ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಉಪ ಚುನಾವಣೆ: ಜ.16ಕ್ಕೆ ಕಾಂಗ್ರೆಸ್‌ನಿಂದ ಮೂವರ ಹೆಸರು ಅಂತಿಮ ಸಾಧ್ಯತೆ

Last Updated 9 ಜನವರಿ 2021, 15:26 IST
ಅಕ್ಷರ ಗಾತ್ರ

ಬೀದರ್: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮತ್ತೆ ಬಸವಕಲ್ಯಾಣ ಉಪ ಚುನಾವಣೆಯ ರಾಜಕೀಯ ಚಟುವಟಿಕೆ ಗರಿ ಬಿಚ್ಚಿಕೊಂಡಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಶುರುವಾಗಿದೆ.

ಬೆಂಗಳೂರಿನಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಸಲೀಂ ಅಹಮ್ಮದ್, ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಎಸ್‌.ಆರ್.ಪಾಟೀಲ, ಶಾಸಕರಾದ ಎಂ.ಬಿ.ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ರಾಜಶೇಖರ ಪಾಟೀಲ, ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯರಾದ ವಿಜಯಸಿಂಗ್, ಚಂದ್ರಶೇಖರ ಪಾಟೀಲ, ಅರವಿಂದಕುಮಾರ ಅರಳಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಸವಕಲ್ಯಾಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಪಾಲ್ಗೊಂಡಿದ್ದ ಸಭೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಬಿ.ನಾರಾಯಣರಾವ್‌ ಅವರ ಪತ್ನಿ ಮಲ್ಲಮ್ಮ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಹಿರಿಯ ಮುಖಂಡ ಬಸವರಾಜ ಬುಳ್ಳಾ, ಶಾಂತಪ್ಪ ಪಾಟೀಲ, ಶಿವರಾಜ್ ನರಶೆಟ್ಟಿ, ಆನಂದ ದೇವಪ್ಪ ಅವರ ಹೆಸರುಗಳು ಸಭೆಯಲ್ಲಿ ಪ್ರಸ್ತಾಪವಾದವು.

ಹಿಂದುಳಿದ ವರ್ಗ, ಅನುಕಂಪದ ಅಲೆ, ಜಾತಿ ಲೆಕ್ಕಾಚಾರ, ಪಕ್ಷ ನಿಷ್ಠೆ, ಆಕಾಂಕ್ಷಿಗಳ ಆರ್ಥಿಕ ಸಾಮರ್ಥ್ಯ ಕುರಿತು ಚರ್ಚೆ ನಡೆಸಲಾಯಿತು ಎನ್ನಲಾಗಿದೆ. ಪ್ರಬಲ ಆಕಾಂಕ್ಷಿಗಳು ಈಗಾಗಲೇ ಪಕ್ಷದ ವರಿಷ್ಠರ ಮೇಲೆ ಪ್ರಭಾವ ತಂದು ಟಿಕೆಟ್‌ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ, ಪಕ್ಷದ ಮುಖಂಡರು ಈವರೆಗೆ ಯಾರೊಬ್ಬರಿಗೂ ಕಾಂಗ್ರೆಸ್‌ ಟಿಕೆಟ್‌ ಕೊಡುವ ಸ್ಪಷ್ಟ ಭರವಸೆ ಕೊಟ್ಟಿಲ್ಲ.

‘ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ಬಯಸಿ 22 ಜನ ಅರ್ಜಿ ಸಲ್ಲಿಸಿದ್ದರು. ಎಲ್ಲ ಅಭ್ಯರ್ಥಿಗಳ ಜತೆ ಮೊದಲ ಸುತ್ತಿನ ಸಭೆ ನಡೆಸಿ ಏಳು ಜನರ ಹೆಸರುಗಳನ್ನು ಅಂತಿಮಗೊಳಿಸಿ ಕೆಪಿಸಿಸಿ ಆಯ್ಕೆ ಸಮಿತಿಯ ಮುಂದಿಡಲಾಗಿದೆ. ಜ. 16ರಂದು ಇನ್ನೊಂದು ಸುತ್ತಿನ ಸಭೆ ನಡೆಸಿ ನಂತರ ಇಬ್ಬರು ಅಥವಾ ಮೂವರ ಹೆಸರುಗಳನ್ನು ಆಯ್ಕೆ ಮಾಡಿ ರಾಜ್ಯ ನಾಯಕರು ದೆಹಲಿಗೆ ಕಳಿಸಿಕೊಡುವ ಸಾಧ್ಯತೆ ಇದೆ. ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹೇಳುತ್ತಾರೆ.

ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಈಗಲೂ ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ. ಮಲ್ಲಿಕಾರ್ಜುನ ಖೂಬಾ, ಸಂಜಯ ವಾಡೆಕರ್, ಸಂಜಯ ಪಟವಾರಿ, ಶರಣು ಸಲಗರ, ಅನಿಲ ಭೂಸಾರೆ, ಗುಂಡು ರೆಡ್ಡಿ ಸೇರಿ ಒಟ್ಟು 12 ಜನ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಪಕ್ಷದ ವರಿಷ್ಠರು ಟಿಕೆಟ್‌ ಬಗೆಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಚುನಾವಣೆ ಆಯೋಗ ಯಾವುದೇ ಸಂದರ್ಭದಲ್ಲೂ ಚುನಾವಣೆ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳು ಮೊದಲೇ ಟಿಕೆಟ್‌ ಘೋಷಣೆ ಮಾಡಿದರೆ ಪ್ರಚಾರಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಲಿದೆ ಎನ್ನುವುದು ಟಿಕೆಟ್‌ ಆಕಾಂಕ್ಷಿಗಳ ಹೇಳಿಕೆ. ಟಿಕೆಟ್‌ ಘೋಷಣೆ ವಿಳಂಬವಾಗುತ್ತಿರುವುದಕ್ಕೆ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT