ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿಗಳಿಗೆ ಜೀವ ಬೆದರಿಕೆ:ಜಿ.ವಿ ಮಾಲ್‌ ವ್ಯವಸ್ಥಾಪಕನ ವಿರುದ್ಧ ಬಂಧನ ವಾರೆಂಟ್‌

Published 28 ಜೂನ್ 2024, 13:16 IST
Last Updated 28 ಜೂನ್ 2024, 13:16 IST
ಅಕ್ಷರ ಗಾತ್ರ

ಬೀದರ್‌: ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರಿಗೆ ಜೀವ ಬೆದರಿಕೆ ಒಡ್ಡಿರುವ ನಗರದ ಮೋಹನ್‌ ಮಾರ್ಕೆಟ್‌ ಸಮೀಪದ ಜಿ.ವಿ. ಮಾಲ್‌ ವ್ಯವಸ್ಥಾಪಕನ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಲಾಗಿದೆ.

ಮಾಲ್‌ ವ್ಯವಸ್ಥಾಪಕ ಬಾಲು ಹಾಗೂ ಅಲ್ಲಿನ ಸಿಬ್ಬಂದಿ ಸಂತೋಷ್‌ ಜಾಧವ್‌ ವಿರುದ್ಧ ಬೀದರ್‌ ಉಪವಿಭಾಗದ ಮ್ಯಾಜಿಸ್ಟ್ರೇಟ್‌ರೂ ಆಗಿರುವ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಶುಕ್ರವಾರ ವಾರೆಂಟ್‌ ಹೊರಡಿಸಿದ್ದಾರೆ. ಇಬ್ಬರನ್ನು ಬಂಧಿಸುವಂತೆ ನ್ಯೂ ಟೌನ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ಸೂಚಿಸಿದ್ದಾರೆ.

ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿದಾರರ ವಿರುದ್ಧ ನಗರಸಭೆ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಶುಕ್ರವಾರ ಜಿ.ವಿ ಮಾಲ್‌ ಅತಿಕ್ರಮಣ ತೆರವುಗೊಳಿಸಲು ಹೋಗಿದ್ದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಲ್‌ ವ್ಯವಸ್ಥಾಪಕ ಬಾಲು ಹಾಗೂ ಸಂತೋಷ್‌ ಜಾಧವ್‌ ಅಡ್ಡಿಪಡಿಸಿ, ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಬಂಧನಕ್ಕೆ ಶುಕ್ರವಾರ ವಾರೆಂಟ್‌ ಹೊರಡಿಸಿದ್ದಾರೆ.

‘ಪಾದಚಾರಿ ಮಾರ್ಗ ಒತ್ತುವರಿಯಿಂದ ನಗರದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಅದನ್ನು ತೆರವುಗೊಳಿಸಲು ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಅದರಂತೆ ಉಪವಿಭಾಗಾಧಿಕಾರಿ ಲವೀಶ್‌ ಒರ್ಡಿಯಾ, ಡಿವೈಎಸ್ಪಿ ಶಿವನಗೌಡ ಪಾಟೀಲ ಹಾಗೂ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್‌ ಅವರ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಅತಿಕ್ರಮಣ ತೆರವಿಗೆ ನಿರ್ಧರಿಸಲಾಗಿತ್ತು. ಅದರಂತೆ ನಗರದಲ್ಲಿ ಕಳೆದೆರಡು ದಿನಗಳಿಂದ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಜಿ.ವಿ ಮಾಲ್‌ ಒತ್ತುವರಿ ತೆರವಿಗೆ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಹೋಗಿದ್ದಾಗ ಮಾಲ್‌ನವರು ಕೆಲಸಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಈಗ ಅವರ ಬಂಧನಕ್ಕೆ ಅರೆಸ್ಟ್‌ ವಾರೆಂಟ್‌ ಹೊರಡಿಸಲಾಗಿದ್ದು, ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT