ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಓದಿನ ವಯಸ್ಸಿನಲ್ಲಿ ಪ್ರೀತಿ–ಪ್ರೇಮದಿಂದ ದೂರವಿರಿ’

ಪೋಕ್ಸೊ ಕಾಯ್ದೆ, ಬಾಲ್ಯವಿವಾಹ ತಡೆ ಕುರಿತು ಕಾರ್ಯಾಗಾರ
Published : 28 ಸೆಪ್ಟೆಂಬರ್ 2024, 16:19 IST
Last Updated : 28 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments

ಹುಮನಾಬಾದ್‌: ‘ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಯಾವುದು ಒಳ್ಳೆಯದು ಕೆಟ್ಟದ್ದನ್ನು ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಯಾರಾದರೂ ಪ್ರೀತಿಸುತ್ತೇನೆ ಎಂದು ಪೀಡಿಸಿದಾಗ ವಿದ್ಯಾರ್ಥಿಗಳು ಅದಕ್ಕೆ ಅವಕಾಶ ಮಾಡಿಕೊಡದೆ ಎಚ್ಚರಿಕೆ ವಹಿಸಬೇಕು’ ಎಂದು ಬಸವಕಲ್ಯಾಣ ಮತ್ತು ಹುಮನಾಬಾದ್ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾಘವೇಂದ್ರ ಎಸ್.ಚೆನ್ನಬಸಪ್ಪ ಸಲಹೆ ನೀಡಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಹುಮನಾಬಾದ್‌ ವಕೀಲರ ಸಂಘ , ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಶನಿವಾರ ಪೋಕ್ಸೊ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಬಾಲ್ಯವಿವಾಹ ತಡೆ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರೀತಿ–ಪ್ರೇಮ ಎಲ್ಲವೂ ನಾಟಕೀಯವಾಗಿದೆ. ಒಂದು ವೇಳೆ ನೀವು ಪ್ರೀತಿಸುವುದಕ್ಕೆ ಅವಕಾಶ ಕೊಟ್ಟಾಗ ಮಾತ್ರ ಅವರು ನಿಮ್ಮ ಹತ್ತಿರ ಬರುತ್ತಾರೆ. ನಂತರ ಸುಂದರವಾದ ನಿಮ್ಮ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಕಾಗುತ್ತದೆ. ಒಂದು ಬಾರಿ ನೀವು ಏನಾದರೂ ಪೋಕ್ಸೊ ಕಾಯ್ದೆಯಲ್ಲಿ ಬಂದರೆ ಅದರಿಂದ ಹೊರ ಬರಲು ಸಾಧ್ಯವಿಲ್ಲ. ನಿಮ್ಮ ಪಾಲಕರು ಕಷ್ಟಪಟ್ಟು ನಿಮ್ಮನ್ನು ಓದಿಸುತ್ತಿದ್ದಾರೆ. ನೀವು ಅವರ ಬಗ್ಗೆ ಗಮನ ಹರಿಸಿ, ಉತ್ತಮ ವಿದ್ಯಾಭ್ಯಾಸ ಮಾಡಿ ದೇಶದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು. ನಿಮ್ಮ ಪಾಲಕರು ಸೇರಿ ಇಡೀ ತಾಲ್ಲೂಕಿನ ಕೀರ್ತಿ ಹೆಚ್ಚಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಬಾಲ್ಯ ವಿವಾಹದ ಬಗ್ಗೆ ಮಕ್ಕಳು ಪೋಷಕರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಅವಕಾಶವಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಗಮನಹರಿಸಿದರೆ, ಬಾಲ್ಯ ವಿವಾಹ ಪ್ರಕರಣ  ತಡೆಯಬಹುದು ಎಂದು ಎಂದರು.‌

ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡರ್ ಮಾತನಾಡಿ, ತಂದೆ, ತಾಯಿ, ಸಂಬಂಧಿಕರ ಅಭಿಪ್ರಾಯದ ಮೇರೆಗೆ ಬಾಲ್ಯವಿವಾಹ ನಡೆಯುವ ಸಾಧ್ಯತೆಗಳಿರುತ್ತವೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಬಾಲ್ಯವಿವಾಹದಿಂದಾಗುವ ಗಂಭೀರ ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿದಾಗ ಇದನ್ನು ತಡೆಯಲು ಸಾಧ್ಯವಾಗಲಿದೆ ಎಂದರು.

ಬಾಲ್ಯವಿವಾಹವು ಹೆಣ್ಣುಮಕ್ಕಳ ಮೇಲೆ ಮಾನಸಿಕ, ದೈಹಿಕವಾಗಿ ಗಂಭೀರ ಪರಿಣಾಮ ಬೀರಿ ಜೀವನ ಹಾಳಾಗುವಂತೆ ಮಾಡುತ್ತದೆ. ಸಮಾಜದಲ್ಲಿ ಇಂತಹ ಪ್ರಕರಣ ಕಂಡು ಬಂದರೆ ಸಹಾಯವಾಣಿ ಮೂಲಕ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದರು.‌

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಮಹಿಳಾ ವೈದ್ಯಾಧಿಕಾರಿ ಡಾ.ಸಂಗೀತಾ ಹುಲಸೂರೆ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಹುಮನಾಬಾದ್ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ಬಾದವಾಡಗಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಅಲ್ತಾಫ್ ಖನಗಾಂವಿ, ಹುಮನಾಬಾದ್ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಉದಯಕುಮಾರ್ ಚೀಲವಂತ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಸಿದ್ದೇಶ್ವರ, ಬಿಇಒ ವೆಂಕಟೇಶ್ ಗೂಡಾಳ್, ಸಿಡಿಪಿಒ ಶಿವಪ್ರಕಾಶ್ ಹಿರೇಮಠ, ರವಿಕುಮಾರ್, ರವಿರಾಜ್ ಭಮಶೆಟ್ಟಿ ಸೇರಿ ಇತರರು ಪಾಲ್ಗೊಂಡಿದ್ದರು.

ಹುಮನಾಬಾದ್ ಪಟ್ಟಣದಲ್ಲಿ ಪೋಕ್ಸೊ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಬಾಲ್ಯವಿವಾಹ ತಡೆ ಕುರಿತು ನಡೆದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು
ಹುಮನಾಬಾದ್ ಪಟ್ಟಣದಲ್ಲಿ ಪೋಕ್ಸೊ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಬಾಲ್ಯವಿವಾಹ ತಡೆ ಕುರಿತು ನಡೆದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT