ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಸುಪರ್ದಿಯಲ್ಲಿ ಓಲ್ಡ್‌ಸಿಟಿ

ಬೀದರ್‌: ಕೋವಿಡ್‌–19 ಭೀತಿಯಿಂದ ಮನೆಯಲ್ಲೇ ಉಳಿದ ಜನ
Last Updated 3 ಏಪ್ರಿಲ್ 2020, 15:52 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌–19 ಸೋಂಕಿನಿಂದ ಒಬ್ಬ ವೃದ್ಧ ಮೃತಪಟ್ಟು, 10 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟ ನಂತರ ಓಲ್ಡ್‌ಸಿಟಿಯಿಂದ ಮೂರು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಓಲ್ಡ್‌ಸಿಟಿಯ ಎಲ್ಲ ಪ್ರವೇಶದ್ವಾರಗಳನ್ನು ಮುಚ್ಚಿದ್ದು. ಪ್ರತಿ ಬೀದಿಯಲ್ಲಿ ಬ್ಯಾರಿಕೇಡ್‌ ಇಟ್ಟು, ಕಟ್ಟಿಗೆ ಕಟ್ಟಿ ರಸ್ತೆ ಬಂದ್‌ ಮಾಡಲಾಗಿದೆ. ಮನೆಯಿಂದ ಹೊರಗೆ ಬರದಂತೆ ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ಮೇಳಿಂದ ಮೇಲೆ ಎಚ್ಚರಿಕೆ ನೀಡಲಾಗುತ್ತಿದೆ.

ಓಲ್ಡ್‌ಸಿಟಿಯೊಳಗೆ ಹೋಗುವ ಹಾಗೂ ಹೊರ ಬರುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನಿಗಾ ಇಟ್ಟು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಎಮ್ಮೆ, ಹಸುಗಳಿಗೆ ಮೇವು ತರುವ ವ್ಯಕ್ತಿಗಳಿಗೆ ಹೋಗಿಬರಲು ಅವಕಾಶ ನೀಡಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಂತೆ ಎಚ್ಚರಿಕೆ ವಹಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ 5.30ಕ್ಕೆ ಕಾರ್ಯಾಚರಣೆಗೆ ಇಳಿದ ಪೊಲೀಸರು ವಾಯುವಿಹಾರಕ್ಕೆ ಹೊರಟಿದ್ದವರನ್ನು ತಡೆದರು. ಮನೆಯಂಗಳ ಇಲ್ಲವೆ ಮನೆ ಮಾಳಿಗೆಯ ಮೇಲೆ ವ್ಯಾಯಾಮ ಮಾಡುವಂತೆ ಸೂಚಿಸಿ, ಬೀದಿಗಳಲ್ಲಿ ಸಂಚರಿಸದಂತೆ ತಿಳಿವಳಿಕೆ ಹೇಳಿದರು.

ಲಾಕ್‌ಡೌನ್‌ ಹಿನ್ನಲೆಯಲ್ಲಿ ಜನರು ಮನೆಗಳಿಂದ ಹೊರ ಬರಲಿಲ್ಲ. ನಗರದ ಎಲ್ಲ ಅಂಗಡಿ, ಮಳಿಗೆಗಳು ಮುಚ್ಚಿದ್ದವು. ಕೆಲ ಕಡೆ 11 ಗಂಟೆಯ ನಂತರ ಮೆಡಿಕಲ್‌ಶಾಪ್‌ ಮಾತ್ರ ತೆರೆದಿದ್ದವು. ಕಿರಾಣಿ ಹಾಗೂ ತರಕಾರಿ ಅಂಗಡಿಗಳೂ ಮುಚ್ಚಿದ್ದವು.

ಜನರಿಂದ ತುಂಬಿರುತ್ತಿದ್ದ ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ರೋಟರಿ ವೃತ್ತ, ಮಡಿವಾಳ ವೃತ್ತ, ಮೈಲೂರು ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ ಹಾಗೂ ರೋಟರಿ ವೃತ್ತ ವಾಹನ, ಜನ ಸಂಚಾರವಿಲ್ಲದೆ ಬಿಕೊ ಎನ್ನುತ್ತಿದ್ದವು.

ಓಲ್ಡ್‌ಸಿಟಿಯಲ್ಲಿ ಹೆಜ್ಜೆ ಹೆಜ್ಜೆಗೆ ಪೊಲೀಸರು ಕಂಡು ಬಂದರು. ಜಿಲ್ಲಾಡಳಿತ ಜನಜಂಗುಳಿಯಾಗದಂತೆ ನೋಡಿಕೊಳ್ಳಲು ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಈ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನಿರಂತವಾಗಿ ಮಾಹಿತಿ ಕೊಡುತ್ತಿದ್ದಾರೆ. ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್ ನಗರ ಪ್ರದಕ್ಷಿಣೆ ನಡೆಸಿ, ಸ್ಥಿತಿಗತಿ ಅವಲೋಕಿಸಿದರು.

ಬೀದರ್ ತಾಲ್ಲೂಕಿನ ಶಹಾಪುರ ಸಮೀಪದ ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಪೊಲೀಸರು ಕರ್ನಾಟಕದ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶ ನೀಡಿದರು. ಅನ್ಯರಾಜ್ಯದವರಿಗೆ ಹಾಗೂ ಸರಿಯಾದ ದಾಖಲೆಗಳಿಲ್ಲದ ವ್ಯಕ್ತಿಗಳಿಗೆ ಗಡಿಯೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.

ಮಾಧ್ಯಮಗಳಿಗೂ ನಿರ್ಬಂಧ

ಬೀದರ್‌: ಜಿಲ್ಲಾಡಳಿತ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳುತ್ತಿಲ್ಲ.

ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಕೊಡುತ್ತಿರುವ ಮಾಹಿತಿಗಳು ಗೊಂದಲಗಳಿಂದ ಕೂಡಿವೆ. ಆರೋಗ್ಯ ಇಲಾಖೆ ಕೊಡುವ ಪ್ರಕಟಣೆಯಲ್ಲಿನ ಅಂಕಿ–ಸಂಖ್ಯೆಗಳು ಒಂದು ರೀತಿಯಲ್ಲಿದ್ದರೆ, ರಾಜ್ಯ ಪಟ್ಟಿಯಲ್ಲಿನ ಅಂಕಿ–ಸಂಖ್ಯೆಗಳು ಇನ್ನೊಂದು ರೀತಿಯಲ್ಲಿ ಇವೆ.

‘ಕೋವಿಡ್‌–19 ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎನ್ನಲಾದ ಬೀದರ್‌ನ ಸಿಂಗಾರಾಬಾದ್‌ಗ ವೃದ್ಧನ ಅಂತ್ಯಸಂಸ್ಕಾರವನ್ನು ವೃದ್ಧನ ಇಬ್ಬರು ಪುತ್ರರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬೀದರ್‌ ತಾಲ್ಲೂಕಿನ ಅಷ್ಟೂರ್‌ ಸಮೀಪ ನೆರವೇರಿಸಲಾಗಿದೆ. ಗೋರಿಯಲ್ಲಿ ಹಾಗೂ ಗೋರಿಯ ಮೇಲೆ ಕ್ರಿಮಿನಾಶಕ ಸಿಂಪಡಿಸಿ ಸುತ್ತಮುತ್ತ ಯಾರೂ ಸಂಚರಿಸದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದ ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಸಹಾಯವಾಣಿ ಆರಂಭ

ಕೋವಿಡ್‌ 19 ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 1800–4254316, 1800–4254317, 1800–4254318 ಅಥವಾ, 1800–4254319 ಸಂಪರ್ಕಕಿಸಬಹುದಾಗಿದೆ.

ಕೇಶವ ಕಾರ್ಯ ಸಂವರ್ಧನ ಸಮಿತಿ ಸಹ ಸಾಮಾನ್ಯ ಕಾಯಿಲೆಗಳ ತಪಾಸಣೆಗೆ ಸಹಾಯವಾಣಿ ಆರಂಭಿಸಿದೆ. ಕೋವಿಡ್–19 ಹೊರತುಪಡಿಸಿ, ಇತರ ಸಾಮಾನ್ಯ ರೋಗಗಳಿಗೆ ಸಂಬಂಧಿಸಿದಂತೆ ರೋಗಿಗಳು ಸಹಾಯವಾಣಿ ಸಂಖ್ಯೆಗಳಾದ 80733 93909, 88800 78787, 94815 34915 ಅಥವಾ 95910 96777ಗೆ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT