ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಯೊಮೆಟ್ರಿಕ್: ಮುಂಚೂಣಿಯಲ್ಲಿ ಜನವಾಡ ಶಾಲೆ

ಚಾಚೂತಪ್ಪದೆ ವ್ಯವಸ್ಥೆ ಪಾಲಿಸುತ್ತಿರುವ 15 ಶಿಕ್ಷಕರು
Published 1 ಜೂನ್ 2024, 7:25 IST
Last Updated 1 ಜೂನ್ 2024, 7:25 IST
ಅಕ್ಷರ ಗಾತ್ರ

ಜನವಾಡ: ಶಿಕ್ಷಕರ ಹಾಜರಾತಿಗೆ ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಳ್ಳುವಲ್ಲಿ ಬೀದರ್ ತಾಲ್ಲೂಕಿನ ಜನವಾಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಂಚೂಣಿಯಲ್ಲಿದೆ.

ಶಾಲಾ ಶಿಕ್ಷಣ ಇಲಾಖೆ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ಇದೀಗ ಭರದ ಸಿದ್ಧತೆ ನಡೆಸಿದೆ. ಆದರೆ, ಈ ಶಾಲೆಯಲ್ಲಿ ಆಗಲೇ ಬಯೊಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿದೆ.  ಶಾಲೆಯು 15 ತಿಂಗಳಿಂದ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬರುತ್ತಿದೆ.

ಮುಖ್ಯಶಿಕ್ಷಕರ ಪ್ರಯತ್ನದ ಫಲವಾಗಿ 2023 ರ ಜನವರಿ 23 ರಂದು ಬಯೊಮೆಟ್ರಿಕ್ ಉಪಕರಣ ಅಳವಡಿಸಿದ್ದು, ಅದಾದ 21 ದಿನಗಳ ಬಳಿಕ (ಫೆ. 13) ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಶಾ ಚಾಲನೆ ನೀಡಿದ್ದರು.

ಎಸ್‍ಡಿಎಂಸಿ, ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಪಾಲಕರು ಹಾಗೂ ತಮ್ಮ ವೈಯಕ್ತಿಕ ದೇಣಿಗೆಯ ₹ 13 ಸಾವಿರ ವೆಚ್ಚದಲ್ಲಿ ಶಾಲೆಯಲ್ಲಿ ಬಯೊಮೆಟ್ರಿಕ್ ಹಾಜರಾತಿ ಉಪಕರಣ ಅಳವಡಿಸಲಾಗಿದೆ ಎಂದು ಮುಖ್ಯಶಿಕ್ಷಕ ಬಾಬುರಾವ ಬಿರಾದಾರ ತಿಳಿಸಿದ್ದಾರೆ.

‘ಒಂದೇ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆ, ಕನ್ನಡ, ಇಂಗ್ಲಿಷ್, ಉರ್ದು ಹಾಗೂ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಗಳಿವೆ. ಹೀಗಾಗಿ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒಳಗೊಂಡಂತೆ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲು ಒಂದು ಸಾವಿರ ಹಾಜರಾತಿ ಸಾಮರ್ಥ್ಯದ ಉಪಕರಣ ಖರೀದಿಸಿ ತರಲಾಯಿತು. ಕಾರಣಾಂತರಗಳಿಂದ ನಂತರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಕರಿಗೆ ಮಾತ್ರ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು’ ಎಂದು ತಿಳಿಸಿದರು.

ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮಗಳಲ್ಲಿ 13 ಕಾಯಂ ಹಾಗೂ 2 ಅತಿಥಿ ಶಿಕ್ಷಕರು ಸೇರಿ ಒಟ್ಟು 15 ಶಿಕ್ಷಕರು ಇದ್ದಾರೆ. ಶಿಕ್ಷಕರು ಬೆಳಿಗ್ಗೆ 9.30ರಿಂದ 9.45ರ ಒಳಗಿನ ಅವಧಿಯಲ್ಲಿ ಶಾಲೆಗೆ ಬಂದ ಕೂಡಲೇ ಬಯೊಮೆಟ್ರಿಕ್ ಉಪಕರಣದಲ್ಲಿ ಹಾಜರಿ ಹಾಕುತ್ತಾರೆ. ಸಂಜೆ 4.30ರ ಶಾಲಾ ಮುಕ್ತಾಯದ ಅವಧಿ ನಂತರ ಮತ್ತೊಮ್ಮೆ ಹಾಜರಿ ಹಾಕುತ್ತಾರೆ ಎಂದು ಹೇಳುತ್ತಾರೆ.

ಫೇಶಿಯಲ್ ರೆಕಗ್ನಿಶನ್ ಸಿಸ್ಟಮ್ ಕೂಡ ಇರುವ ಕಾರಣ ಶಿಕ್ಷಕರು ಮುಖ ತೋರಿಸಿದರೆ ಸಾಕು ಬಯೊಮೆಟ್ರಿಕ್‍ನಲ್ಲಿ ಹಾಜರಾತಿ ದಾಖಲಾಗುತ್ತದೆ. ಒಂದೊಮ್ಮೆ ಫೇಶಿಯಲ್ ರೆಕಗ್ನಿಶನ್‍ನಿಂದ ಹಾಜರಿ ಸ್ವೀಕರಿಸದಿದ್ದರೆ ಉಪಕರಣಕ್ಕೆ ಬೆರಳು ಒತ್ತಿ ಹಾಜರಿ ಹಾಕಲಾಗುತ್ತದೆ ಎಂದು ಹೇಳುತ್ತಾರೆ.

ಜಿಲ್ಲೆಯಲ್ಲೇ ಶಿಕ್ಷಕರಿಗೆ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿದ ಮೊದಲ ಶಾಲೆ ಎನ್ನುವ ಹಿರಿಮೆ ತಮ್ಮ ಶಾಲೆಯದ್ದಾಗಿದೆ ಎಂದು ತಿಳಿಸುತ್ತಾರೆ.

ಸುರಕ್ಷತೆಗೆ ಸಿಸಿ ಟಿವಿ ಅಳವಡಿಕೆ

ಶಾಲೆ ಶಿಕ್ಷಕರ ಬಯೊಮೆಟ್ರಿಕ್ ಹಾಜರಾತಿಗಷ್ಟೇ ಸೀಮಿತವಾಗಿಲ್ಲ. ಮಾದರಿ ಆಗುವ ದಿಸೆಯಲ್ಲಿ ಇನ್ನೂ ಅನೇಕ ಹೆಜ್ಜೆಗಳನ್ನು ಇರಿಸಿದೆ. ಮುಖ್ಯಶಿಕ್ಷಕ ಹಾಗೂ ಪಾಲಕರ ದೇಣಿಗೆಯಿಂದ ಶಾಲೆಯ ಸುರಕ್ಷತೆಗೆ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿದ್ದು ವಿದ್ಯಾರ್ಥಿಗಳ ಜತೆ ಸಾರ್ವಜನಿಕರೂ ಪ್ರಯೋಜನ ಪಡೆಯಬಹುದಾಗಿದೆ. ಕೆಕೆಆರ್‌ಡಿಬಿಯಿಂದ ಸ್ಮಾರ್ಟ್ ಟಿವಿಗಳನ್ನು ಕೊಡಲಾಗಿದ್ದು ಸ್ಮಾರ್ಟ್ ಕ್ಲಾಸ್‍ಗಳು ನಡೆಯುತ್ತಿವೆ. ‘ಶಿಕ್ಷಕರು ಹೊರಗುಳಿಯುವುದು ತಪ್ಪಿದೆ’ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯಿಂದ ಶಾಲೆಯಲ್ಲಿ ಶಿಸ್ತು ಬಂದಿದೆ. ಶಿಕ್ಷಕರು ಸಣ್ಣ ಪುಟ್ಟ ಕಾರಣ ನೀಡಿ ಶಾಲೆಯಿಂದ ಹೊರಗುಳಿಯುವುದು ತಪ್ಪಿದೆ. ತರಗತಿಗಳು ಸಕಾಲಕ್ಕೆ ನಡೆಯುತ್ತಿವೆ. ಇಲಾಖೆ ಹಾಗೂ ಗ್ರಾಮಸ್ಥರಲ್ಲಿ ಶಾಲೆಯ ಬಗ್ಗೆ ಗೌರವವೂ ಹೆಚ್ಚಿದೆ ಎಂದು ಮುಖ್ಯಶಿಕ್ಷಕ ಬಾಬುರಾವ್ ಬಿರಾದಾರ ತಿಳಿಸುತ್ತಾರೆ. ವಿದ್ಯಾರ್ಥಿಗಳ ಮೇಲೂ ಇದರ ಪರಿಣಾಮ ಆಗಿದೆ. ಅವರಲ್ಲೂ ಶಿಸ್ತು ಸಮಯ ಪ್ರಜ್ಞೆ ಮೂಡಿದೆ. ಬಯೊಮೆಟ್ರಿಕ್ ಹಾಜರಾತಿ ಬಗ್ಗೆ ಶಿಕ್ಷಕರಾರೂ ಬೇಸರ ವ್ಯಕ್ತಪಡಿಸಿಲ್ಲ. ತಕರಾರು ಮಾಡಿಲ್ಲ. ಒಳ್ಳೆಯ ಕೆಲಸವೆಂದು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT