ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಕ್ಷ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ: ಸಚಿವ ಈಶ್ವರ ಖಂಡ್ರೆ

Published 6 ಜೂನ್ 2024, 0:01 IST
Last Updated 6 ಜೂನ್ 2024, 0:01 IST
ಅಕ್ಷರ ಗಾತ್ರ

ಭಾಲ್ಕಿ (ಬೀದರ್‌ ಜಿಲ್ಲೆ): ‘ರಾಜ್ಯದ ಅರಣ್ಯ, ಗೋಮಾಳ, ಸರ್ಕಾರಿ ಭೂಮಿ ಹಾಗೂ ಪಟ್ಟಾ ಭೂಮಿಯಲ್ಲಿ ಬೃಹತ್ ಮರಗಳ ಅಕ್ರಮ ಕಡಿತಲೆ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಗಿಡ–ಮರಗಳನ್ನು ಉಳಿಸಲು ವೃಕ್ಷ ಸಂರಕ್ಷಣಾ ಕಾಯ್ದೆ–1976ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆದಿದೆ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅನುಮತಿ ಇಲ್ಲದೆ ಯಾರೇ ನಿಯಮ ಬಾಹಿರವಾಗಿ, ಅಕ್ರಮವಾಗಿ ಮರ ಕಡಿದರೆ ಮರದ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

‘ಹಾಸನ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ನೂರಾರು ಮರ ಕಡಿತಲೆ ಮಾಡಿದ ದೂರುಗಳು ಬಂದಿವೆ. ಪ್ರಾಣವಾಯು ನೀಡುವ, ತಾಪಮಾನ ಹೆಚ್ಚಾಗದಂತೆ ತಡೆಯುವ ಹಾಗೂ ಭೂಫಲವತ್ತತೆ ಕಾಪಾಡುವ ವೃಕ್ಷಗಳ ಸಂರಕ್ಷಣೆ ಅಗತ್ಯವಿದೆ’ ಎಂದರು.

‘ಬೆಲೆ ಬಾಳುವ ಮರಗಳ ಸಂರಕ್ಷಣೆಗಾಗಿ ಪಟ್ಟಾ ಭೂಮಿ, ಗೋಮಾಳ ಮತ್ತು ಸರ್ಕಾರಿ ಭೂಮಿಯಲ್ಲಿರುವ ಬೀಟೆ, ಶ್ರೀಗಂಧ, ತೇಗ ಮೊದಲಾದ ಬೆಲೆಬಾಳುವ ಮರಗಳ ಜಿಯೋ ಟ್ಯಾಗ್ ಮಾಡಲು ಸೂಚಿಸಲಾಗಿದ್ದು, ಅಕ್ರಮವಾಗಿ ಮರ ಕಡಿಯುವುದಕ್ಕೆ ಕಡಿವಾಣ ಬೀಳಲಿದೆ’ ಎಂದು ಹೇಳಿದರು.

‘ರಸ್ತೆ, ರೈಲು ಮಾರ್ಗ, ವಿದ್ಯುತ್ ಪ್ರಸರಣ ಮಾರ್ಗ, ಕೊಳವೆ ಮಾರ್ಗ ಸೇರಿದಂತೆ ಯಾವುದೇ ಮೂಲಸೌಕರ್ಯ ಯೋಜನೆ, ಗಣಿಗಾರಿಕೆ, ಜಲಾಶಯ, ಬಡಾವಣೆ ನಿರ್ಮಾಣ, ಕೈಗಾರಿಕೆ ಸ್ಥಾಪನೆಯಂತಹ ಯಾವುದೇ ಯೋಜನೆ ಇರಲಿ, ಇದರಿಂದ ಪರಿಸರದ ಮೇಲೆ ಆಗುವ ಪರಿಣಾಮದ ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ ಎಂಬುದನ್ನು ಇಲಾಖೆ ಮನಗಂಡಿದೆ. ಯಾವುದೇ ಹೊಸ ಯೋಜನೆಗೆ ಬಿಡಿ ಬಿಡಿಯಾಗಿ (ಇಷ್ಟು ಕಿ.ಮೀ.ನಿಂದ ಇಂತಿಷ್ಟು ಕಿ.ಮೀ.ವರೆಗೆ) ಮರ ಕಡಿಯಲು ಅನುಮತಿ ನೀಡುವುದಕ್ಕೆ ಕಡಿವಾಣ ಹಾಕಿ, ಒಂದು ಯೋಜನೆಗೆ ಒಂದೇ ಬಾರಿ ಅನುಮತಿ ನೀಡಿ, ಪರ್ಯಾಯ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT