ಬೀದರ್: ‘ಪ್ರಧಾನಿ ನರೇಂದ್ರ ಮೋದಿ ಅವರು 2025 ರೊಳಗೆ ಕ್ಷಯರೋಗ ಮುಕ್ತ ಭಾರತಕ್ಕೆ ಪಣತೊಟ್ಟಿದ್ದಾರೆ. ಕ್ಷಯರೋಗ ನಿರ್ಮೂಲನೆಗೆ ಪ್ರಯತ್ನ ನಡೆಸಿರುವ ಆರೋಗ್ಯ ಇಲಾಖೆಗೆ ವಿವಿಧ ಸಂಘ-ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ 2022ರಲ್ಲಿ 3,050 ಕ್ಷಯರೋಗದ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 2,818 ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ’ ಎಂದು ತಿಳಿಸಿದರು.
‘ರಾಷ್ಟ್ರ ಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆ ಕಾರ್ಯದಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ಸಮಾಜ ಸೇವಕರು ಕ್ಷಯ ರೋಗಿಗಳನ್ನು ದತ್ತು ಪಡೆದು ಅವರ ವೈದ್ಯಕೀಯ ಹಾಗೂ ವೈದ್ಯಕೇತರ ಭತ್ಯೆಯನ್ನು ಭರಿಸಿ ಪರೋಕ್ಷವಾಗಿ ಕ್ಷಯರೋಗ ನಿರ್ಮೂಲನೆಗೆ ಸಹಕಾರ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ಕ್ಷಯ ರೋಗಿಗಳ ಬ್ಯಾಂಕ್ ಖಾತೆಗಳಿಗೆ ದಾನಿಗಳು ₹40 ಲಕ್ಷ ಜಮಾ ಮಾಡಿ ವೈದ್ಯಕೀಯ ನೆರವು ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ರತಿಕಾಂತ ಸ್ವಾಮಿ ಮಾತನಾಡಿ, ‘ಜಿಲ್ಲೆಯ 14 ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತ ಮಾಡುವ ಗುರಿ ಇದೆ. ಬರುವ ದಿನಗಳಲ್ಲಿ ಹಂತ ಹಂತವಾಗಿ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡಲಾಗುವುದು’ ಎಂದು ಹೇಳಿದರು.
ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ‘ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಕ್ಷಯ ರೋಗ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸುವ ವಿಶ್ವಾಸ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರಿಮ್ಸ್ ನೋಡಲ್ ಅಧಿಕಾರಿ ಡಾ.ಮಹೇಶ ತೊಂಡಾರೆ ಮಾತನಾಡಿ, ‘ದೇಶದಲ್ಲಿ ಪ್ರತಿ ಒಂದೂವರೆ ನಿಮಿಷಕ್ಕೆ ಒಬ್ಬ ಕ್ಷಯ ರೋಗಿ ಸಾವನ್ನಪ್ಪುತ್ತಿದ್ದಾನೆ. ಆರೋಗ್ಯ ಇಲಾಖೆ ರೋಗ ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತಿದೆ’ ಎಂದರು.
ಕ್ಷಯರೋಗದ ರೋಗಿಗಳಿಗೆ ದತ್ತು ಪಡೆದ ದಾನಿಗಳಾದ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ ದೇವೆಂದ್ರ ಹುಲಸೂರ, ಸಮಾಜ ಸೇವಕ ಶಿವಯ್ಯ ಸ್ವಾಮಿ, ಮೋಹನ ಗಾದಾ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಸುಧೀರ ರೆಡ್ಡಿ, ಗೌತಮ ಜ್ಯೋತಿ, ಸಂಜುಕುಮಾರ ಭೀಮಣ್ಣ, ಮಲ್ಲಮ್ಮ ಓಂಕಾರ, ಶಂಕರ ವಡ್ಡಿ, ರಾಜಮ್ಮ ಎಲ್ಎಚ್‌ವಿ, ಮಂದಾಕಿನಿ ಎಲ್ಎಚ್‌ವಿ, ರಾಜೇಂದ್ರಕುಮಾರ ಭೂವಿ, ಅಬ್ದುಲ್ ಕರೀಂ, ಅಶ್ವಿನಿ ಲೋಕೇಶ ಪಾಲ್ಗೊಂಡಿದ್ದರು.
ಜಾಗೃತಿ ಜಾಥಾ: ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿ ಕ್ಷಯರೋಗ ಜಾಗೃತಿ ಜಾಥಾ ನಡೆಯಿತು. ಡಿಎಚ್‌ಒ ಕಚೇರಿ ಆವರಣದಿಂದ ಹೊರಟ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ, ಹೃದ್ರೋಗ ತಜ್ಞ ಡಾ.ಯೋಗೇಶ ಕಾಮಶೆಟ್ಟಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶರಣಯ್ಯ ಸ್ವಾಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.