ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‍ಎಸ್‌ಕೆ ಪುನಶ್ಚೇತನಕ್ಕೆ ಸಿಎಂ ಬಳಿ ನಿಯೋಗ

Last Updated 23 ಫೆಬ್ರುವರಿ 2021, 14:09 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧ್ಯಕ್ಷತೆಯಲ್ಲಿ ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಪುನಶ್ಚೇತನ ನೀಡುವ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಹುಮನಾಬಾದ್ ತಾಲ್ಲೂಕಿನ ರೈತರಿಗೆ ಕಬ್ಬು ಪೂರೈಸಲು ಕಾರ್ಖಾನೆ ಇಲ್ಲದಂತಾಗಿದೆ. ಯಡಿಯೂರಪ್ಪ ಅವರು ₹ 100 ಕೋಟಿಯಾದರೂ ಕೊಟ್ಟು ಕಾರ್ಖಾನೆ ಆರಂಭಿಸುತ್ತೇವೆ ಎಂದಿದ್ದರು. ಇಂದಿಗೂ ಕಾರ್ಖಾನೆ ಆರಂಭವಾಗಿಲ್ಲ. ಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲ. ರೈತರು ಕಬ್ಬಿನ ಬಾಕಿ ಹಣಕ್ಕಾಗಿ ಪರದಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾರ್ಖಾನೆಗೆ ₹ 20 ಕೋಟಿ ಕೊಡಲಾಗಿದೆ. ಬಿಜೆಪಿ ಸರ್ಕಾರ ಯಾವುದೇ ರೀತಿಯ ಹಣಕಾಸಿನ ನೆರವು ನೀಡಿಲ್ಲ. ಕಾರ್ಖಾನೆಯಲ್ಲಿರುವ ಸಕ್ಕರೆ ಮಾರಾಟ ಮಾಡಿಯಾದರೂ ರೈತರ ಬಾಕಿ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ಸಚಿವ ಪ್ರಭು ಚವಾಣ್ ಮಾತನಾಡಿ, ‘ಜಿಲ್ಲೆಯ ದೊಡ್ಡ ಕಾರ್ಖಾನೆಯಾದ ಬಿಎಸ್‌ಎಸ್‌ಕೆ ಉಳಿಯಬೇಕು ಎನ್ನುವುದು ನಮ್ಮ ಆಶಯವೂ ಆಗಿದೆ. ಕಾರ್ಖಾನೆ ಪುನಶ್ಚೇತನಕ್ಕಾಗಿ ಎಲ್ಲ ಶಾಸಕರು ಸೇರಿ ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಿ ಅವರಿಗೆ ಮನವರಿಕೆ ಮಾಡೋಣ’ ಎಂದರು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿ, ‘ಕಾರ್ಖಾನೆ ಆರಂಭಿಸಲು ಅನೇಕ ತಾಂತ್ರಿಕ ಸಮಸ್ಯೆಗಳಿವೆ. ಬಾಯ್ಲರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಯಾಗಿಲ್ಲ. ಕಾರ್ಮಿಕರಿಗೆ ವೇತನ ಕೊಡಬೇಕಿದೆ. ಕಾರ್ಮಿಕರ ಇಎಸ್ಐ, ಪಿಎಫ್ ಕಟ್ಟಿಲ್ಲ. ಕಾರ್ಖಾನೆ ಆರಂಭಿಸಲು ಕನಿಷ್ಠ ₹ 18.30 ಕೋಟಿ ಬೇಕಾಗಲಿದೆ’ ಎಂದು ತಿಳಿಸಿದರು.

‘ಕಾರ್ಖಾನೆಯಲ್ಲಿರುವ ಸಕ್ಕರೆ ಮಾರಾಟದಿಂದ ₹94 ಲಕ್ಷ ಬರಬಹುದು. ಸಕ್ಕರೆಗೆ ಉತ್ತಮ ಬೆಲೆ ಬಂದರೆ ಹೆಚ್ಚು ಹಣ ದೊರಕಲಿದೆ. ಪ್ರಸ್ತುತ ಸರಿಯಾದ ಬೆಲೆ ಸಿಗುತ್ತಿಲ್ಲ’ ಎಂದು ಸಭೆಯ ಗಮನಕ್ಕೆ ತಂದರು.

‘ಸಕ್ಕರೆ ಮಾರಾಟದ ಬಳಿಕ ಮೊದಲು ರೈತರಿಗೆ ಹಣ ನೀಡಬೇಕು. ನಂತರ ಕಾರ್ಮಿಕರ ವೇತನ ಪಾವತಿಸಬೇಕು’ ಎಂದು ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದರು.

‘ಜಟಿಲ ಸಮಸ್ಯೆಗಳು ಕಾರ್ಖಾನೆಯನ್ನು ಸುತ್ತಿಕೊಂಡರೂ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ.
ಇದು ಸಮಂಜಸವಲ್ಲ. ಬಿಎಸ್ಎಸ್‌ಕೆಗೆ ಚುನಾವಣೆ ನಡೆಸದಂತೆ ಒಮ್ಮತದ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಪ್ರಸಾವ ಕಳಿಸೋಣ’ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥರಾವ್‌ ಮಲ್ಕಾಪುರೆ ಮನವಿ ಮಾಡಿದರು. ಅದಕ್ಕೆ ಎಲ್ಲ ಶಾಸಕರು ಸಹಮತ ವ್ಯಕ್ತಪಡಿಸಿದರು.

‘ಕಲಬುರ್ಗಿ ಹೈಕೋರ್ಟ್‌ ಪೀಠ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಹೀಗಾಗಿ ಚುನಾವಣೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸರ್ಕಾರಕ್ಕೆ ಕಳಿಸಲಾಗುವುದು. ಸರ್ಕಾರ ಚುನಾವಣೆ ಬೇಡ ಎಂದು ನಿರ್ದೇಶನ ನೀಡಿದರೆ ಚುನಾವಣೆ ರದ್ದುಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ, ಜಿ.ಪಂ. ಸಿಇಒ ಜಹೀರಾ ನಸೀಮ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಇದ್ದರು.

ರೈತರ ಕಬ್ಬಿನ ಬಾಕಿ ಪಾವತಿ
ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ಪ್ರತಿ ಟನ್‌ ಕಬ್ಬಿಗೆ ₹ 2400 ಬೆಲೆ ನಿಗದಿ ಮಾಡಲಾಗಿದೆ. ಸಭೆಯಲ್ಲಾದ ತೀರ್ಮಾನದ ಪಾಲನೆ ಆಗುತ್ತಿಲ್ಲ. ಕೆಲ ಕಾರ್ಖಾನೆಗಳು ರೈತರಿಗೆ ₹ 1,400, ₹1,500 ಪಾವತಿ ಮಾಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದರು.
‘ಹಣದ ಕೊರತೆಯಾದರೆ ಸರ್ಕಾರ ರೈತರ ಖಾತೆಗಳಿಗೆ ಕಬ್ಬಿನ ಬಾಕಿ ಪಾವತಿಸಬೇಕು. ಬಾಕಿ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT