ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಉತ್ತಮ ಪರಿಸರಸ್ನೇಹಿ ಗಣಪನಿಗೆ ಬಹುಮಾನ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Published 26 ಆಗಸ್ಟ್ 2024, 15:50 IST
Last Updated 26 ಆಗಸ್ಟ್ 2024, 15:50 IST
ಅಕ್ಷರ ಗಾತ್ರ

ಬೀದರ್‌: ‘ಮಣ್ಣಿನಿಂದ ತಯಾರಿಸಿದ ಉತ್ತಮ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಗಣೇಶ ಮಹಾಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ನಡೆದ ಗಣೇಶ ಚತುರ್ಥಿ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಮಾಡಬಾರದು. ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ತಿಳಿಸಿದರು.

ರಾತ್ರಿ 10 ಗಂಟೆಯವರೆಗೆ ಲೌಡ್‌ ಸ್ಪೀಕರ್ ಉಪಯೋಗಿಸಬೇಕು. ಹೆಚ್ಚು ಶಬ್ದವನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಗಣೇಶ ಹಬ್ಬಕ್ಕೆ ಪೊಲೀಸ್, ನಗರಸಭೆ, ಜೆಸ್ಕಾಂ ಹಾಗೂ ಸಂಬಂಧಿಸಿದ ಇಲಾಖೆಯವರು ಅನುಮತಿ ನೀಡುತ್ತಾರೆ. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಸೆಪ್ಟೆಂಬರ್ 7 ರಿಂದ 11ರವರೆಗೆ ನಡೆಯಲಿರುವ ಗಣೇಶ ಹಬ್ಬವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ,‘ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಗಣೇಶ ಹಬ್ಬ ಆಚರಿಸಬೇಕು. ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಸದಸ್ಯರಿಗೆ ಐ.ಡಿ ಕಾರ್ಡ್‌ಗಳನ್ನು ನೀಡಬೇಕು. ಪೊಲೀಸ್ ಸಿಬ್ಬಂದಿಗೆ ಮಂಡಳಿಯಿಂದ ಸಹಕಾರ ನೀಡಬೇಕು. ಎಲ್ಲ ಕಡೆ ನಮ್ಮ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು’ ಎಂದು ತಿಳಿಸಿದರು.

ದೊಡ್ಡ ಮಟ್ಟದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರೆ ಅಂಥ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಬಾರದು. ಲೌಡ್‌ ಸ್ಪೀಕರ್, ಡಿಜೆಗಳ ಶಬ್ದ 25 ರಿಂದ 30 ಡೆಸಿಬಲ್‌ಗಳಿಗಿಂತ ಹೆಚ್ಚು ಇರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

‘ಕಳೆದ 40 ವರ್ಷಗಳಿಂದ ಗಣೇಶ ಹಬ್ಬವನ್ನು ಬೀದರ್‌ ಜಿಲ್ಲೆಯಲ್ಲಿ ಶಾಂತಿಯುತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮಳೆಗಾಲ ಇರುವುದರಿಂದ ಗಣೇಶನ ಮೂರ್ತಿ ಕೂರಿಸುವ ಸ್ಥಳಗಳಲ್ಲಿ ನಗರಸಭೆಯಿಂದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಲೋಡ್‌ ಶೆಡ್ಡಿಂಗ್ ಆಗದಂತೆ ನೋಡಿಕೊಳ್ಳಬೇಕು. ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಿಸಬೇಕು’ ಎಂದು ಗಣೇಶ ಮಂಡಳಿಯ ಪದಾಧಿಕಾರಿಗಳು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್‌, ಡಿವೈಎಸ್ಪಿ ಶಿವನಗೌಡ ಪಾಟೀಲ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT