ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

83 ಮಂದಿಗೆ ಉಚಿತ ಕನ್ನಡಕ ವಿತರಣೆ

Last Updated 20 ಜನವರಿ 2021, 13:35 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಚಿದ್ರಿಯಲ್ಲಿ ಇರುವ ಶಾಸಕ ರಹೀಂಖಾನ್ ಅವರ ಫಾರ್ಮ್‍ಹೌಸ್‍ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕೌಶಲ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 83 ಜನ ಬಿದ್ರಿ ಕಲಾವಿದರಿಗೆ ಉಚಿತ ಕನ್ನಡಕ ವಿತರಿಸಲಾಯಿತು.

ಡಿಸೆಂಬರ್ 18 ಮತ್ತು 19 ರಂದು ನಗರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 210 ಜನ ಬಿದ್ರಿ ಕಲಾವಿದರ ಉಚಿತ ನೇತ್ರ ತಪಾಸಣೆ ಮಾಡಲಾಗಿತ್ತು. ಈ ಪೈಕಿ ದೃಷ್ಟಿ ದೋಷ ಕಂಡು ಬಂದ 83 ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ ಎಂದು ಕನ್ನಡಕ ವಿತರಿಸಿ ಮಾತನಾಡಿದ ರೂಹಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಕಾರ್ಯದರ್ಶಿ ಅಜಿಜ್ ಖಾನ್ ಹೇಳಿದರು.

ಶಿಬಿರದಲ್ಲಿ ವೈದ್ಯರು ನೀಡಿದ ಸಲಹೆ ಮೇರೆಗೆ ಈಗಾಗಲೇ 10 ಜನ ಬಿದ್ರಿ ಕಲಾವಿದರು ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಕೌಶಲ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಆಡಳಿತ, ಶಾಸಕ ರಹೀಂಖಾನ್, ಬೆಂಗಳೂರಿನ ಸಂಕಾರ ನೇತ್ರ ಆಸ್ಪತ್ರೆ, ರೂಹಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಹಾಗೂ ಬಿದ್ರಿ ಹ್ಯಾಂಡಿಕ್ರಾಫ್ಟ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಿಂದ ಬಿದ್ರಿ ಕಲಾವಿದರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಕಣ್ಣು ಮಾನವನ ಅತ್ಯಂತ ಮಹತ್ವದ ಅಂಗವಾಗಿದೆ. ಕಣ್ಣಿದ್ದರೆ ಮಾತ್ರ ಜಗತ್ತಿನ ಸೌಂದರ್ಯ ಕಾಣಬಹುದಾಗಿದೆ. ಹೀಗಾಗಿ ಪ್ರತಿಯೊಬ್ಬರು ನೇತ್ರ ಆರೋಗ್ಯ ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಅತಿಸೂಕ್ಷ್ಮ ಬಿದ್ರಿ ಕುಸುರಿ ಕಲೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದರು ಕಣ್ಣಿನ ಏನೇ ಸಮಸ್ಯೆ ಕಂಡು ಬಂದರೂ ತಕ್ಷಣ ನೇತ್ರ ತಜ್ಞರನ್ನು ಭೇಟಿ ಮಾಡಬೇಕು ಎಂದು ಸಲಹೆ ಮಾಡಿದರು.

ರಾಜ್ಯ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭ ಅವರು ಜಿಲ್ಲೆಯ ಬಿದ್ರಿ ಕಲಾವಿದರ ಬೇಡಿಕೆಗೆ ಸ್ಪಂದಿಸಿ ಶಿಬಿರ ಸಂಘಟಿಸಿದ್ದಾರೆ. ಶಿಬಿರದಲ್ಲಿ ಕಲಾವಿದರ ಉಚಿತ ನೇತ್ರ ತಪಾಸಣೆ ಮಾಡಿದ್ದು, ಕನ್ನಡಕವನ್ನೂ ಉಚಿತವಾಗಿ ಕೊಡಲಾಗಿದೆ. ನೇತ್ರ ಸಮಸ್ಯೆ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಸಹ ಮಾಡಲಾಗುತ್ತಿದೆ ಎಂದು ರಾಜ್ಯ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಅಧಿಕಾರಿ ಲಕ್ಷ್ಮಿಕಾಂತ ಶಂಕರರಾವ್ ತಿಳಿಸಿದರು.

ಬಿದ್ರಿ ಹ್ಯಾಂಡಿಕ್ರಾಫ್ಟ್ ಡಾಟ್ ಕಾಂ ಅಧ್ಯಕ್ಷ ಎಂ.ಡಿ. ಸಲಿಮೊದ್ದಿನ್ ಮಾತನಾಡಿದರು. ಮುಖಂಡ ಮೆಹಮೂದ್‍ಖಾನ್ ದುರಾನಿ, ವಜಾಹತ್ ಅಲಿ, ಅಬ್ದುಲ್ ಸಮದ್, ಮತಿನ್, ಜಕಿ, ರೆಹಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT