ಗುರುವಾರ , ಸೆಪ್ಟೆಂಬರ್ 23, 2021
22 °C
ನರೇಗಾದಲ್ಲಿ ಕೆಲಸ ಮಾಡುತ್ತಿರುವ ಪದವೀಧರರು

ಬೀದರ್ | ಕೊರೊನಾ; ಜಿಲ್ಲೆಗೆ ಮರಳಿದ 28 ಸಾವಿರ ಜನ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಿಶ್ವದಾದ್ಯಂತ ಕೊರೊನಾದ ಕರಾಳ ಛಾಯೆ ಆವರಿಸಿದ ನಂತರ ನೆರೆಯ ರಾಜ್ಯಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿರುವುದು ಮುಂದುವರಿದಿದೆ. ಸಣ್ಣ ಕೈಗಾರಿಕೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಹಾಗೂ ಕಟ್ಟಡ ಕಾರ್ಮಿಕರು ಈಗಾಗಲೇ ಊರಿಗೆ ಮರಳಿದ್ದು, ಮತ್ತೆ ನಗರ ಪ್ರದೇಶಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಮಹಾರಾಷ್ಟ್ರದ ಮುಂಬೈ, ಪುಣೆ, ಸೋಲಾಪುರ, ತೆಲಂಗಾಣದ ಹೈದರಾಬಾದ್‌ ಹಾಗೂ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಒಟ್ಟು 28 ಸಾವಿರ ಜನ ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಮೇ ಮೊದಲು 25 ಸಾವಿರ ಜನ ಹಾಗೂ ಮೇ ನಂತರ 3,000ಕ್ಕೂ ಅಧಿಕ ಜನ ಜಿಲ್ಲೆಗೆ ವಾಪಸ್‌ ಬಂದಿದ್ದಾರೆ.

ಎಲ್ಲರೂ ಸ್ಥಳೀಯವಾಗಿಯೇ ಉದ್ಯೋಗ ಹುಡುಕಲು ಶುರು ಮಾಡಿದ್ದಾರೆ. ಕೆಲವರಂತೂ ಆಗಲೇ ನರೇಗಾದಲ್ಲಿ ಹೆಸರು ನೋಂದಾಯಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,91,177 ಜನ ಜಾಬ್‌ಕಾರ್ಡ್‌ ಹೊಂದಿದ್ದಾರೆ. ಹೊರ ಜಿಲ್ಲೆಗಳಿಂದ ಬಂದ 35,819 ಮಂದಿ ಈಗಾಗಲೇ ಉದ್ಯೋಗ ಖಾತರಿಯಲ್ಲಿ ಕೆಲಸ ಪಡೆದಿದ್ದಾರೆ.

ಬಸವಕಲ್ಯಾಣ ಶಾಸಕ ಬಿ.ನಾರಾಯಣ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಮುತುವರ್ಜಿ ವಹಿಸಿ ಜಿಲ್ಲೆಗೆ ಮರಳಿರುವ ತಮ್ಮ ಕ್ಷೇತ್ರದಲ್ಲಿನ ವಲಸೆ ಕಾರ್ಮಿಕರಿಗೆ ಉದ್ಯೋಗ ಖಾತರಿ ಅಡಿಯಲ್ಲಿ ಕೆಲಸ ಕೊಡಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡುತ್ತಿದ್ದಾರೆ.

ಉದ್ಯೋಗ ಅರಸಿ ಬಂದವರಿಗೆ ಕೆಲಸ
ಬೀದರ್‌:
‘ಲಾಕ್‌ಡೌನ್‌ನಿಂದಾಗಿ ನಗರ, ಪಟ್ಟಣ ಪ್ರದೇಶಗಳಿಗೆ ಕೆಲಸಕ್ಕೆ ಹೋಗಿದ್ದ 28 ಸಾವಿರ ಜನ ತಮ್ಮ ಊರುಗಳಿಗೆ ಮರಳಿದ್ದಾರೆ. ಎಂಜಿನಿಯರ್, ಎಂಬಿಎ, ಬಿಎ, ಬಿಕಾಂ, ಐಟಿಐ ಓದಿದವರು ನರೇಗಾದಲ್ಲಿ ಕೆಲಸ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅವರ ಊರುಗಳಲ್ಲೇ ನರೇಗಾದಲ್ಲಿ ಕೆಲಸ ಕೊಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಹೇಳುತ್ತಾರೆ.

‘ಯುವಕರು ಒಂದಿಷ್ಟೂ ಸಂಕೋಚ ಪಟ್ಟುಕೊಳ್ಳದೆ ಬೀದರ್‌ ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ ಕೆರೆ ಹೂಳೆತ್ತಿದ್ದಾರೆ. ಕೆಲಸ ಮಾಡಿದ ದಿನವೇ ಅವರಿಗೆ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಕೂಲಿ ಪಾವತಿಸಲಾಗಿದೆ’ ಎನ್ನುತ್ತಾರೆ

‘ಕಷ್ಟದಲ್ಲಿ ಇರುವವರಿಗೆ ಉದ್ಯೋಗ ಕಲ್ಪಿಸಿದರೆ ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ. ಕಾಮಗಾರಿಗಳೂ ಚೆನ್ನಾಗಿ ನಡೆಯುತ್ತವೆ. ಸ್ಥಳೀಯವಾಗಿ ಅಗತ್ಯವಿರುವ ಕಾಮಗಾರಿಯನ್ನು ಕೈಗೆತ್ತಿಕೊಂಡು ಯುವಕರಿಗೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳುತ್ತಾರೆ.

ನರೇಗಾದಲ್ಲಿ ಕೆಲಸ ಮಾಡಿದ ಪದವೀಧರರು
ಬೀದರ್:
ಬೀದರ್ ತಾಲ್ಲೂಕಿನ ಕಮಠಾಣ, ಕಾಶೆಂಪೂರ, ಬಸವಕಲ್ಯಾಣದ ನೀಲಕಂಠವಾಡಿಯ 25 ಯುವಕರು ಬೆಂಗಳೂರಿನಿಂದ ಊರಿಗೆ ಮರಳಿ ನರೇಗಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಎಂಜಿನಿಯರಿಂಗ್‌, ಎಂಬಿಎ, ಬಿ.ಎಸ್ಸಿ., ಬಿಇಡಿ, ಬಿಕಾಂ, ಐಟಿಐ ಪಾಸಾದ ವಿದ್ಯಾರ್ಥಿಗಳು ಇದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಓರಿಯಂಟ್‌ ಇಂಡಿಯಾ ಕಂಪನಿ ಬಂದ್‌ ಆಯಿತು. ಹೀಗಾಗಿ ಕೆಲಸ ಕಳೆದುಕೊಂಡು ಊರಿಗೆ ಬರಬೇಕಾಯಿತು. ಯಾವುದೇ ಕೆಲಸ ಇಲ್ಲದಾಗ ನರೇಗಾದಲ್ಲಿ 30 ದಿನ ಕೆರೆ ಹೂಳೆತ್ತುವ ಕೆಲಸ ಮಾಡಿದೆ. ಅದಕ್ಕೆ ಪ್ರತಿಯಾಗಿ ₹ 8,030 ಕೂಲಿ ದೊರಕಿದೆ’ ಎಂದು ಓರಿಯಂಟ್‌ ಇಂಡಿಯಾ ಕಂಪನಿಯಲ್ಲಿ ಟೀಮ್ ಲೀಡರ್ ಆಗಿದ್ದ ಬಿಇ ಮೆಕ್ಯಾನಿಕಲ್‌ ಎಂಜಿನಿಯರ್‌ ಈರಪ್ಪ ಹೇಳುತ್ತಾರೆ.

‘ಕಂಪನಿಯಲ್ಲಿದ್ದಾಗ ₹ 22 ಸಾವಿರ ಸಂಬಳ ಬರುತ್ತಿತ್ತು. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದು ಇಷ್ಟವಿರಲಿಲ್ಲ.
ನನ್ನೊಂದಿಗೆ ಇನ್ನೊಬ್ಬ ಎಂಜಿನಿಯರ್, ಪಶು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಆನಂದ ಹಾಗೂ ಎಂಬಿಎ ಪದವಿ ಪೂರೈಸಿರುವ ಆತೀಶ್ ಸೇರಿದಂತೆ ಅನೇಕ ಜನ ಯುವಕರು ಇದ್ದರು. ನರೇಗಾದಲ್ಲಿ ಕೆಲಸ ದೊರೆತಾಗ ಮಾನಸಿಕ ಒತ್ತಡದಿಂದಲೂ ಹೊರಗೆ ಬರಲು ಸಾಧ್ಯವಾಯಿತು. ಸದ್ಯ ಆ ಕೆಲಸವೂ ಮುಗಿದಿದೆ. ಹೊಸ ಕಾಮಗಾರಿ ಶುರುವಾದರೆ ಮತ್ತೆ ನರೇಗಾದಲ್ಲಿ ಕೆಲಸ ಮಾಡುವೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು