ಶುಕ್ರವಾರ, ಜುಲೈ 30, 2021
23 °C

ತೊಗರಿ, ಕಡಲೆ ಬೇಳೆ ತುಂಬಿದ್ದ ಲಾರಿ ದರೋಡೆ: ಆರು ಮಂದಿ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಅಂಬೆಸಾಂಗವಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯ ವಳಸಂಗ ಸಮೀಪ ದರೋಡೆಕೋರರ ಗುಂಪೊಂದು ಈಚೆಗೆ ತೊಗರಿ, ಕಡಲೆ ಬೇಳೆ ಲಾರಿ ಸಮೇತ ದರೋಡೆ ಮಾಡಿದ್ದ 6 ಮಂದಿ ಆರೋಪಿಗಳನ್ನು ಗುರುವಾರ ಬಂಧಿಸುವಲ್ಲಿ ಭಾಲ್ಕಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂತೋಷ ಜೀವನ ವಡ್ಡರ್ ಹುಲಸೂರ, ಅಖಿಲ ರಸೂಲಸಾಬ್ ಪಠಾಣ ಭಾತಂಬ್ರಾ, ಪರಮೇಶ (ಪ್ರೇಮ) ವೆಂಕಟ ಶೆಲ್ಲಾಳೆ ಭಾತಂಬ್ರಾ, ಸಿದ್ದು (ಸಿದ್ರಾಮ) ಶ್ರೀಮಂತ ದಾಂಡೇಕರ್ ಭಾತಂಬ್ರಾ, ಬಾಲಾಜಿ ನಾಗನ್ನಾಥ ಬಾಬುಸೂರೆ ಭಾತಂಬ್ರಾ ಮತ್ತು ಶ್ಯಾಮ ಕಾಶಿನಾಥ ಪವಾರ್ ಭಾತಂಬ್ರಾ ಬಂಧಿತರು. ತಲೆಮರೆಸಿ ಕೊಂಡ ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

₹17 ಲಕ್ಷ ನಗದು, 8 ಕ್ವಿಂಟಲ್ ತೊಗರಿ ಬೇಳೆ ಮತ್ತು ದರೋಡೆಗೆ ಬಳಸಿದ ಲಾರಿ, ಎರಡು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹31.30 ಲಕ್ಷ ಆಗಿದೆ.

‘ಮಹಾರಾಷ್ಟ್ರದ ಉದಗೀರ್‌ನಿಂದ ಆಂಧ್ರಪ್ರದೇಶದ ನೆಲ್ಲೂರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ 225 ಕ್ವಿಂಟಲ್ ತೊಗರಿ ಬೇಳೆ, 30 ಕ್ವಿಂಟಲ್ ಕಡಲೆ ಬೇಳೆ ಲೋಡ್ ಹೊತ್ತಿದ್ದ ಲಾರಿಯೊಂದಿಗೆ ಚಾಲಕ ಟಿ.ಬಾಬು ಮೇ 4ರಂದು ರಾತ್ರಿ 9.30 ಗಂಟೆ ಸುಮಾರಿಗೆ ತೆರಳುತ್ತಿದ್ದರು. ವಳಸಂಗ ಕ್ರಾಸ್ ಸಮೀಪ ಎರಡು ಬೈಕ್ ಮೇಲೆ 7 ಮಂದಿ ದರೋಡೆಕೋರರು ಲಾರಿಗೆ ಅಡ್ಡಗಟ್ಟಿ ಚಾಲಕನನ್ನು ಹೊಡೆದು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಲಾರಿ ಚಾಲಕ ಪ್ರಕರಣ ದಾಖಲಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಡಿವೈಎಸ್ಪಿ ಡಾ.ದೇವರಾಜ್ ಬಿ ಮಾರ್ಗದರ್ಶನದಲ್ಲಿ ಸಿಪಿಐ ಪಾಲಾಕ್ಷಯ್ಯ ಹಿರೇಮಠ ತಂಡ ರಚಿಸಿದ್ದರು. ಸಿಪಿಐ ವೀರಣ್ಣ ದೊಡ್ಡಮನಿ, ಪಿಎಸ್‌ಐಗಳಾದ ಮಹೇಂದ್ರಕುಮಾರ ಜಕಾತಿ, ಸಿಬ್ಬಂದಿ ಬಸವರಾಜ, ಮಂಜು, ರಾಜೇಂದ್ರ, ಉತ್ತಮ, ರಜನಿ ಕಾಂತ, ಸಂಜೀವ, ನಾಗರಾಜ, ಸಂಗಮೇಶ, ವಿಜಯ ಕುಮಾರ, ಜ್ಞಾನೇಶ್ವರ, ಅಮರೀಶ, ನಾಗನ್ನಾಥ, ಅಂಕುಶ, ಅನಿಲ್ ಮತ್ತು ಮಹಾದೇವ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದಾರೆ.

ಮದ್ಯದಂಗಡಿಯಲ್ಲಿ ಕಳವು; ಬಂಧನ

ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಈಚೆಗೆ ನಡೆದ ನ್ಯೂ ಶೋಭಾ ವೈನ್‌ಶಾಪ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಾಲ್ಕಿಯ ಮಹೇಶ ಮಹಾದೇವ ಮೈಲಾರೆ, ರಾಮ ರಾಧಾಕಿಶನ ಭಾಕ್ರೆ, ಹಣಮಂತ ಬೀರಪ್ಪಾ ಗೋದೆ ಬಂಧಿತರು. ₹22 ಸಾವಿರ ಮೌಲ್ಯದ ಮದ್ಯ, ₹82 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಆಟೊ, ಬೈಕ್‌ ಜಪ್ತಿ ಮಾಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಂಕುಶ ಪಂಡಿತ ರಾವ್‌ ಭುಸಾರೆ ದೂರು ನೀಡಿದ್ದರು.

ಸಿಪಿಐ ವೀರಣ್ಣಾ ಎಸ್‌. ದೊಡ್ಡಮನಿ ನೇತೃತ್ವದ ತಂಡದಲ್ಲಿದ್ದ ಪಿಎಸ್‌ಐ ಮಹೇಂದ್ರಕುಮಾರ ಜಕಾತಿ, ಅಮೃತ, ಸಿಬ್ಬಂದಿ ಉತ್ತಮ, ಬೀರಲಿಂಗ, ಜ್ಞಾನೇಶ್ವರ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು