ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’; ಸಮಸ್ಯೆಗಳ ‘ಸಂಗಮ’ದಲ್ಲಿ ಡಿ.ಸಿ ವಾಸ್ತವ್ಯ

ಕಾರ್ಯಕ್ರಮ: ಪರಿಹಾರದ ನಿರೀಕ್ಷೆಯಲ್ಲಿ ಗ್ರಾಮಸ್ಥರು
Last Updated 19 ಫೆಬ್ರುವರಿ 2021, 3:39 IST
ಅಕ್ಷರ ಗಾತ್ರ

ಕಮಲನಗರ: ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಫೆ.22ರಂದು ತಾಲ್ಲೂಕಿನ ಸಂಗಮ ಗ್ರಾಮದಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ. ಗ್ರಾಮದಲ್ಲಿ ಸಮಸ್ಯೆಗಳ ಸಂಗಮವೇ ಇದೆ.

ತಾಲ್ಲೂಕಿನ ಖೇಡ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗಮ, ಖೇಡ್, ಹುಲಸೂರು ಗ್ರಾಮಗಳು ಬರುತ್ತವೆ. ಸಂಗಮ ಗ್ರಾಮದಲ್ಲಿ 350ಕ್ಕೂ ಅಧಿಕ ಮನೆಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ.

ಹೆದ್ದಾರಿ ರಸ್ತೆ ಅಭಿವೃದ್ಧಿ, ಸಂಗಮ ಕೆರೆ ಸೀಮೆ ರಸ್ತೆ, ತಪಸ್ಯಾಳ-ಸಂಗಮ ರಸ್ತೆ, ಕೆರೆ ಹೂಳೆತ್ತುವ ಅಭಿವೃದ್ಧಿ, ಬಸ್ ನಿಲ್ದಾಣ, ಶಾಲಾ ನೋಂದಣಿ ಪಹಣಿ, ಸಂಗಮೇಶ್ವರ ಮಂದಿರಕ್ಕೆ ರಿಂಗ್ ರೋಡ್, ಪಹಣಿ ಡಬಲ್, ಆರೋಗ್ಯ ಉಪ ಕೇಂದ್ರ, ಅಂಗನವಾಡಿ ದುಸ್ಥಿತಿ, ನೀರಿನ ಸಮಸ್ಯೆ, ಮನೆ ಮನೆಗಳಿಗೆ ಇಲ್ಲಿಯವರೆಗೂ ನಲ್ಲಿ ನೀರು ಸಿಗುತ್ತಿಲ್ಲ ಎಂದು ನಿವಾಸಿಗಳಾದ ಮಲ್ಲಿಕಾರ್ಜುನ ದುಬಲಗುಂಡೆ, ಶ್ರೀಮಂತ ಬಿರಾದಾರ, ಗೌತಮ ತಿಳಿಸುತ್ತಾರೆ.

ರಸ್ತೆಗಳಲ್ಲಿ ಚರಂಡಿ ನೀರು ಹರಿಯುತ್ತಿದ್ದರಿಂದ ಚರಂಡಿ ನೀರೆ ದಾಟಿಕೊಂಡೇ ಗ್ರಾಮಸ್ಥರು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇಂಗುಗುಂಡಿ ನಿರ್ಮಿಸಲು ಅವಕಾಶ ಇದ್ದರೂ ಈ ಬಗ್ಗೆ ಗ್ರಾಮ ಪಂಚಾಯಿತಿ ಆಡಳಿತ ವರ್ಗ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದರೂ ಪರಿಹಾರಗೊಳ್ಳುತ್ತಿಲ್ಲ.ಜೆಸ್ಕಾಂ, ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ತಾಣ ಸಮಸ್ಯೆಗಳು ಸಾಕಷ್ಟಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಪ್ರಚಾರದ ಕೊರತೆ

ಜಿಲ್ಲಾಧಿಕಾರಿ ವಾಸ್ತವ್ಯ ಮಾಡುವ ಬಗ್ಗೆ ಹುಲಸೂರ, ಸಾವಳಿ, ತಪಸ್ಯಾಳ, ಬಸನಾಳ, ಠಾಣಾಕುಶನೂರು ಗ್ರಾಮಗಳಲ್ಲಿ ಪ್ರಚಾರ ಮಾಡುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಗ್ರಾಮೀಣ ಭಾಗದಲ್ಲಿ ರಾಶಿಗಳು ನಡೆಯುತ್ತಿದ್ದರಿಂದ ರೈತರು ಅದರಲ್ಲಿ ನಿರತರಾಗಿದ್ದಾರೆ. ಖೇಡ್ ಮತ್ತು ಸಂಗಮ ಮಾಂಜ್ರಾ, ದೇವನದಿ ನಾಲಾ ದಡದಲ್ಲಿವೆ. ಹೀಗಾಗಿ ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದು ಪರಿಹಾರ ಸಿಕ್ಕಿಲ್ಲ. ಪರಿಹಾರ ಎಷ್ಟು ನೀಡಲಾಗಿದೆ ಎಂಬ ಮಾಹಿತಿ ಸಿಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅರವಿಂದಕುಮಾರ ಸಾವಳೆ ದೂರುತ್ತಾರೆ.

ಬಿದ್ದ ಮನೆಗೆ ಪರಿಹಾರ ಇಲ್ಲ

ಈಚೆಗೆ ಸುರಿದ ಭಾರಿ ಮಳೆಗೆ ಕಮಲನಗರ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸುಮಾರು 40ಕ್ಕೂ ಅಧಿಕ ಮನೆಗಳು ಬಿದ್ದಿವೆ.

ಮನೆ ಬಿದ್ದು ಹಲವು ತಿಂಗಳುಗಳು ಕಳೆದರೂ ಈವರೆಗೂ ಪರಿಹಾರ ಹಣ ಕೈಸೇರಿಲ್ಲ ಎಂಬುದು ಮನೆ ಕಳೆದುಕೊಂಡವರ ನೋವಾಗಿದೆ.

ಶಾಲೆಯಲ್ಲಿ ವಾಸ್ತವ್ಯದ ವ್ಯವಸ್ಥೆ

ಸಂಗಮ ಗ್ರಾಮದ ಹುಲ್ಲುಗಾವಲು ಪ್ರದೇಶದಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರು ಕೊಠಡಿಗಳಿದ್ದು, ಮುಖ್ಯಗುರು ಕೋಣೆಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಮಲಗುವ ವ್ಯವಸ್ಥೆ ಮಾಡಲಾಗುತ್ತಿದೆ. ವಿದ್ಯುತ್, ಫ್ಯಾನ್ ಸೌಲಭ್ಯ ಇದೆ.

ಗ್ರಾಮದ ಹೊರಭಾಗದಲ್ಲಿ ಹಳೆಯ ಶೌಚಾಲಯ ಬಳಸಲು ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಹೈಟೆಕ್ ಶೌಚಾಲಯ ಕಾಮಗಾರಿ ನಡೆಯುತ್ತಿದೆ. ಶಾಲೆ, ಅಂಗನವಾಡಿ ಸುತ್ತಲೂ ಸ್ವಚ್ಛತೆ ಕಾರ್ಯ ಕೈಗೊಂಡು ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಗಿದೆ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಪೂರ್ಣ ನಿಗಾವಹಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT