ಕಟ್ಟಿಕೊಳ್ಳುತ್ತಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಮಕ್ಕಳನ್ನು ಶಾಲೆಯ ವಾಹನಗಳಲ್ಲಿ ಕರೆ ತರುವಾಗ ವಾಹನಗಳ ಮೇಲೆ ಬ್ಯಾನರ್‌ಗಳನ್ನು ಹಾಕಿಕೊಂಡು ಬಂದರೆ ಗುರುತಿಸಲು ಅನುಕೂಲವಾಗುತ್ತದೆ. ಎಷ್ಟು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಮಾಹಿತಿಯನ್ನು ಮುಂಚಿತವಾಗಿ ನೀಡಿದರೆ ಟ್ರಾಫಿಕ್ ಸಮಸ್ಯೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ ವಿಂಗ್ ಕಮಾಂಡರ್ ಅರ್ಜುನ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಲೀಂ ಪಾಶಾ, ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯ ಗುರುಗಳು, ಸಿ.ಆರ್.ಸಿಗಳು, ಇತರೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT