ತಹಶೀಲ್ದಾರ್‌ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ

7
ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಸಿಗದ ಜಾಗ

ತಹಶೀಲ್ದಾರ್‌ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ

Published:
Updated:
Deccan Herald

ಔರಾದ್: ತಾಲ್ಲೂಕಿನ ಬೋಂತಿಯಲ್ಲಿ ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಖಾಸಗಿ ಜಮೀನು ಮಾಲೀಕ ಅವಕಾಶ ನೀಡದ್ದರಿಂದ ಮಹಿಳೆಯ ಕುಟುಂಬದ ಸದಸ್ಯರು ಶನಿವಾರ ಇಲ್ಲಿನ ತಹಶೀಲ್ದಾರ್‌ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಬೋಂತಿಯ ಲಾಲುಬಾಯಿ ರಾಜಪ್ಪ(65) ಶುಕ್ರವಾರ ಸಂಜೆ ಮೃತಪಟ್ಟಿದ್ದರು. ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಶನಿವಾರ ಬೆಳಿಗ್ಗೆ ಖಾಸಗಿ ಜಮೀನಿನಲ್ಲಿ ಲಾಲುಬಾಯಿ ಅಂತ್ಯ ಸಂಸ್ಕಾರ ಮಾಡಲು ಮುಂದಾದಾಗ ಜಮೀನು ಮಾಲೀಕ ಆಕ್ಷೇಪ ವ್ಯಕ್ತಪಡಿಸಿ ತನ್ನ ಜಮೀನಿನಲ್ಲಿ ಶವ ಸಂಸ್ಕಾರ ಮಾಡದಂತೆ ಎಚ್ಚರಿಕೆ ನೀಡಿದರು.

ಶವ ಸಂಸ್ಕಾರಕ್ಕೆ ಜಾಗ ದೊರೆಯದ ಕಾರಣ ಲಾಲುಬಾಯಿ ಕುಟುಂಬದ ಸದಸ್ಯರು ಶವವನ್ನು ಗೂಡ್ಸ್‌ ಆಟೊದಲ್ಲಿ ಹಾಕಿಕೊಂಡು ಔರಾದ್‌ಗೆ ಬಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಬೋಂತಿಯಲ್ಲಿ ದಲಿತರು ಮೃತಪಟ್ಟರೆ ಶವಸಂಸ್ಕಾರಕ್ಕೆ ಜಾಗ ಸಿಗುತ್ತಿಲ್ಲ. ಸರ್ಕಾರ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡದ ಕಾರಣ ತೊಂದರೆ ಅನುಭವಿಸಬೇಕಾಗಿದೆ’ ಎಂದು ದಲಿತ ಮುಖಂಡ ಅಶೋಕ ದರಬಾರೆ ಹಾಗೂ ವೈಜಿನಾಥ ವಡೆಯರ್ ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಎಂ. ಚಂದ್ರಶೇಖರ ಮೃತ ಮಹಿಳೆಯ ಕುಟುಂಬದವರ ಸಮಸ್ಯೆ ಆಲಿಸಿ ಬೋಂತಿಗೆ ತೆರಳಿ ಅಲ್ಲಿನ ಸರ್ಕಾರಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಿಸಿದರು. ನಂತರ ತ್ವೇಷಮಯ ಪರಿಸ್ಥಿತಿ ತಿಳಿಗೊಂಡಿತು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !