ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಗಂಜ್ ವ್ಯಾಪಾರಿಗಳಿಂದ ಅನಿರ್ದಿಷ್ಟ ಬಂದ್

ಮಾರುಕಟ್ಟೆ ಶುಲ್ಕ ತಾರತಮ್ಯ ಸರಿಪಡಿಸಲು ಆಗ್ರಹ
Last Updated 14 ಜುಲೈ 2020, 15:22 IST
ಅಕ್ಷರ ಗಾತ್ರ

ಬೀದರ್: ಮಾರುಕಟ್ಟೆ ಶುಲ್ಕದಲ್ಲಿನ ತಾರತಮ್ಯ ನೀತಿ ಖಂಡಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಇಲ್ಲಿಯ ಗಾಂಧಿಗಂಜ್‍ನ ವ್ಯಾಪಾರಿಗಳು ಮಂಗಳವಾರದಿಂದ ಅನಿರ್ದಿಷ್ಟಾವಧಿಗೆ ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾರೆ.

ಬೆಳಿಗ್ಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ವ್ಯಾಪಾರಿಗಳು ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶಿವಶರಣಪ್ಪ ಮಜಗೆ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ರಾಜ್ಯ ಸರ್ಕಾರ ಎಪಿಎಂಸಿ ಶುಲ್ಕವನ್ನು ಶೇ 1.5 ರಿಂದ ಶೇ 1ಕ್ಕೆ ಇಳಿಸಿದೆ. ಆದರೆ, ಇದು ಕೇವಲ ಮಾರುಕಟ್ಟೆ ಪ್ರಾಂಗಣದಲ್ಲಿ ಪರವಾನಗಿ ಪಡೆದು ವ್ಯಾಪಾರ ಮಾಡುತ್ತಿರುವವರಿಗೆ ಮಾತ್ರ ಅನ್ವಯಿಸಲಿರುವುದು ಬೇಸರ ಉಂಟು ಮಾಡಿದೆ ಎಂದು ಬಸವರಾಜ ಧನ್ನೂರ ಹೇಳಿದರು.

ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರಿವಾಜ್ಞೆ ಹೊರಡಿಸಿರುವ ಪ್ರಕಾರ ಮಾರುಕಟ್ಟೆ ಪ್ರಾಂಗಣದ ಹೊರಗೆ ಯಾವುದೇ ಪರವಾನಗಿ ಪಡೆಯದೆ ರೈತರಿಂದ ನೇರವಾಗಿ ಕೃಷಿ ಉತ್ಪನ್ನ ಖರೀದಿಸುವ ವ್ಯಾಪಾರಿಗಳು/ ಬಹುರಾಷ್ಟ್ರೀಯ ಕಂಪನಿಗಳಿಗೆ ಯಾವುದೇ ರೀತಿಯ ಮಾರುಕಟ್ಟೆ ಶುಲ್ಕ ವಿಧಿಸದಿರುವುದು ತಾರತಮ್ಯವಾಗಿದೆ ಎಂದು ಆರೋಪಿಸಿದರು.

ಸರ್ಕಾರದ ನೀತಿಯು ಮಾರುಕಟ್ಟೆ ಹೊರಗೆ ವ್ಯವಹರಿಸುವವರ ಹಿತ ಕಾಯುವ ಹಾಗೂ ಅವರಿಗೆ ಉತ್ತೇಜನ ನೀಡುವಂಥದ್ದಾಗಿದೆ. ಎಪಿಎಂಸಿ ಪರವಾನಗಿ ಪಡೆದು ದಶಕಗಳಿಂದ ಕಾಯ್ದೆ ಅನುಸಾರ ವ್ಯಾಪಾರ ನಡೆಸುತ್ತ ಎಪಿಎಂಸಿ ವ್ಯವಸ್ಥೆಯನ್ನು ಉಳಿಸಿ ಬೆಳೆಸಿದ, ರೈತರ ಸೇವೆ ಮಾಡಿದ ವ್ಯಾಪಾರಸ್ಥರನ್ನು ಬೀದಿಪಾಲು ಮಾಡುವಂಥದ್ದಾಗಿದೆ ಎಂದು ಆಪಾದಿಸಿದರು.

ಎಪಿಎಂಸಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ಮಾಡಿ ಹೊರಡಿಸಿರುವ ಸುಗ್ರಿವಾಜ್ಞೆ ಪ್ರಕಾರ ರೈತ ತಾನು ಬೆಳೆದ ದವಸ ಧಾನ್ಯವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಸ್ವತಂತ್ರನಾಗಿರುತ್ತಾನೆ. ಇದಕ್ಕೆ ನಮ್ಮ ಯಾವುದೇ ಅಭ್ಯಂತರ ಅಥವಾ ವಿರೋಧ ಇಲ್ಲ. ಆದರೆ, ಮಾರುಕಟ್ಟೆ ಹೊರಗೆ ಪರವಾನಗಿ ಇಲ್ಲದೆ, ಕಾಯ್ದೆಯನ್ನೂ ಪಾಲಿಸದೆ ರೈತರಿಂದ ಕೃಷಿ ಉತ್ಪನ್ನಗಳ ನೇರ ಖರೀದಿ ವ್ಯವಹಾರಕ್ಕೆ ಅವಕಾಶ ಒದಗಿಸಿ, ಅದಕ್ಕೆ ಮಾರುಕಟ್ಟೆ ಶುಲ್ಕದಿಂದ ವಿನಾಯಿತಿಯನ್ನೂ ಕಲ್ಪಿಸುತ್ತಿರುವುದು, ಪರವಾನಗಿ ಪಡೆದು ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ಮಾತ್ರ ಶುಲ್ಕ ವಿಧಿಸುತ್ತಿರುವುದು ಯಾವ ನ್ಯಾಯವಾಗಿದೆ ಎಂದು ಪ್ರಶ್ನಿಸಿದರು.

ಏಕರೂಪದ ಕಾಯ್ದೆ ಹಾಗೂ ಏಕರೂಪದ ಮಾರುಕಟ್ಟೆ ಶುಲ್ಕವನ್ನು ಜಾರಿಗೆ ತರಬೇಕು. ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವ ವ್ಯಾಪಾರಿಗಳಿಗೆ ಶೇ 1 ರಷ್ಟು ಶುಲ್ಕದಿಂದ ವಿನಾಯಿತಿ ನೀಡಿ, ಎಪಿಎಂಸಿ ವ್ಯವಸ್ಥೆಯ ಹಿತ ಕಾಪಾಡಬೇಕು. ಹೀಗೆ ಮಾಡುವುದರಿಂದ ಎಪಿಎಂಸಿ ಪ್ರಾಂಗಣಕ್ಕೆ ದವಸ ಧಾನ್ಯಗಳನ್ನು ತಂದು ಮಾರಾಟ ಮಾಡುವ ರೈತರಿಗೆ ನ್ಯಾಯ ದೊರಕುತ್ತದೆ. ಅದರ ಜತೆಗೆ ಲಕ್ಷಾಂತರ ಜನ ವ್ಯಾಪಾರಿಗಳು, ಗಮಾಸ್ತರು, ಕಾರ್ಮಿಕರು ಹಾಗೂ ಅವರ ಕುಟುಂಬಗಳನ್ನು ಬೀದಿ ಪಾಲಾಗುವುದರಿಂದ ರಕ್ಷಿಸಿದಂತೆಯೂ ಆಗುತ್ತದೆ ಎಂದು ಹೇಳಿದರು.

ಅಸೋಸಿಯೇಶನ್ ಉಪಾಧ್ಯಕ್ಷ ಅಣ್ಣಾರಾವ್ ಮೊಗಶೆಟ್ಟಿ, ಕಾರ್ಯದರ್ಶಿ ಭಗವಂತ ಔದತಪುರ, ಕೋಶಾಧ್ಯಕ್ಷ ನಾಗಶೆಟ್ಟಿ ದಾಡಗಿ, ಆಡಳಿತ ಮಂಡಳಿ ಸದಸ್ಯರಾದ ಸೋಮನಾಥ ಗಂಗಶೆಟ್ಟಿ, ವಿಶ್ವನಾಥ ಕಾಜಿ, ಪ್ರಕಾಶ ಗೌಡಪ್ಪನೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT