ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಯಾಗೆ ಬಸವನ ಹುಳು ಬಾಧೆ

ಸೂಕ್ತ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲು ಕೃಷಿ ವಿಜ್ಞಾನಿಗಳ ಸಲಹೆ
Last Updated 24 ಜುಲೈ 2021, 4:38 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ವಿವಿಧೆಡೆ ಸೋಯಾ ಬೆಳೆಗೆ ಬಸವನ (ಶಂಖದ) ಹುಳುವಿನ ಬಾಧೆ ಕಂಡುಬಂದಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅನ್ಸಾರಿ ತಿಳಿಸಿದ್ದಾರೆ.

ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಪ್ರಸಕ್ತ ಹಂಗಾಮಿನಲ್ಲಿ 58,765 ಹೆಕ್ಟೇರ್‌ನಲ್ಲಿ ಸೋಯಾ ಬಿತ್ತನೆ ಮಾಡಲಾಗಿದೆ. ಈ ಬೆಳೆಗೆ ಕೆಲ ಕಡೆ ಬಸವನ ಹುಳುವಿನ ಕಾಟ ಕಂಡುಬಂದಿದ್ದು, ಸೂಕ್ತ ನಿರ್ವಹಣೆಗೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹುಳುಗಳು ಬೆಳೆಯುತ್ತಿರುವ ಗಿಡದ ಎಲೆ, ದೇಟು, ಕಾಂಡ ಹಾಗೂ ಕಾಂಡದ ತೊಗಟೆಗಳನ್ನು ಕೆರೆದು ತಿನ್ನುವುದು. ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿಯೂ ಇವುಗಳ ಬಾಧೆ ಕಾಣಬಹುದು. ಮಳೆಗಾಲದಲ್ಲಿ ನೀರಿನ ಮೂಲದ ಸುತ್ತಮುತ್ತ ಹೊಲದಲ್ಲಿರುವ ನಡೆದಾಡಲು ಬಳಸುವ ಕಟ್ಟೆಗಳು, ಓಡಾಡುವ ಸ್ಥಳ, ಕಳೆ ಕಸಗಳು ಈ ಪೀಡೆಯ ಅಡಗುದಾಣಗಳಾಗಿವೆ.

ಶಂಖದ ಹುಳು ತನ್ನ ಜೀವಿತಾವಧಿಯಲ್ಲಿ 100-500 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದ್ದು 3-5 ಸೆಂ.ಮೀ ಆಳದಲ್ಲಿ ಭೂಮಿಯ ಒಳಗಡೆ ಇಟ್ಟು ನಂತರ ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತದೆ. ಅನುಕೂಲಕರ ವಾತಾವರಣವಿದ್ದಲ್ಲಿ ಮೊಟ್ಟೆಯಿಂದ ಮರಿಗಳು ಹೊರ ಬಂದು ಜೀವಿಸುವುದನ್ನು ನೋಡುತ್ತದೆ. ಇವುಗಳಿಗೆ ಆಸರೆಯಾಗುವ ಅಡಗು ತಾಣಗಳಾದ ಹುಲ್ಲು, ಬಿದ್ದ ಕಸಕಡ್ಡಿ ತೆಗೆದು ಸ್ವಚ್ಛವಾಗಿಡಬೇಕು.

ಹೊಲದಲ್ಲಿ ಕೃಷಿ ತ್ಯಾಜ್ಯಗಳ ಗುಂಪು ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂಡುತ್ತವೆ. ಹೊಲದ ನಡೆದಾಡುವ ಕಟ್ಟೆಗಳಲ್ಲಿ ಹರಳು (ದಪ್ಪ) ಉಪ್ಪನ್ನು ಸುರಿಯಬೇಕು. ಸಂಜೆ ಅಥವಾ ಮುಂಜಾನೆ ಸಮಯದಲ್ಲಿ ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಕಲೆಹಾಕಿ ಅವುಗಳ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದು.

ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿ ಚೀಲ ಹರಡಿ ಅಥವಾ ಕೊಳೆತ ಕಸ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬ್ಲೀಚಿಂಗ್ ಪುಡಿ (8-10 ಕಿಲೊ ಗ್ರಾಂ ಪ್ರತಿ ಎಕರೆಗೆ) ಧೂಳೀಕರಿಸಿ ನಾಶಪಡಿಸಬಹುದು. ಮೆಟಾಲ್ಡಿಹೈಡ್ (2.5 ಶೇ) ಮಾತ್ರೆಗಳನ್ನು ಎಕರೆಗೆ 2. ಕಿ.ಗ್ರಾಂ ನಂತೆ ಹೊಲದಲ್ಲಿ ಎರಚಿದಾಗ ಬಸವನ ಹುಳುಗಳು ಹತೋಟಿಯಲ್ಲಿ ಬರುತ್ತವೆ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT