ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ | ಮಳೆ ಕೊರತೆ, ಕಾಡುಪ್ರಾಣಿ ಕಾಟದಿಂದಲೂ ನಷ್ಟ

Published 23 ನವೆಂಬರ್ 2023, 4:54 IST
Last Updated 23 ನವೆಂಬರ್ 2023, 4:54 IST
ಅಕ್ಷರ ಗಾತ್ರ

ಬಸವಕಲ್ಯಾಣ: ಬರಗಾಲದಿಂದ ಅನೇಕರ ಹೊಲದಲ್ಲಿ ಬರೀ ಹುಲ್ಲು ಬೆಳೆದಿದ್ದು ಅದನ್ನು ತೆಗೆಯುವುದಕ್ಕೂ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ತೊಗರಿಗೆ ಹೂ ಬಂದರೂ ಮಳೆ ಅಭಾವದಿಂದ ಅವು ಉದುರುತ್ತಿದ್ದು ಜೋಳ, ಕಡಲೆ, ಗೋಧಿ ಇತ್ಯಾದಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಿದೆ.

ಮುಂಗಾರು ಮಳೆ ಮಾನ್ಸೂನ್ ಆರಂಭವಾದರೂ ತಿಂಗಳವರೆಗೆ ಸುರಿಯಲೇ ಇಲ್ಲ. ನಂತರ ಕೆಲಸಲ ಮಳೆ ಬಂದರೂ ಸಮರ್ಪಕವಾಗಿ ಇರಲಿಲ್ಲ. ಈ ಸಲ 34,439 ಹೆಕ್ಟೇರ್ ನಲ್ಲಿ ತೊಗರಿ ಹಾಗೂ 45,024 ಹೆಕ್ಟೇರ್ ನಲ್ಲಿ ಸೋಯಾಬಿನ್ ಬಿತ್ತಲಾಗಿತ್ತು. ಆದರೆ ಇವುಗಳ ಇಳುವರಿ ಗಮನಾರ್ಹ ಇಳಿಕೆಯಾಗಿದೆ. ಉದ್ದು, ಹೆಸರು ಮತ್ತಿತರೆ ಬೆಳೆಗಳು ಕೂಡ ಬರಲಿಲ್ಲ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಬೆಳೆದ ಈ ಬೆಳೆಗಳನ್ನು ಅಡತ್ ಗೆ ಸಾಗಿಸಿ ಬಿತ್ತನೆ ಮಾಡಿದ ಸಾಲ ತೀರಿಸಬೇಕೆಂದರೆ ಇವುಗಳ ಬೆಲೆಯೂ ಕಡಿಮೆ ಆಗಿದ್ದರಿಂದ ರೈತರಿಗೆ ಇನ್ನಷ್ಟು ಸಂಕಟ ಎದುರಾಗಿದೆ.

ಮಂಠಾಳ ಮತ್ತು ಕೊಹಿನೂರ ಹೋಬಳಿಗಳಲ್ಲಿನ ಖಾನಾಪುರ, ಘಾಟಹಿಪ್ಪರ್ಗಾ, ಇಲ್ಲಾಳ, ಬಟಗೇರಾ, ಭೋಸ್ಗಾ, ಜಾಫರವಾಡಿ, ಗುಂಡೂರ, ಉಮಾಪುರ, ಯಲ್ಲದಗುಂಡಿ ಗ್ರಾಮಗಳ ಅನೇಕ ಹೊಲಗಳಲ್ಲಿ ಮುಂಗಾರು ಬಿತ್ತನೆಯೇ ಆಗಿಲ್ಲ. ಹೀಗಾಗಿ ಕುಕ್ಕೇನ್ ಹುಲ್ಲು ಆಳೆತ್ತರಕ್ಕೆ ಬೆಳೆದು ನಿಂತಿರುವುದು ಕಾಣುತ್ತದೆ. ಮೊದಮೊದಲು ಮಳೆ ಕೈಕೊಟ್ಟಿತು. ನಂತರದಲ್ಲಾದರೂ ಜೋಳ, ಕಡಲೆ ಬೆಳೆಯಬೇಕು ಎಂದು ಯೋಚಿಸಲಾಗಿತ್ತು. ಆದರೆ ಈಗಲೂ ವರ್ಷಾಧಾರೆ ಸುರಿಯದ ಕಾರಣ ಹುಲ್ಲು ತೆಗೆದು ಹೊಲ ಹಸನು ಮಾಡಿಲ್ಲ ಎಂದು ಖಾನಾಪುರದ ರೈತ ಶಿವಪ್ಪ ಹೇಳಿದರು.

ತೊಗರಿಯ ಸಂರಕ್ಷಣೆಗಾಗಿ ಕೆಲವರು ಕೊಳವೆಬಾವಿ ಮತ್ತು ತೆರೆದ ಬಾವಿಯ ನೀರನ್ನು ಹೊಲಕ್ಕೆ ಹರಿಸುತ್ತಿದ್ದಾರೆ. ಜೋಳ, ಕಡಲೆ, ಗೋಧಿಗೂ ನೀರು ಉಣಿಸಿ ಅವುಗಳನ್ನು ಕಾಪಾಡುತ್ತಿದ್ದಾರೆ. ಆದರೆ ಕಾಡುಹಂದಿ, ಜಿಂಕೆ ಮತ್ತು ಮಂಗಗಳ ಕಾಟ ಹೆಚ್ಚಿದ್ದು ಇವು ಮೊಳಕೆಗಳನ್ನು ಹಾಳು ಮಾಡುತ್ತಿವೆ.

‘ನಮ್ಮ ಹೊಲದಲ್ಲಿ ಬಾವಿ ನೀರಿನಿಂದ ವಿವಿಧ ಹೂವುಗಳನ್ನು ಬೆಳೆದಿದ್ದೇನೆ. ಆದರೆ ಕಾಡುಹಂದಿಗಳು ನುಗ್ಗಿ ಅರ್ಧದಷ್ಟು ಹಾಳು ಮಾಡಿವೆ. ಅರಣ್ಯ ಇಲಾಖೆಯವರು ಇಂಥ ಪ್ರಾಣಿಗಳ ಉಪಟಳ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ನಾರಾಯಣಪುರದ ರಾಮಣ್ಣ ಜಮಾದಾರ ಆಗ್ರಹಿಸಿದ್ದಾರೆ.

‘ಮಧ್ಯದಲ್ಲಿ ಮಳೆ ಬರದಿದ್ದರೆ ಬಿತ್ತನೆ ನಡೆಯದೆ ಬೀಜ, ಗೊಬ್ಬರಕ್ಕೆ ವ್ಯಯಿಸಿದ ಹಣವಾದರೂ ಉಳಿಯುತ್ತಿತ್ತು. ಈಗ ಹೊಲದಲ್ಲಿ ಬೆಳೆ ಕಾಣುತ್ತಿದೆ. ಆದರೂ ಇಳುವರಿ ಏನೂ ಇಲ್ಲದಂತಾಗಿದೆ. ಸರ್ಕಾರ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ರೈತರಿಗೆ ಸಹಾಯ ಮಾಡಬೇಕು’ ಎಂದು ಪ್ರಭುಶೆಟ್ಟೆಪ್ಪ ಪಾಟೀಲ ಒತ್ತಾಯಿಸಿದ್ದಾರೆ.

ಫ್ರೋಟ್ಸ್ ಸಾಫ್ಟವೇರ್‌ನಲ್ಲಿ ಹೋಬಳಿವಾರು ನೋಂದಣಿ ವಿವರ (ಶೇಕಡಾ)

ಬಸವಕಲ್ಯಾಣ;62.29

ಮಂಠಾಳ;66.67

ಮುಡಬಿ; 71.33

ಕೊಹಿನೂರ;68.37

ರಾಜೇಶ್ವರ;62.71

ಬರಗಾಲ ಘೋಷಣೆಯಿಂದ 5 ಎಕರೆಯಷ್ಟು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ದೊರಕುವುದು ನಿಶ್ಚಿತ. ರೈತರ ಮಾಹಿತಿ ಫ್ರೂಟ್ಸ್ ಸಾಫ್ಟವೇರ್‌ನಲ್ಲಿ ಶೇ 68 ರಷ್ಟು ನೋಂದಣಿ ಆಗಿದೆ. ಉಳಿದವರೂ ಹೆಸರು ನೋಂದಣಿ ಮಾಡಬೇಕು.
ಶಾಂತಗೌಡ ಬಿರಾದಾರ, ತಹಶೀಲ್ದಾರ್
ರೈತರು ಮಳೆ ಕೊರತೆಯ ನಡುವೆ ಬಿತ್ತನೆ ಮಾಡಿದರೂ ಬೆಳೆಯೊಳಗಿನ ಕಳೆ ತೆಗೆದಿಲ್ಲ. ಹುಲ್ಲು ತೆಗೆದು ಬಿತ್ತನೆ ಕೈಗೊಳ್ಳುವುದಕ್ಕೆ ರೈತರ ಹತ್ತಿರ ಹಣ ಇಲ್ಲ. ಮುಂದೆ ಮಳೆ ಬರುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ ವಿವಿಧ ಸೌಲಭ್ಯ ನೀಡಬೇಕು.
ಸಂತೋಷ ಗುದಗೆ, ಉಪಾಧ್ಯಕ್ಷ, ಕರ್ನಾಟಕ ರೈತ ಸಂಘ
ಬರದಿಂದ ಹಾನಿಯಾದ ಪ್ರತಿ ಎಕರೆಗೆ ₹25000 ರಂತೆ ಪರಿಹಾರ ಧನ ನೀಡಬೇಕು. ಬರೀ 5 ಎಕರೆಯಷ್ಟು ಮಾತ್ರ ಪರಿಗಣಿಸದೆ ಹೆಚ್ಚಿನ ಜಮೀನಿನಲ್ಲಿ ನಷ್ಟವಾಗಿದ್ದರೂ ಸಹಾಯ ಒದಗಿಸಬೇಕು.
ವೀರೇಶ ಬೋರಗೆ, ರೈತ ಮುಖಂಡ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಹೊಲವೊಂದರಲ್ಲಿ ಮಂಗಗಳು ಗೋಧಿಯ ಮೊಳಕೆ ತಿನ್ನುತ್ತಿರುವುದು

ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಹೊಲವೊಂದರಲ್ಲಿ ಮಂಗಗಳು ಗೋಧಿಯ ಮೊಳಕೆ ತಿನ್ನುತ್ತಿರುವುದು

ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು
ಬಸವಕಲ್ಯಾಣ ತಾಲ್ಲೂಕಿನ ಖಾನಾಪುರದ ಹೊಲದಲ್ಲಿ ಬೆಳೆದ ಕುಕ್ಕೇನ ಹುಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT