ಗುರುವಾರ , ಮೇ 13, 2021
16 °C
ಮಾರಾಟವಾಗದೆ ರೈತನಿಗೆ ₹4 ಲಕ್ಷ ನಷ್ಟ

ನಾಲ್ಕು ಎಕರೆಯಲ್ಲಿ ಬೆಳೆ: ಕಲ್ಲಂಗಡಿ ಬೆಳೆಗೆ ಕರ್ಫ್ಯೂ ಸಂಕಷ್ಟ

ಬಸವರಾಜ್‌ ಎಸ್‌.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಕೋನಮೇಳ ಕುಂದಾ ಗ್ರಾಮದ ರೈತ ಉದಯಕುಮಾರ ಗದಯಪ್ಪಾ ಸುಕಾಳೆ ನಾಲ್ಕು ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಕೋವಿಡ್‌-19 ಕರ್ಫ್ಯೂನಿಂದಾಗಿ ಮಾರಾಟವಾಗದೆ ಹೊಲದಲ್ಲೇ ಕೊಳೆಯುತ್ತಿದೆ. ಕಲ್ಲಂಗಡಿ ಬೆಳೆದು ಕೈ ತುಂಬಾ ಆದಾಯ ಸಂಪಾದಿಸಬಹುದು ಎಂದುಕೊಂಡ್ಡಿದ್ದ ರೈತನ ಕಣ್ಣಲ್ಲಿ ನೀರು ತರಿಸಿದೆ.

‘ನನಗೆ ಒಟ್ಟು 4.5 ಎಕರೆ ಭೂಮಿ ಇದೆ. ತೋಟಗಾರಿಕೆ ಬೆಳೆಯಾದ ಕಲ್ಲಂಗಡಿ ಬೆಳೆದು ಕೃಷಿಯನ್ನು ಲಾಭದಾಯಕವಾಗಿಸೋಣ ಎಂದು ಜನವರಿ ತಿಂಗಳಿನಲ್ಲಿ ಬಸವಕಲ್ಯಾಣ ತಾಲ್ಲೂಕಿನ ಜಾಮನಗರದಿಂದ ಮೆಲೋಡಿ ರೋಪ್‌ ತಂದು ನಾಟಿ ಮಾಡಿದ್ದೇನೆ. ಸಮೃದ್ಧ ಬೆಳೆಯನ್ನು ಪಡೆಯಬೇಕು ಎಂದು ಮೂವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೇನೆ. ಒಟ್ಟು ₹3 ಲಕ್ಷ ಖರ್ಚಾಗಿದೆ’ ಎಂದು ರೈತ ಉದಯಕುಮಾರ ಹೇಳಿದರು.

‘ತೆರೆದ ಬಾವಿಯಲ್ಲಿ 85 ಅಡಿ ನೀರಿನ ಲಭ್ಯತೆ ಇದೆ. ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಬೆಳೆಗೆ ಉತ್ತಮ ಔಷೋಧೋಪಚಾರ, ಗೊಬ್ಬರ ಸಿಂಪಡಿಸಿದ್ದರಿಂದ ಸಮೃದ್ಧ ಬೆಳೆ ಬಂದಿದೆ. ಇನ್ನೇನು ಕಲ್ಲಂಗಡಿ ಮಾರಾಟ ಆರಂಭವಾಗಿ ಕೈ ತುಂಬಾ ಆದಾಯ ಗಳಿಸಬಹುದು ಎಂದು ಖುಷಿಯಲ್ಲಿರುವಾಗಲೇ ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ಖರೀದಿಗೆ ನಿರಾಕರಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಬೆಳೆ ನಷ್ಟದ ಬಗ್ಗೆ ತೋಟಗಾರಿಕೆ ಅಧಿಕಾರಿಗಳ ಗಮನಕ್ಕೆ ತಂದರೆ ನಾವೂ ಅಸಹಾಯಕರಿದ್ದೇವೆ ಎಂದು ಹೇಳಿ ಕೈ ಚೆಲ್ಲಿದ್ದಾರೆ. ನಾಲ್ಕು ಎಕರೆಯಲ್ಲಿ 400 ಟನ್‌ ಕಲ್ಲಂಗಡಿ ಬೆಳೆದಿದ್ದೇನೆ. ಕೆ.ಜಿ.ಗೆ ₹5ರಂತೆ ಮಾರಾಟವಾದರೂ ಕನಿಷ್ಠ ₹5 ಲಕ್ಷ ದೊರೆಯುತ್ತದೆ. ಬೇರೆಯವರ ಬಳಿ ಬಡ್ಡಿಯಿಂದ ಹಣ ತಂದಿದ್ದೇನೆ. ಈಗ ಕಣ್ಣೇದುರಿನಲ್ಲಿ ಶ್ರಮವಹಿಸಿ ಬೆಳೆದ ಬೆಳೆ ಹಾಳಾಗುತ್ತಿರುವುದನ್ನು ನೋಡಿ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿದೆ’ ಎನ್ನುತ್ತಾ ಕಣ್ಣಂಚಲ್ಲಿ ನೀರು ತಂದರು.

‘ಜನಪ್ರತಿನಿಧಿ, ಅಧಿಕಾರಿ, ಸರ್ಕಾರ ನನ್ನ ಬೆಳೆಯನ್ನು ಖರೀದಿ ಮಾಡಿ ಜನರಿಗೆ ಹಂಚಿದರೂ ನಾನು ಆರ್ಥಿಕ ನಷ್ಟದಿಂದ ಹೊರ ಬರಲು ಸಹಕರಿಸಿದಂತೆ ಆಗುತ್ತದೆ. ಹಾಳಾದ ಬೆಳೆಯನ್ನು ಹೊಲದಿಂದ ತೆಗೆಸಿ ಬೀಸಾಡಲು ಕನಿಷ್ಠ ₹50 ಸಾವಿರ ಖರ್ಚಾಗುತ್ತದೆ. ಸರ್ಕಾರ ರೈತರ ನೆರವಿಗೆ ಧಾವಿಸಿ ನಮ್ಮನ್ನು ಸಾಲದ ಶೂಲದಿಂದ ಹೊರತರಬೇಕು’ ಎಂದು ಅವರು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು