ಬೀದರ್: ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್) ‘ಕ್ರಿಟಿಕಲ್ ಕೇರ್ ಬ್ಲಾಕ್’ (ತುರ್ತು ಚಿಕಿತ್ಸಾ ವಿಭಾಗ) ನಿರ್ಮಾಣ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಬರುವ ದಿನಗಳಲ್ಲಿ ಜಿಲ್ಲೆಯ ಜನರಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯ ತುರ್ತಾಗಿ ಲಭಿಸಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಬ್ಲಾಕ್ ತಲೆ ಎತ್ತಲಿದೆ. ಈಗಾಗಲೇ ಟೆಂಡರ್ ಅಂತಿಮಗೊಂಡಿದ್ದು, ₹17 ಕೋಟಿ ವೆಚ್ಚದಲ್ಲಿ ಹೊಸ ಬ್ಲಾಕ್ ನಿರ್ಮಾಣವಾಗಲಿದೆ.
ಹಳೆ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದ ಜಾಗದಲ್ಲಿ ಕ್ರಿಟಿಕಲ್ ಕೇರ್ ನಿರ್ಮಾಣಗೊಳ್ಳಲಿದೆ. ಶೀಘ್ರದಲ್ಲೇ ಹಳೆ ಕಟ್ಟಡದ ತೆರವು ಕಾರ್ಯ ನಡೆಯಲಿದೆ. ಅದಾದ ಬಳಿಕ ಶಂಕುಸ್ಥಾಪನೆ ನೆರವೇರಿಸಿ, ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂದೂವರೆ ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ.
ಕೊನೆ ಹಂತಕ್ಕೆ ‘ಕ್ಯಾಥ್‌ಲ್ಯಾಬ್’: ಬ್ರಿಮ್ಸ್‌ನಲ್ಲಿ ‘ಕ್ಯಾಥ್‌ಲ್ಯಾಬ್’ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಕೊನೆಯ ಹಂತದ ಕೆಲಸ ಪ್ರಗತಿಯಲ್ಲಿದೆ.
ಈಗಾಗಲೇ ಕ್ಯಾಥ್‌ಲ್ಯಾಬ್‌ಗೆ ಬೇಕಿರುವ ಅಗತ್ಯ ಯಂತ್ರಗಳು ಬಂದಿವೆ. ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಅವುಗಳನ್ನು ಅಳವಡಿಸಿ, ಸಾರ್ವಜನಿಕರಿಗೆ ಚಿಕಿತ್ಸೆ ನೀಡುವುದು ಆರಂಭವಾಗಲಿದೆ ಎಂದು ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.