ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ರೈತರಲ್ಲಿ ಆತಂಕ ಸೃಷ್ಟಿಸಿದ ಮೋಡ, ಚಳಿ

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಚಳಿ; ಬಾಳೆ, ಈರುಳ್ಳಿ ಬೆಳೆಗಳಿಗೆ ಅತಿ ಶೀತ ಕಂಟಕ
Last Updated 12 ನವೆಂಬರ್ 2020, 20:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರುವ ಕಾರಣ ಬಾಳೆ ಹಾಗೂ ಈರುಳ್ಳಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಕೆಲ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ ವರೆಗೂ ಕುಸಿದಿದ್ದರಿಂದ ಕೆಲ ಬೆಳೆಗಳಿಗೆ ಕೀಟಬಾಧೆ ಕಾಣಿಸಿಕೊಳ್ಳುವ ಸಂಭವವೂ ಹೆಚ್ಚಾಗಿದೆ.

‘ಲಾನಿನೊ’ ಪ್ರಭಾವದಿಂದಾಗಿ ಚಳಿಯ ಪ್ರಮಾಣ ಹೆಚ್ಚಾಗತೊಡಗಿದೆ. ಮೋಡ ಕವಿದ ವಾತಾವರಣ ಇದ್ದರೆ ಬೆಳೆಗಳಿಗೆ ಸಮಸ್ಯೆಯಾಗಲಿದೆ. ಆದರೆ, ಬಿಸಿಲು ಕೂಡ ಚೆನ್ನಾಗಿ ಬೀಳುತ್ತಿರುವ ಕಾರಣ ವಾತಾವರಣದಲ್ಲಿ ಸಮತೋಲನ ಸಾಧ್ಯವಾಗುತ್ತಿದೆ.

ಅತಿ ಹೆಚ್ಚು ಚಳಿ ಇದ್ದರೆ ಮೊದಲು ಬಾಳೆ ಬೆಳೆಗೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ ಇದೆ. ಬಾಳೆ ಬೆಳೆಗಾರರು ಎಚ್ಚರಿಕೆ ವಹಿಸಿ ಬೆಳೆಗಳನ್ನು ಗಮನಿಸುತ್ತಿರಬೇಕು. ಎಲೆಸುರುಳಿ ರೋಗ ಕಾಣಿಸಿಕೊಂಡರೆ ತಕ್ಷಣ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡುವುದು ಒಳಿತು ಎನ್ನುತ್ತಾರೆ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಸುನೀಲಕುಮಾರ.

ಹುಮನಾಬಾದ್‌ ಹಾಗೂ ಚಿಟಗುಪ್ಪ ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಶೀತದ ವಾತಾವರಣ, ಸದಾ ಮೋಡ ಕವಿದಾಗ ವಿಶೇಷವಾಗಿ ಕಪ್ಪು ಮಣ್ಣು ಅಥವಾ ಎರೆ ಭೂಮಿಯಲ್ಲಿ ರೋಗ ಬರುವ ಸಾಧ್ಯತೆ ಇರುತ್ತದೆ. ಪ್ರಸ್ತುತ ಎಲ್ಲಿಯೂ ಸಮಸ್ಯೆ ಕಂಡುಬಂದಿಲ್ಲ. ಆದರೂ ಕೃಷಿ ವಿಜ್ಞಾನಿಗಳು ಬೆಳೆಗಳ ಮೇಲೆ ನಿಗಾ ಇಟ್ಟಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಹಿಂಗಾರು ಬೆಳೆಗಳಾದ ಕಡಲೆ, ಜೋಳ ಹಾಗೂ ಗೋಧಿ ಬಿತ್ತನೆ ಮಾಡಲಾಗಿದೆ. ಹಿತಮಿತವಾದ ವಾತಾವರಣ ಇದೆ. ಕನಿಷ್ಠ ಉಷ್ಣಾಂಶ ಒಂದಂಕಿಗೆ ಕುಸಿಯುವ ಸಾಧ್ಯತೆ ಕಡಿಮೆ ಇರುವುದ ರಿಂದ ರೈತರು ಆತಂಕಪಡುವ ಅಗತ್ಯ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ತಿಳಿಸಿದ್ದಾರೆ.

ಬೀದರ್‌ ತಾಲ್ಲೂಕಿನ ಜನವಾಡ, ಮನ್ನಳ್ಳಿ ಹಾಗೂ ಔರಾದ್ ತಾಲ್ಲೂಕಿನ ಸಂತಪುರ ಹೋಬಳಿಯಲ್ಲಿ ಮಂಗಳವಾರ ಕನಿಷ್ಠ ತಾಪಮಾನ 7.6 ರಿಂದ 10 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೀದರ್‌, ಔರಾದ್, ಭಾಲ್ಕಿ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಚಳಿ ಆವರಿಸಿದೆ. ಜಿಲ್ಲೆಯಲ್ಲಿ ಸರಾಸರಿ 12 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಮುಂದುವರಿದಿದೆ.

ಕಳೆದ ವರ್ಷ ನವೆಂಬರ್‌ ಮೊದಲ ವಾರದಲ್ಲೇ ಮೈಕೊರೆಯುವ ಚಳಿ ಆರಂಭವಾಗಿತ್ತು. ಈ ಬಾರಿ ಎರಡನೇ ವಾರದಿಂದ ಚಳಿ ಶುರುವಾಗಿದೆ. ಕನಿಷ್ಠ ತಾಪಮಾನ 7 ರಿಂದ 12 ಡಿಗ್ರಿ ಸೆಲ್ಸಿಯಸ್‌ ಇದೆ. ನದಿ ದಂಡೆ ಗ್ರಾಮಗಳು ಹಾಗೂ ಕಬ್ಬಿನ ತೋಟ ಇರುವ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ ಒಂದಂಕಿ ಡಿಗ್ರಿ ಸೆಲ್ಸಿಯಸ್‌ ಸುತ್ತ ಸುಳಿದಾಡುತ್ತಿದೆ.

‘ಈ ವರ್ಷ ಚೆನ್ನಾಗಿ ಮಳೆಯಾಗಿದೆ. ಜಲಾಶಯ, ಬ್ಯಾರೇಜ್‌ಗಳು ಭರ್ತಿಯಾಗಿವೆ. ಕೆರೆ ಕಟ್ಟೆಗಳು ತುಂಬಿವೆ. ನದಿ ದಂಡೆ, ಕುರುಚಲು ಕಾಡು ಹಾಗೂ ಕಬ್ಬಿನ ಗದ್ದೆಗಳಲ್ಲಿ ಈಗಲೂ ಅಲ್ಪ ಪ್ರಮಾಣದಲ್ಲಿ ನೀರಿದೆ. ನಗರ ಪ್ರದೇಶದಲ್ಲಿ ಕನಿಷ್ಠ 10, 12 ಡಿಗ್ರಿ ಸೆಲ್ಸಿಯಸ್‌ ಹಾಗೂ ಹಳ್ಳಿಗಳಲ್ಲಿ ಕನಿಷ್ಠ ಉಷ್ಠಾಂಶ ಒಂದಂಕಿ ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ಇದೆ’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT