ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಅಭ್ಯರ್ಥಿ ಕೊಡಿಯೆಂದು ವಿಜಯೇಂದ್ರ ಕಾಲಿಗೆರಗಿದ ಔರಾದ್‌ ಶಾಸಕ ಪ್ರಭು ಚವಾಣ್‌

ಬೀದರ್‌: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
Published 29 ಜನವರಿ 2024, 12:19 IST
Last Updated 29 ಜನವರಿ 2024, 12:19 IST
ಅಕ್ಷರ ಗಾತ್ರ

ಬೀದರ್‌: ಮುಂಬರುವ ಲೋಕಸಭಾ ಚುನಾವಣೆಗೆ ಬೀದರ್‌ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಮ್ಮುಖದಲ್ಲೇ ಸೋಮವಾರ ಸ್ಫೋಟಗೊಂಡಿದೆ.

ರಾಜ್ಯ ಅಧ್ಯಕ್ಷರಿಗೆ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಔರಾದ್‌ ಶಾಸಕ ಪ್ರಭು ಚವಾಣ್‌ ಅವರು, ‘ಬೀದರ್‌ ಜಿಲ್ಲೆಗೆ ಉತ್ತಮ ಅಭ್ಯರ್ಥಿಯನ್ನು ಕೊಡಬೇಕು. ಇಡೀ ಜಿಲ್ಲೆಯ ಪಕ್ಷದ ಪರವಾಗಿ ಮನವಿ ಮಾಡುತ್ತೇನೆ. ನಾನು ನಿಮಗೆ ಕೈಜೋಡಿಸುತ್ತೇನೆ, ಕಾಲಿಗೆ ಬೀಳುತ್ತೇನೆ’ ಎಂದು ಹೇಳುತ್ತಲೇ ವಿಜಯೇಂದ್ರ ಅವರ ಕಾಲಿಗೆರಗಿ ದೀರ್ಘದಂಡ ನಮಸ್ಕಾರ ಮಾಡಿದರು. ವಿಜಯೇಂದ್ರ ಪಕ್ಕದಲ್ಲೇ ಕುಳಿತಿದ್ದ ಕೇಂದ್ರ ಸಚಿವರೂ ಆದ ಬೀದರ್‌ನ ಹಾಲಿ ಸಂಸದ ಭಗವಂತ ಖೂಬಾ ಅವರು ಇದರಿಂದ ತೀವ್ರ ಮುಜುಗರಕ್ಕೊಳಗಾದರು.

ಇದಕ್ಕೆ ಖೂಬಾ ಬೆಂಬಲಿಗರು ವೇದಿಕೆ ಬಳಿ ಬಂದು ಚವಾಣ್‌ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗಿದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪಕ್ಷದ ಹಾಲಿ, ಮಾಜಿ ಶಾಸಕರು, ಮುಖಂಡರು ವೇದಿಕೆಯ ಮೇಲಿದ್ದರು.

‘ಯಾರೂ ಕೂಡ ನನ್ನ ಪರ ಘೋಷಣೆ ಕೂಗಬೇಡಿ’ ಎಂದು ಖೂಬಾ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಒಂದು ಕಡೆ ಸಮಾರಂಭದಲ್ಲಿ ಮುಖಂಡರು ಭಾಷಣ ಮಾಡುತ್ತಿದ್ದರೆ, ಇನ್ನೊಂದು ಕಡೆ ವೇದಿಕೆಯ ಬಳಿ ಖೂಬಾ ಬೆಂಬಲಿಗರನ್ನು ಸಮಾಧಾನ ಪಡಿಸುವ ಕೆಲಸ ಕಾರ್ಯಕ್ರಮದ ಕೊನೆಯವರೆಗೂ ನಡೆದೇ ಇತ್ತು.

ಈ ಘಟನೆಯಿಂದಾಗಿ ‘ಬೀದರ್‌ ಲೋಕಸಭೆ ಕ್ಷೇತ್ರದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ’ ಎನ್ನುವುದು ಜಗಜ್ಜಾಹೀರಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಚುನಾವಣೆ ಸಿದ್ಧತೆ ಕುರಿತು ಬೀದರ್‌ ಜಿಲ್ಲಾ ಮುಖಂಡರು, ಶಾಸಕರೊಂದಿಗೆ ನಡೆಸಿದ ಆಂತರಿಕ ಸಭೆಯಲ್ಲೂ ಪ್ರಭು ಚವಾಣ್‌ ಅವರು ಖೂಬಾ ಬದಲು ಅನ್ಯರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದ್ದರು. ಬಳಿಕ ಪಕ್ಷದ ಮುಖಂಡರು ಅದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದರು. ‘ಸಭೆಯಲ್ಲಿ ಏನೂ ನಡೆದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ’ ಎಂದು ಮುಖಂಡರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೆ, ಈಗ ಬಹಿರಂಗ ಸಭೆಯಲ್ಲಿಯೇ ಚವಾಣ್‌ ಅವರು ಖೂಬಾ ಎದುರಿನಲ್ಲೇ ಅವರ ವಿರುದ್ಧ ಧ್ವನಿ ಎತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಖೂಬಾ ಕೆಲಸ ಮಾಡಿದ್ದಾರೆ ಎಂದು ಚವಾಣ್‌ ಅವರು ಆರಂಭದಿಂದಲೂ ಆರೋಪ ಮಾಡುತ್ತ ಬಂದಿದ್ದಾರೆ. ಅದನ್ನು ಖೂಬಾ ಅಲ್ಲಗಳೆದಿದ್ದಾರೆ. ಒಂದೇ ವೇದಿಕೆಯನ್ನು ಇಬ್ಬರು ಹಂಚಿಕೊಳ್ಳುತ್ತಿರಲಿಲ್ಲ. ಇಬ್ಬರ ನಡುವಿನ ಭಿನ್ನಮತ ಕೊನೆಗಾಣಿಸಲು ಹಲವು ಪ್ರಯತ್ನಗಳು ನಡೆದಿತ್ತು. ಆದರೆ, ಯಶಸ್ಸು ಸಿಕ್ಕಿಲ್ಲ. ವಿಜಯೇಂದ್ರ ಅವರು ಅಧ್ಯಕ್ಷರಾದ ನಂತರ ಎಲ್ಲವೂ ಸರಿ ಹೋಗುತ್ತದೆ ಎಂದು ಜಿಲ್ಲೆಯ ಮುಖಂಡರು ಭಾವಿಸಿದ್ದರು. ಚುನಾವಣೆಯ ಹೊಸ್ತಿಲಲ್ಲಿ ಇಬ್ಬರನ್ನು ಒಂದೇ ವೇದಿಕೆಗೆ ಕರೆ ತಂದು, ‘ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂಬ ಸಂದೇಶ ಸಾರಲು ಬಿಜೆಪಿ ಮುಂದಾಗಿತ್ತು. ಆದರೆ, ಅದು ಫಲ ಕೊಡಲಿಲ್ಲ.

ವಿಜಯೇಂದ್ರ ಮಾತಿನ ಚಾಟಿ

‘ತಾವು ಚುನಾಯಿತ ಪ್ರತಿನಿಧಿ ಆದ ನಂತರ ಬಿಜೆಪಿ ಹುಟ್ಟಿದೆ ಎಂಬ ಭಾವನೆ ಬೀದರ್‌ ಜಿಲ್ಲೆಯ ಮುಖಂಡರಿಗಿದೆ. ರಾಮಚಂದ್ರ ವೀರಪ್ಪನವರು ಅನೇಕ ಸಲ ಗೆದ್ದು ಸಂಸದರಾಗಿ, ಪಕ್ಷಕ್ಕೆ ಭದ್ರ ಬೂನಾದಿ ಹಾಕಿದ ಕ್ಷೇತ್ರವಿದು. ಅವರಿಂದ ಇಲ್ಲಿ ಈ ಪಕ್ಷ ಬೆಳೆದಿದೆ. ಅದನ್ನು ಯಾರೂ ಮರೆಯಬಾರದು. ಕಾರ್ಯಕರ್ತರು ಹಲವು ದಶಕಗಳಿಂದ ಶ್ರಮ ವಹಿಸಿ ಪಕ್ಷ ಕಟ್ಟಿ ಬೆಳೆಸಿದ್ದಾರೆ ಎನ್ನುವುದನ್ನು ಮುಖಂಡರು ಮರೆತಿದ್ದಾರೆ ಅನಿಸುತ್ತಿದೆ’ ಎಂದು ವಿಜಯೇಂದ್ರ ಚಾಟಿ ಬೀಸಿದಾಗ, ಕಾರ್ಯಕರ್ತರ ಕರತಾಡನ ಮುಗಿಲು ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT