ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ | ಬಸವಭಕ್ತರ ಶ್ರದ್ಧಾಸ್ಥಾನದಲ್ಲಿ ನಾಳೆಯಿಂದ ಜಾತ್ರೆ: 3 ದಿನಗಳ ಸಂಭ್ರಮ

Published 9 ಮೇ 2024, 6:03 IST
Last Updated 9 ಮೇ 2024, 6:03 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಾಡಿನ ಬಸವಭಕ್ತರ ಭಕ್ತಿ, ಶ್ರದ್ಧೆಯ ಕೇಂದ್ರವಾದ ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿರುವ ನಗರದ ಬಸವೇಶ್ವರ ದೇವಸ್ಥಾನ ನವೀಕರಣಗೊಂಡು ಹೊಸ ಮೆರುಗು ಪಡೆದುಕೊಂಡಿದೆ. ಇಲ್ಲಿ ಬಸವಜಯಂತಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಮೇ 10 ರಿಂದ ಮೂರು ದಿನಗಳವರೆಗೆ ಜಾತ್ರಾ ಮಹೋತ್ಸವ ಕಳೆಗಟ್ಟಲಿದೆ.

ಬಸವಣ್ಣನವರು 12 ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಇಲ್ಲಿ ನಡೆಸಿದ ಹೋರಾಟವು ಕಲ್ಯಾಣಕ್ರಾಂತಿ ಎಂದೇ ಇತಿಹಾಸದಲ್ಲಿ ನಮೂದಾಗಿದೆ. ಅವರು ರಚಿಸಿದ ವಚನಗಳು, ನೀಡಿದ ಕಾಯಕ, ದಾಸೋಹ ತತ್ವ ಮತ್ತು ಸಮಾನತೆಯ ಸಂದೇಶದಿಂದಾಗಿ ಈ ನೆಲ ಎಲ್ಲೆಡೆ ಪ್ರಸಿದ್ಧಿ ಪಡೆಯಿತು. ಆದರೆ ಇಂಥ ಮಹತ್ವದ ಸ್ಥಳದಲ್ಲಿನ ಕ್ರಾಂತಿಯೋಗಿ ಬಸವಣ್ಣನವರ ದೇವಸ್ಥಾನ ಉತ್ತಮ ಸ್ಥಿತಿಯಲ್ಲಿ ಇದ್ದಿರಲಿಲ್ಲ. ಆದ್ದರಿಂದ ದೇವಸ್ಥಾನ ಪಂಚ ಸಮಿತಿಯಿಂದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು ನಿರ್ಧರಿಸಿ ಅಲ್ಪಕಾಲದಲ್ಲಿ ಕೆಲಸ ಪೂರ್ಣಗೊಳಿಸಲಾಗಿದೆ.

ಭವ್ಯ ಮತ್ತು ಸುಂದರವಾದ ಪ್ರವೇಶ ದ್ವಾರ, ಅದರ ಮೇಲ್ಭಾಗದಲ್ಲಿ ಆಕರ್ಷಕ ಗೋಪುರ, ಒಳಭಾಗದಲ್ಲಿ ಕಂಬಗಳ ಮಂಟಪ ನಿರ್ಮಿಸಲಾಗುತ್ತಿದ್ದು, ಅಲ್ಪಸ್ವಲ್ಪ ಕೆಲಸ ಬಾಕಿಯಿದೆ. ದೂರಿನಿಂದ ನೋಡಿದರೆ ಈಗ ಈ ಗುಡಿಯು ಚಾಲುಕ್ಯ ಶೈಲಿಯಲ್ಲಿನ ಸ್ಮಾರಕದಂತೆಯೇ ಕಾಣುತ್ತಿದೆ. ಮೊದಲಿನ ಕಟ್ಟಡ ಹಳೆಯ ಕಾಲದ ವಾಡೆಯಂತೆ ಇತ್ತು. ನೂರಾರು ವರ್ಷಗಳ ಕಟ್ಟಡ ಇದಾಗಿದ್ದರಿಂದ ಗೋಡೆಗಳು ಶಿಥಿಲಗೊಂಡಿದ್ದವು. ಮೇಲ್ಛಾವಣಿ ಹಾಳಾಗಿತ್ತು. ಹೀಗಾಗಿ ಅದೆಲ್ಲವನ್ನು ತೆಗೆದು ಹೊಸರೂಪ ನೀಡಲಾಗಿದೆ.

ಒಳಭಾಗದಲ್ಲಿನ ಆವರಣದ ಸುತ್ತಲಿನ ಮಂಟಪಕ್ಕೆ ಸಿಮೆಂಟ್‌ನ ಚಿತ್ರಾವಳಿಗಳಿರುವ ಆಕರ್ಷಕ ಕಂಬಗಳನ್ನು ಅಳವಡಿಸಲಾಗಿದೆ. ಪ್ರವೇಶ ದ್ವಾರದ ಆಚೆಈಚೆಯ ಗೋಡೆಗಳನ್ನು ಮಾತ್ರ ಕೆತ್ತನೆಯ ಶಿಲೆಗಳಿಂದ ಕಟ್ಟಲಾಗಿದೆ. ಇದಕ್ಕೆ ಆಕರ್ಷಕ ವಿನ್ಯಾಸದ ಕಿಟಕಿಗಳಿವೆ. ಅಲ್ಲಲ್ಲಿ ವಿಶಿಷ್ಟ ಚಿತ್ತಾರಗಳಿವೆ.

`ಪ್ರವೇಶ ದ್ವಾರದ ಮೇಲಿನ ಗೋಪುರ ಹಾಗೂ ಕೆಲ ಪ್ರಮಾಣದ ಕೆಲಸ ಬಾಕಿಯಿದೆ. ನಗರದ ಮಧ್ಯಭಾಗದಲ್ಲಿನ ಈ ದೇಗುಲ ಕೆಲ ದಿನಗಳಲ್ಲಿಯೇ ಅತ್ಯಾಕರ್ಷಕವಾಗಿ ಕಂಗೊಳಿಸಲಿದೆ. ಇದೊಂದು ಉತ್ತಮ ಸಂದೇಶ ನೀಡುವ ತಾಣವಾಗಿಸುವುದಕ್ಕೂ ಪ್ರಯತ್ನಿಸಲಾಗುತ್ತಿದೆ' ಎಂದು ದೇವಸ್ಥಾನ ಪಂಚ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ ತಿಳಿಸಿದ್ದಾರೆ.

`ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತೆ ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳುವ ಜೊತೆಯಲ್ಲಿಯೇ ಇಲ್ಲಿ ಬಸವಜಯಂತಿಗೆ ಹಮ್ಮಿಕೊಳ್ಳುವ ವಾರ್ಷಿಕ ಜಾತ್ರೆಯ ವೈಭವವೂ ಹೆಚ್ಚಿಸಲಾಗುತ್ತಿದೆ. ಸಾಂಸ್ಕೃತಿಕ ಚಟುವಟಿಕೆಗಳಿಗೂ ಮಹತ್ವ ನೀಡಲಾಗುತ್ತಿದೆ' ಎಂದು ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ ಹೇಳಿದ್ದಾರೆ.

ಬಸವಕಲ್ಯಾಣ ನಗರದಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿನ ನವೀಕರಣಗೊಂಡ ನಂತರದ ಒಳನೋಟ
ಬಸವಕಲ್ಯಾಣ ನಗರದಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿನ ನವೀಕರಣಗೊಂಡ ನಂತರದ ಒಳನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT