ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಹಿಂದೂ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿ ಪ್ರತಿಭಟನೆ

Published 1 ಜೂನ್ 2024, 9:08 IST
Last Updated 1 ಜೂನ್ 2024, 9:08 IST
ಅಕ್ಷರ ಗಾತ್ರ

ಬೀದರ್‌: ಗುರುನಾನಕ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ಸ್ಥಳೀಯ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್‌ ಹಾಗೂ ಅವರ ಮಗ ಕಾರಣನಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಸಚಿವ ರಹೀಂ ಖಾನ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಜಿಲ್ಲಾಧಿಕಾರಿ ಕಚೇರಿ ಎದುರಿನ ಮುಖ್ಯರಸ್ತೆಯನ್ನು ಬಂದ್‌ ಮಾಡಿ ಧರಣಿ ನಡೆಸಿದರು. ಬಳಿಕ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಅಮಾಯಕ ಹಿಂದೂ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಸಚಿವ ರಹೀಂ ಖಾನ್‌ ಹಾಗೂ ಅವರ ಮಗ ಕಾರಣ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳು ಜೈಶ್ರೀರಾಮ್‌ ಎಂಬ ಹಾಡಿಗೆ ನೃತ್ಯ ಮಾಡಿದರೆ ತಪ್ಪೇನೂ? ಇದೇ ರೀತಿಯ ಘಟನೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲೂ ಆಗಿತ್ತು. ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹಾಕಿದಕ್ಕೆ ಹಲ್ಲೆ‌ ನಡೆಸಲಾಗಿತ್ತು. ಎಲ್ಲ ಕಡೆ ಜಿಹಾದಿ ಶಕ್ತಿಗಳು ತಲೆ ಎತ್ತುತ್ತಿವೆ. ಹಲ್ಲೆ ನಡೆಸಿದವರು ಸುಮ್ಮನಾಗಿದ್ದರೂ ಸಚಿವ ರಹೀಂ ಖಾನ್‌, ಅವರನ್ನು ಉತ್ತೇಜಿಸಿ ಕೇಸ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನದು ನಿಜಾಮ್‌, ಮೊಘಲರ ಮನಃಸ್ಥಿತಿ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಸಚಿವ ನಾಗೇಂದ್ರ ಅವರ ಹೆಸರು ಕೇಳಿ ಬಂದಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸಿದರು.

ಬಸವಕಲ್ಯಾಣ ಶಾಸಕ ಶರಣು ಸಲಗರ್ ಮಾತನಾಡಿ, ಗುರುನಾನಕ ಕಾಲೇಜಿನಲ್ಲಿ ನಡೆದ ಘಟನೆ ಖಂಡನಾರ್ಹ. ಹಿಂದೂ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿರುವುದು ಸರಿಯಲ್ಲ. ಜೈ ಶ್ರೀರಾಮ್ ಹಾಡು ಹಾಕುವುದನ್ನು ತಡೆಯಲು ಯಾರಿಂದಲೂ ಆಗದು. ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು, ಜೈಶ್ರೀರಾಮ್ ಹೇಳುತ್ತ ಕಾಲೇಜಿಗೆ ಹೋಗಬೇಕು ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ ಮಾತನಾಡಿ, ರಹೀಂ ಖಾನ್‌ ಅವರು ನಾಲ್ಕು ಸಲ ಜನರಿಗೆ ಹುಚ್ಚು ಮಾಡಿ ಶಾಸಕರು, ಸಚಿವರಾಗಿದ್ದಾರೆ. ಆದರೆ, ಈ ರೀತಿಯ ಘಟನೆಗಳಿಗೆ ಬೆಂಬಲ ಕೊಡಬಾರದು ಎಂದರು.

ಬಿಜೆಪಿ ಮುಖಂಡರಾದ ರಾಮಕೃಷ್ಞ ಸಾಳೆ, ರೇವಣಸಿದ್ದಪ್ಪ ಜಲಾದೆ, ಪೀರಪ್ಪ ಔರಾದೆ, ಕಿರಣ್‌ ಪಾಟೀಲ, ಶಶಿಧರ ಹೊಸಳ್ಳಿ, ಬಾಬುವಾಲಿ, ಮಹೇಶ, ರಾಜಕುಮಾರ, ಗುರುನಾಥ ರಾಜಗೀರಾ, ಸತೀಶ್‌ ನೌಬಾದೆ, ಭೀಮಣ್ಣಾ ಸೊರಳ್ಳಿ, ವೀರೇಶ ಸ್ವಾಮಿ, ಹಣಮಂತ ಬುಳ್ಳಾ, ಸೋಮಶೇಖರ ಪಾಟೀಲ, ಮಹೇಶ ಪಾಲಂ ಮತ್ತಿತರರು ಪಾಲ್ಗೊಂಡಿದ್ದರು.

‘ರಹೀಂ ಖಾನ್‌ ಮಂತ್ರಿಯಾದ ನಂತರ ಗೂಂಡಾಗರ್ದಿ’

‘ರಹೀಂ ಖಾನ್‌ ಅವರು ಮಂತ್ರಿಯಾದ ನಂತರ ಬೀದರ್‌ನಲ್ಲಿ ಗೂಂಡಾಗರ್ದಿ ಹೆಚ್ಚಾಗಿದೆ’ ಎಂದು ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್‌ ಠಾಕೂರ್‌ ಆರೋಪಿಸಿದರು.

ರಾಮನ ಹಾಡು ಪಾಕಿಸ್ತಾನದಲ್ಲಿ ಹಾಕಲು ಆಗುತ್ತಾ? ಗುರುನಾನಕ ಕಾಲೇಜಿನಲ್ಲಿ ನಡೆದ ಕೃತ್ಯ ಮೇಲ್ನೋಟಕ್ಕೆ ಪೂರ್ವನಿಯೋಜಿತದಂತೆ ಕಾಣಿಸುತ್ತದೆ. ಜಿಲ್ಲಾಡಳಿತದ ಬಳಿ ಶಕ್ತಿಯಿದ್ದರೆ ಶಾಹೀನ್ ಕಾಲೇಜಿನೊಳಗೆ ಇರುವ ಮಸೀದಿ ತೆಗೆದು ತೋರಿಸಲಿ. ಹಲ್ಲೆ‌ ನಡೆಸಿದ ವೀಡಿಯೋ ಗಳಿವೆ. ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಒಳಗಾಗಿ ಹಿಂದೂ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ದಾರೆ. ಹಲ್ಲೆ‌ ನಡೆಸಿದವರನ್ನು ಕಾಲೇಜಿನಿಂದ ಹೊರಗೆ ಹಾಕುವವರೆಗೆ ಹಿಂದೂ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬಾರದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT