ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಬಂದ್: ಉತ್ತಮ ಪ್ರತಿಕ್ರಿಯೆ

ಮಾರುಕಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಗೂಡ್ಸ್ ವಾಹನಗಳು
Last Updated 17 ಡಿಸೆಂಬರ್ 2020, 13:58 IST
ಅಕ್ಷರ ಗಾತ್ರ

ಬೀದರ್‌: ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ), ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ಕರೆ ನೀಡಿದ್ದ ಎಪಿಎಂಸಿ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಮನಾಬಾದ್‌ ಹೊರತುಪಡಿಸಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿರುವ ಎಪಿಎಂಸಿಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ರೈತರಿಂದ ಖರೀದಿಸುವ ಉತ್ಪನ್ನಗಳಿಗೆ ವಿಧಿಸುವ ಸೆಸ್‌ ಅನ್ನು ಶೇಕಡ 0.35 ರಿಂದ ಶೇಕಡ ₹ 1ಗೆ ಹೆಚ್ಚಿಸಲಾಗಿದೆ. ಎಪಿಎಂಸಿ ಒಳಗಡೆ ನಡೆಯುವ ಖರೀದಿಗೆ ಮಾತ್ರ ಸೆಸ್‌ ವಿಧಿಸಲಾಗುತ್ತದೆ. ಹೊರಗಡೆ ಖರೀದಿಸುವವರಿಂದ ಯಾವುದೇ ರೀತಿಯ ಶುಲ್ಕ ಪಡೆಯುತ್ತಿಲ್ಲ. ಎಪಿಎಂಸಿಗಳನ್ನು ಮುಚ್ಚುವ ಹುನ್ನಾರದಿಂದ ಈ ರೀತಿಯ ಶುಲ್ಕ ವಿಧಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಮೊದಲು ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿ ಒಳಗಡೆ ಮಾರಾಟ ಮಾಡಬೇಕಿತ್ತು. ಲೈಸೆನ್ಸ್ ಇಲ್ಲದೆ ಖರೀದಿಗೆ ಅವಕಾಶ ಇರಲಿಲ್ಲ. ಕಾಯ್ದೆಗೆ ತಿದ್ದುಪಡಿ ತಂದ ನಂತರ ರೈತರು ತಮ್ಮ ಬೆಳೆಯನ್ನು ಎಪಿಎಂಸಿ ಒಳಗೂ ಹಾಗೂ ಹೊರಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ‌ ಹಿಂದೆ ಜಾರಿಯಲ್ಲಿದ್ದ ಶೇಕಡ 1.5 ಸೆಸ್ ಶೇಕಡ 0.35 ಪೈಸೆಗೆ ಕಡಿತ ಮಾಡಲಾಗಿತ್ತು. ಇದೀಗ ಮತ್ತೆ 35 ಪೈಸೆಯಿಂದ ಶೇ ₹ 1ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೆಸ್‌ ಹೆಚ್ಚಳದಿಂದ ರೈತರು ಎಪಿಎಂಸಿಗೆ ಬರುವುದು ಕಡಿಮೆಯಾಗಲಿದೆ. ಅನಿಯಂತ್ರಿತ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರ ಮೇಲೆ ಪರೋಕ್ಷವಾಗಿ ಒತ್ತಡ ಹಾಕುತ್ತಿರುವ ಕಾರಣ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಅಸ್ಥಿರತೆ ಹೆಚ್ಚಾಗಲಿದೆ. ಕೃಷಿ ಬೆಳವಣಿಗೆ ಕುಂಠಿತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕು ಕೇಂದ್ರಗಳಲ್ಲಿ ವರ್ತಕರ ಸಂಘಟನೆಗಳ ಪದಾಧಿಕಾರಿಗಳು ಆಯಾ ಎಪಿಎಂಸಿಗಳ ಕಾರ್ಯದರ್ಶಿಗಳಿಗೆ ಮನವಿಪತ್ರ ಸಲ್ಲಿಸಿದರು.

ಬೀದರ್‌ನಲ್ಲಿ ದಿ ಗ್ರೇನ್‌ ಆ್ಯಂಡ್‌ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ರಾಜಕುಮಾರ ಬಿರಾದಾರ ಹಾಗೂ ಕಾರ್ಯದರ್ಶಿ ಶಿವಾನಂದ ಬಿರಾದಾರ ಅವರು ಎಪಿಎಂಸಿ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಿದರು.

ಬಂದ್‌ನಿಂದಾಗಿ ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಿಲ್ಲ. ಸರಕು ಸಾಗಣೆ ವಾಹನಗಳು ಮಾರುಕಟ್ಟೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಹಮಾಲರು ಕೆಲಸ ಇಲ್ಲದೆ ಹೋಟೆಲ್‌, ದೇವಸ್ಥಾನಗಳ ಆವರಣದಲ್ಲಿ ಕುಳಿತು ಸಮಯ ಕಳೆದರು.

ಬಸವಕಲ್ಯಾಣ, ಔರಾದ್‌, ಕಮಲನಗರ ಹಾಗೂ ಭಾಲ್ಕಿಯಲ್ಲಿ ವರ್ತಕರು ಅಂಗಡಿಗಳನ್ನು ಬಂದ್‌ ಮಾಡಿ ಸೆಸ್‌ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು.

ಹುಮನಾಬಾದ್‌ನಲ್ಲಿ ಬಂದ್‌ಗೆ ಬೆಂಬಲ ದೊರೆಯಲಿಲ್ಲ. ವರ್ತಕರು ಎಂದಿನಂತೆ ವ್ಯವಹಾರ ನಡೆಸಿದದರು. ಆದರೆ ಮಾರುಕಟ್ಟೆಯಲ್ಲಿ ರೈತರ ಹಾಗೂ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು.

ಎಪಿಎಂಸಿ ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿರುವುದು ಅನೇಕ ರೈತರಿಗೆ ಗೊತ್ತಿರಲಿಲ್ಲ. ಶುಕ್ರವಾರದಿಂದ ವಹಿವಾಟು ಸಂಪೂರ್ಣ ಬಂದ್‌ ಇರಲಿದೆ ಎಂದು ಹುಮನಾಬಾದ್‌ನ ವರ್ತಕ ವೀರೇಶ ಭಾವಿ ತಿಳಿಸಿದರು.

ಕೆಲ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆದಿಲ್ಲ ಎಂದು ಹುಮನಾಬಾದ್‌ ವರ್ತಕರ ಸಂಘದ ಅಧ್ಯಕ್ಷ ಬಸವರಾಜ್ ವರನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT