ಬೀದರ್: ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಹಾಸ್ಟೆಲ್‌ನಲ್ಲಿರುವ ದಲಿತರ ಹೆಣ್ಣು ಮಕ್ಕಳನ್ನು ರಸ್ತೆಗೆ ನಿಲ್ಲಿಸಿ, ಮಾನವ ಸರಪಳಿ ನಿರ್ಮಿಸಿ ಮಾನವ ಹಕ್ಕುಗಳ ಹರಣ ಮಾಡಿದೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಹಾಸ್ಟೆಲ್, ಶಾಲೆಗಳಿಂದ ಮಕ್ಕಳನ್ನು ಕರೆದೊಯ್ದು ರಸ್ತೆಗೆ ನಿಲ್ಲಿಸಿದ್ದಾರೆ. ನಿಜವಾಗಲೂ ಪ್ರಜಾಪ್ರಭುತ್ವದ ಬಗ್ಗೆ ಗೌರವವಿದ್ದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದೊಯ್ಯಬೇಕಿತ್ತು ಎಂದು ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹಿಂದೆ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಕಾರ್ಯಕ್ರಮ ಹೆಸರಲ್ಲಿ ₹20 ಕೋಟಿ ಖರ್ಚು ಮಾಡಿದೆ. ಈಗ ಮಾನವ ಸರಪಳಿ ನಿರ್ಮಿಸಲು ಪುನಃ ₹20 ಕೋಟಿ ವೆಚ್ಚ ಮಾಡಿದೆ. ಇದೆಲ್ಲ ದುಡ್ಡು ಖರ್ಚು ಮಾಡುವ ಕಾರ್ಯಕ್ರಮ. ಇದರಲ್ಲೂ ದುಡ್ಡು ಹೊಡೆದಿದ್ದಾರೆ. 1975ರಲ್ಲಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದರು. ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಮೇಲೆ ಗೌರವ ಇಲ್ಲ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡಿರಲಿಲ್ಲ. ಅವರ ಕೈಯಲ್ಲಿ ಬೈಬಲ್ ಇತ್ತು ಎಂದು ಆರೋಪಿಸಿದರು.
‘ಮಲ್ಲಿಕಾರ್ಜುನ ಖರ್ಗೆ ಅವರು ನಿಜವಾಗಲೂ ಎಐಸಿಸಿ ಅಧ್ಯಕ್ಷರಾಗಿದ್ದರೆ, ಗಾಂಧಿ ಕುಟುಂಬದ ಮರ್ಜಿಯಲ್ಲಿ ಇಲ್ಲವಾದರೆ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳಿಕೆ ಕೊಟ್ಟಿರುವ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷ ಉಚ್ಚಾಟನೆಗೊಳಿಸಬೇಕು. ಇಲ್ಲದಿದ್ದರೆ ನೀವು ಗಾಂಧಿ ಕುಟುಂಬದ ವಾಚ್‌ಮೆನ್ ಆಗುತ್ತೀರಿ’ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ರಾಹುಲ್ ಗಾಂಧಿ ಮಾದಕ ವ್ಯಸನಿಯಂತೆ ಮಾತನಾಡುತ್ತಾರೆ ಎಂದು ಜನ ಹೇಳುತ್ತಿದ್ದಾರೆ. ನೀವು ಮಾದಕ ವ್ಯಸನಿಯೇ ಎಂದು ಪ್ರಶ್ನಿಸಿದ ನಾರಾಯಣಸ್ವಾಮಿ, ಅಮೆರಿಕಕ್ಕೆ ಹೋದರೆ ರಾಹುಲ್ ಗಾಂಧಿ ತಲೆ ತಿರುಗುತ್ತದೆಯೇ? ಬೇರೆ ದೇಶದಲ್ಲಿ ಕುಳಿತು ಭಾರತಾಂಬೆಯ ಬಟ್ಟೆ ಕಳಚುವ ಕೆಲಸ ರಾಹುಲ್ ಗಾಂಧಿ ಮಾಡಿದ್ದಾರೆ. ಭಾರತವನ್ನು ಎಳೆ ಎಳೆಯಾಗಿ ಅಪಮಾನ ಮಾಡಿದ್ದಾರೆ. ಭಾರತ ದೇಶ ಹೇಗೆ ಕಟ್ಟಬೇಕೆಂದು ಮೋದಿ ತೋರಿಸಿಕೊಡುತ್ತಿದ್ದಾರೆ. ಹಿಂದೊಮ್ಮೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ತುರ್ತು ಪರಿಸ್ಥಿತಿ ಕುರಿತು ಅಮೆರಿಕದಲ್ಲಿ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ನಾನು ನನ್ನ ದೇಶದ ವಿಚಾರ ವಿದೇಶಿ ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿದ್ದರು. ಅದರ ತಿಳಿವಳಿಕೆಯೂ ರಾಹುಲ್ ಗಾಂಧಿಯವರಿಗೆ ಇಲ್ಲ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಅವರ ಮುತ್ತಜ್ಜ ಪಂಡಿತ್ ಜವಾಹರಲಾಲ್ ನೆಹರೂ, ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ ಕೂಡ ಮೀಸಲಾತಿಯನ್ನು ವಿರೋಧಿಸಿದ್ದರು. ಈಗ ಅದನ್ನೇ ರಾಹುಲ್ ಗಾಂಧಿ ಮಾಡಿದ್ದಾರೆ. ಕಾಂಗ್ರೆಸ್ಸಿಗರು ದಲಿತರು, ಹಿಂದುಳಿದವರ ವಿರೋಧಿಗಳು ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.