ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚನ್ನಬಸವ ಪಟ್ಟದೇವರು ಕನ್ನಡಿಗರ ಮನೆ ದೇವರು’: ಸಚಿವ ವಿ. ಸೋಮಣ್ಣ

Last Updated 23 ಡಿಸೆಂಬರ್ 2019, 12:10 IST
ಅಕ್ಷರ ಗಾತ್ರ

ಭಾಲ್ಕಿ: ‘ನಿಜಾಮರ ದಬ್ಬಾಳಿಕೆ, ವಿರೋಧದ ನಡುವೆ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸುವುದರ ಮೂಲಕ ಕನ್ನಡ ಭಾಷೆ ಜೀವಂತವಾಗಿರಿಸಿ, ಬಸವಾದಿ ಶರಣರ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಕನ್ನಡಿಗರ ಮನೆ ದೇವರು ಆಗಿದ್ದಾರೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ.ಡಾ.ಚನ್ನಬಸವ ಪಟ್ಟದ್ದೇವರ 130ನೇ ಜಯಂತಿ, ಭಾವೈಕ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಸುಧಾರಣೆ, ಪ್ರಗತಿಯಲ್ಲಿ ಸರ್ಕಾರಗಳಿಗಿಂತ ಮಠ-ಮಾನ್ಯಗಳ ಪಾತ್ರ ಹಿರಿದಾಗಿದೆ. ಸಮಾಜದಲ್ಲಿನ ಕತ್ತಲೆ, ಜಾತೀಯತೆ, ಮೂಢನಂಬಿಕೆ, ಮೇಲು-ಕೀಳು ಎಂಬ ಭೇದಭಾವ ತೊಡೆದು ಹಾಕಿ ಕಲ್ಯಾಣ ಸಮಾಜವನ್ನು ನಿರ್ಮಿಸಲು 12ನೇ ಶತಮಾನದಲ್ಲಿ ಬಸವಣ್ಣವನರು ಶ್ರಮಿಸಿದ್ದರೆ, 20ನೇ ಶತಮಾನದಲ್ಲಿ ಸಿದ್ಧಗಂಗಾದ ಶಿವಕುಮಾರ ಸ್ವಾಮೀಜಿ, ಚನ್ನಬಸವಪಟ್ಟದ್ದೇವರು ಅವಿರತ ಶ್ರಮಿಸಿದ್ದಾರೆ ಎಂದು ಹೇಳಿದರು.

ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ₹50 ಕೋಟಿ ನೀಡಲು ಆದೇಶಿಸಿದೆ. ಅನುಭವ ಮಂಟಪ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮಾತನಾಡಿ, ಬೇರೆ ಸರ್ಕಾರಗಳು ಮಾಡದ ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ನಾವು ಮಾಡುತ್ತೇವೆ. ಅನುಭವ ಮಂಟಪ ನಿರ್ಮಾಣ ಆದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದರು.

ಸಂಸದ ಭಗವಂತ ಖೂಬಾ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಜೀವಂತವಾಗಿರಲು ಪಟ್ಟದ್ದೇವರ ಅಭೂತಪೂರ್ವ ಕಾರ್ಯಗಳೇ ಕಾರಣ.ಲಿಂ.ಚನ್ನಬಸವ ಪಟ್ಟದ್ದೇವರು ಸ್ವತಃ ತಾವೇ ಕಲ್ಲು, ಮಣ್ಣು ಹೊತ್ತು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಿರುವುದು ಮಾದರಿ ಕಾರ್ಯ. ಸಂಸತ್ತಿನಲ್ಲಿ ಅನುಭವ ಮಂಟಪದ ಚಿತ್ರ ಅಳವಡಿಸಲು ಸ್ಪೀಕರ್ ಅನುಮತಿ ನೀಡಿದ್ದಾರೆ. ಪೌರತ್ವ ಕಾಯಿದೆ ಕುರಿತು ವಿರೋಧ ಪಕ್ಷದವರು ಅಪಪ್ರಚಾರ ನಡೆಸುತ್ತಿದ್ದು, ಜನರು ಕಿವಿಗೊಡಬಾರದು ಎಂದು ತಿಳಿಸಿದರು.

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗೊ.ರು.ಚನ್ನಬಸಪ್ಪ ನೇತೃತ್ವದ ಸಮಿತಿ ನೀಡಿರುವ ವರದಿಯಂತೆ ಅನುದಾನ ಬಿಡುಗಡೆ ಮಾಡಬೇಕು. ನಿರ್ಮಾಣಕ್ಕೆ ಅವಶ್ಯಕವಾಗಿರುವ 25 ಎಕರೆ ಭೂಮಿಯನ್ನು ನೀಡಲಾಗಿದೆ ಎಂದರು.

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಕೇಂದ್ರ, ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರ ಸ್ಥಾಪಿಸಲು 10 ಎಕರೆ ಭೂಮಿ ನೀಡಲಾಗುವುದು. ಪಟ್ಟದ್ದೇವರ ಜನ್ಮಸ್ಥಳದಲ್ಲಿ ಅಪೂರ್ಣವಾಗಿರುವ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಸರ್ಕಾರ ಬಿಡುಗಡೆ ಮಡಬೇಕು ಎಂದು ಒತ್ತಾಯಿಸಿದರು.

ಮಾನವ ಧರ್ಮ ಎಲ್ಲ ಧರ್ಮಗಳಿಗಿಂತ ಮಿಗಿಲಾಗಿದ್ದು, ಸರ್ವರೂ ಬಸವಣ್ಣನವರ ಮಾನವೀಯ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ ಹೇಳಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಕೇಶವರಾವ್ ನಿಟ್ಟೂರಕರ್ ಅವರಿಗೆ ಚನ್ನಬಸವ ಪಟ್ಟದ್ದೇವರು ಕಾಯಕ ಪ್ರಶಸ್ತಿ ನೀಡಲಾಯಿತು.

ವೈದ್ಯ ಎಸ್.ಎಸ್.ಗುಬ್ಬಿ, ಪತ್ರಕರ್ತ ಪಿ.ಎಂ.ಮಣ್ಣೂರ್, ನಿವೃತ್ತ ಎಇಇ ಪಂಡಿತರಾವ್ ಪಾಟೀಲ, ನಿವೃತ್ತ ತಹಶೀಲ್ದಾರ್ ಸುಜನಮ್ಮ, ಯಶವಂತರಾವ್ ಬಿರಾದಾರ, ಶ್ರೇಷ್ಠ ಕೃಷಿಕ ಪಂಪನಗೌಡ ರುದ್ರಗೌಡ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಪ್ರಮುಖರಾದ ಡಿ.ಕೆ.ಸಿದ್ರಾಮ, ಕಾಶಪ್ಪ ಧನ್ನೂರ, ಗುರುನಾಥ ಕೊಳ್ಳೂರ, ಧನರಾಜ ತಾಳಂಪಳ್ಳಿ, ಶಕುಂತಲಾ ಬೆಲ್ದಾಳೆ, ನೀಲಮ್ಮ ವಿ.ಕೆ.ಪಾಟೀಲ, ಬಾಲ ನ್ಯಾಯಮಂಡಳಿ ಸದಸ್ಯ ಶಶಿಧರ ಕೋಸಂಬೆ ಇದ್ದರು.

ಜಿಲ್ಲಾ ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ ಸ್ವಾಗತಿಸಿದರು. ಚಂದ್ರಕಾಂತ ಬಿರಾದಾರ, ವೀರಣ್ಣ ಕುಂಬಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT