ಸೋಮವಾರ, ಮೇ 23, 2022
30 °C

ಖಟಕಚಿಂಚೋಳಿ: ರೈತನಿಗೆ ಮೆಣಸಿನಕಾಯಿ ‘ಸಿಹಿ’

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಚಳಕಾಪುರ ಗ್ರಾಮದ ರೈತ ರಾಚಪ್ಪ ಬಾಲಕುಂದೆ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಖಾರ ಮೆಣಸಿನಕಾಯಿ ಇವರ ಬಾಳನ್ನು ಸಿಹಿಯಾಗಿಸಿದೆ.

ರೈತ ರಾಚಪ್ಪ ಬೆಳೆದ ಮೆಣಸಿನಕಾಯಿ ಹುಲುಸಾಗಿ ಬೆಳೆದಿದ್ದು ಉತ್ತಮ ಇಳುವರಿ ಬಂದಿದೆ. ಅದಕ್ಕೆ ತಕ್ಕಂತೆ ದುಬಾರಿ ಬೆಲೆಯೂ ಸಿಗುತ್ತಿದೆ. ಇದರಿಂದ ದುಪ್ಪಟ್ಟು ಪ್ರಮಾಣದಲ್ಲಿ ಆದಾಯವಾಗುತ್ತಿದೆ.

‘ಕಳೆದ ಜನವರಿಯಲ್ಲಿ ಮೆಣಸಿನಕಾಯಿ ಪ್ರತಿ 10 ಕೆ.ಜಿ.ಗೆ ₹ 500ಕ್ಕೆ ಮಾರಾಟ ಆಗಿದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಪ್ರತಿ 10 ಕೆ.ಜಿಗೆ ₹ 900ಕ್ಕೆ ಮಾರಾಟ ಆಗುತ್ತಿದೆ. ಹೀಗಾಗಿ ಕೈ ತುಂಬಾ ಆದಾಯ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

‘ನನ್ನ ಒಂದು ಎಕರೆಯಲ್ಲಿ ಮೆಣಸಿನಕಾಯಿ ಸಸಿ ನೆಡುವುದು, ಔಷಧಿ ಸಿಂಪಡಣೆ, ಕಟಾವಿಗೆ ತಗುಲಿದ ವೆಚ್ಚ ಎಲ್ಲವೂ ಸೇರಿ ₹50 ಸಾವಿರದವರೆಗೆ ಖರ್ಚಾಗಿದೆ. ಆದರೆ ಸದ್ಯ ಪ್ರತಿ ವಾರಕ್ಕೆ ಎರಡು ಬಾರಿ 50 ಕೆ.ಜಿ.ಯಂತೆ ಇಳುವರಿ ಬರುತ್ತಿದೆ. ಹೀಗಾಗಿ ಈ ಬಾರಿ ಸುಮಾರು ₹3 ಲಕ್ಷ ಆದಾಯ ಸಿಗುತ್ತಿದೆ’ ಎನ್ನುತ್ತಾರೆ ರೈತ ರಾಚಪ್ಪ.

‘ಮೆಣಸಿನಕಾಯಿ ಬೆಲೆ ಇಳಿಕೆಯಾದ ಸಮಯದಲ್ಲಿ ದೂರ ದೂರದ ಮಾರುಕಟ್ಟೆಗಳಿಗೆ ಹೋಗುತ್ತಿದ್ದೇವು. ಆದರೆ ಸದ್ಯ ಬೆಲೆ ಏರಿಕೆ ಆಗಿರುವುದರಿಂದ ವ್ಯಾಪಾರಸ್ಥರೇ ಹೊಲಕ್ಕೆ ಬಂದು ಖರೀದಿಸುತ್ತಿದ್ದಾರೆ. ಹೀಗಾಗಿ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಲಾಭ ಕಾಣುತ್ತಿದ್ದೇವೆ. ಅಲ್ಲದೇ ಮೆಣಸಿನಕಾಯಿ ಮಧ್ಯದಲ್ಲಿ ಈರುಳ್ಳಿ ಬೆಳೆದಿದ್ದು ಅದು ಕೂಡ ಕಟಾವಿಗೆ ಬಂದಿದೆ. ಹೊಲಕ್ಕೆ ಬರುವ ವ್ಯಾಪಾರಿಗಳು ಅದನ್ನು ಖರೀದಿಸಲು ಮುಂದಾಗಿದ್ದಾರೆ’ ಎಂದು ತಿಳಿಸುತ್ತಾರೆ.

‘ಪ್ರಸ್ತುತ ದಿನಗಳಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಅಲ್ಲದೇ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆದಾಡುತ್ತಿರುವವರಿಗೆ ಇವರು ಮಾದರಿಯಾಗಿದ್ದಾರೆ’ ಗ್ರಾಮದ ಸುಭಾಷ ಕೆನಾಡೆ ಹೇಳುತ್ತಾರೆ.

*
ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಿಂದ ಕಡಿಮೆ ಭೂಮಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚು ಆದಾಯ ಪಡೆಯಬಹುದು
- ಡಾ.ಮಲ್ಲಿಕಾರ್ಜುನ ನಿಂಗದಳ್ಳಿ, ಕೃಷಿ ವಿಜ್ಞಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು