ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಸಲ್ಲ: ಸೋಮನಾಥ ಯಾಳವಾರ ಅಭಿಮತ

ಜಿಲ್ಲಾ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸೋಮನಾಥ ಯಾಳವಾರ ಅಭಿಮತ
Last Updated 29 ಫೆಬ್ರುವರಿ 2020, 13:08 IST
ಅಕ್ಷರ ಗಾತ್ರ

ಬೀದರ್‌: ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಜನ ವಿರೋಧಿಯ ಎಲ್ಲ ವ್ಯವಸ್ಥೆಗಳನ್ನು ಸೃಜನಶೀಲ ಮನಸ್ಸುಳ್ಳವರು ಸಾಹಿತ್ಯದ ಮೂಲಕ ಪ್ರತಿಭಟಿಸಬೇಕು’ ಎಂದು ಜಿಲ್ಲಾ 18ನೇಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸೋಮನಾಥ ಯಾಳವಾರ ಮನವಿ ಮಾಡಿದರು.

ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ’ ಎಂದು ತಿಳಿಸಿದರು.

‘ವಾಟ್ಸ್‌ಆ್ಯಪ್ ಫೇಸ್‌ಬುಕ್‌ಗಳಲ್ಲಿ ದೇಶ, ಸಮಾಜ, ಮಾನವನ ಹಿತ ಚಿಂತನೆಯ ಬರಹಗಳು ಮೂಡಿ ಬರಬೇಕು. ಇದರಿಂದ ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳಲು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬೀದರ್ ಜಿಲ್ಲೆಯ ಕಲಾವಿದರಿಗೆ, ಸಾಹಿತಿಗಳಿಗೆ ರಾಜ್ಯದಲ್ಲಿ ಪ್ರಚಾರ ಸಿಗುವಂತೆ ಹಾಗೂ ಜಿಲ್ಲೆಯ ಸಾಹಿತ್ಯಿಕ ಕೃತಿಗಳು ಎಲ್ಲೆಡೆ ಪಸರಿಸುವಂತೆ ಸಂಘಟನಾತ್ಮಕ ಪ್ರಯತ್ನ ಮಾಡಬೇಕು. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಬರಹಗಾರರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದರು.

‘ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಮೂಲಬೇರಾಗಿದೆ. ಅಖಿಲ ಭಾರತ ಹಾಗೂ ಜಿಲ್ಲಾ ಮಟ್ಟದ ಸಮ್ಮೇಳನಗಳಲ್ಲಿ ಪ್ರತಿ 3 ವರ್ಷಕ್ಕೊಮ್ಮೆಯಾದರೂ ವಚನ ಸಾಹಿತ್ಯ ಸಮ್ಮೇಳನ ಜರುಗಬೇಕು. ಪ್ರತಿ ವರ್ಷ ಬೀದರ್‌ ಉತ್ಸವ ಹಾಗೂ ಬಸವ ಉತ್ಸವ ನಡೆಯಬೇಕು’ ಎಂದು ಹೇಳಿದರು.

‘ಈಗ ಬೀದರ್‌ನಿಂದ ನಾಗರಿಕ ವಿಮಾನಯಾನ ಆರಂಭವಾಗಿದ್ದು, ವಿಮಾನ ಸಂಚಾರ ವಿಸ್ತರಣೆಯಾಗಬೇಕು. ಹುಮನಾಬಾದ್ ಮಾರ್ಗವಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ರೈಲು ಸಂಚಾರ ಶುರುವಾಗಬೇಕು. ರಾಜ್ಯ ಸರ್ಕಾರದ ಅಕಾಡೆಮಿಗಳಲ್ಲಿ ಬೀದರ್ ಜಿಲ್ಲೆಗೆ ಪ್ರಾಧಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೃಷಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಾಗಬೇಕು. ಕೃಷಿಗೆ ಸಂಬಂಧಿಸಿದ ತಂತ್ರಾಂಶಗಳು ಕನ್ನಡಕ್ಕೆ ಅನುವಾದವಾಗಬೇಕು. ಆಗಲೇ ಅದು ಕೃಷಿಕರಿಗೆ ತಲುಪಲು ಸಾಧ್ಯ. ಸ್ಥಳೀಯವಾಗಿ ಕೃಷಿ ಮಾರುಕಟ್ಟೆ ಇರಬೇಕು. ರೈತರ ಉತ್ಪನ್ನಗಳಿಗೆ ಯೋಗ್ಯಬೆಲೆ ಸಿಗಬೇಕು’ ಎಂದು ಹೇಳಿದರು.

‘ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಆಡಳಿತ ಯಂತ್ರ, ಪಾಲಕರು, ಜನಪ್ರತಿನಿಧಿಗಳು ಹಾಗೂ ಶಿಕ್ಷಕ ವೃಂದದವರು ಆಸಕ್ತಿ ವಹಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯ ಪ್ರತಿಷ್ಠಿತ ಸಂಘ-ಸಂಸ್ಥೆಗಳು, ಉದ್ದಿಮೆದಾರರು, ಸಮಾಜ ಸೇವಕರು ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳನ್ನು ದತ್ತು ಪಡೆದು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಕನ್ನಡದ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾವಲು ಸಮಿತಿಗಳು ಇನ್ನಷ್ಟು ಸಶಕ್ತವಾಗಿ ಕಾರ್ಯನಿರ್ವವಹಿಸಬೇಕು’ ಎಂದು ಹೇಳಿದರು.

ಚೆನ್ನವೀರ ಕಣವಿ ಅವರ ಕವನ ವಾಚನದೊಂದಿಗೆ ಭಾಷಣ ಆರಂಭಿಸಿದ ಅವರು, ಕವಿಪುಂಗವರನ್ನು, ಬಸವಾದಿ ಶರಣರನ್ನು, ಕನ್ನಡದ ದಿಗ್ಗಜ ಸಾಹಿತಿಗಳನ್ನು ಸ್ಮರಿಸಿದರು.
‘ಜ್ಞಾನದ ಜ್ಯೋತಿಗೆ ಭಕ್ತಿಯ ತೈಲವೆರೆದು ಕಲ್ಯಾಣದ ಪ್ರಣತೆಗೆ ಕನ್ನಡ ಕ್ರಿಯಾ ಬತ್ತಿಯಾಗಿರುವ ಪಾವನಭೂಮಿ. ಬೀದರ್‌. ಉಜ್ಜಲ ಕನ್ನಡ ಪರಂಪರೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಕರ್ನಾಟಕದ ವಿಶಿಷ್ಟ ಜಿಲ್ಲೆಯಿದು’ ಎಂದು ಬಣ್ಣಿಸಿದರು.

ಗಡಿಯಲ್ಲಿ ಸಶಕ್ತವಾಗದ ಕನ್ನಡ ಶಾಲೆಗಳು

ಬೀದರ್‌: ‘ಶಿಕ್ಷಣದ ರೀತಿ-ನೀತಿ ಬದಲಾಗಿದೆ. ಜಿಲ್ಲೆಯಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಆದರೆ, ಗಡಿನಾಡಿನಲ್ಲಿ ಕನ್ನಡ ಶಾಲೆಗಳು ಸಶಕ್ತವಾಗಿಲ್ಲ. ಸಹೋದರ ಭಾಷೆ ತೆಲುಗಿಗಿಂತ, ಮರಾಠಿ ಮತ್ತು ಇಂಗ್ಲಿಷ್‌ನ ದಟ್ಟ ಪ್ರಭಾವದಿಂದ ಕನ್ನಡ ಹಿನ್ನಡೆ ಅನುಭವಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಶೇಕಡ 80ರಷ್ಟು ಮೀಸಲಾತಿ ಒದಗಿಸಬೇಕು. ಯು.ಪಿ.ಎಸ್.ಸಿ. ಹಾಗೂ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೂ ಆದ್ಯತೆ ಕಲ್ಪಿಸಬೇಕು. ರಾಜ್ಯಮಟ್ಟದ ಎಲ್ಲ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರಾಮುಖ್ಯ ನೀಡಬೇಕು. ಎಲ್ಲ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಂಹಪಾಲು ದೊರಕುವಂತಾಗಬೇಕು’ ಎಂದು ಹೇಳಿದರು.
‘ನಮ್ಮ ನಾಯಕರ ಇಚ್ಛಾಶಕ್ತಿಯ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಜನಪ್ರತಿನಿಧಿಗಳು ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಅಗತ್ಯ ಇದೆ’ ಎಂದು ತಿಳಿಸಿದರು.

ನಕಲಿ ಬರಹಗಾರರಿಂದ ಎಚ್ಚರ

ಬೀದರ್: ‘ಸಂಶೋಧನೆಯ ಹೆಸರಿನಲ್ಲಿ ಸುಳ್ಳು ಬೊಗಳೆ ಜನರ ದಿಕ್ಕು ತಪ್ಪಿಸುವ ಬರಹಗಾರರ ಬಗ್ಗೆ ಎಚ್ಚರ ವಹಿಸಬೇಕಾಗಿದೆ’ ಎಂದು ಸೋಮನಾಥ ಯಾಳವಾರ ಹೇಳಿದರು.

‘ಮೂಢನಂಬಿಕೆ ಬಿತ್ತುವುದನ್ನು ಖಂಡಿಸಬೇಕು. ಅನಾಚಾರಗಳ ವಿರುಧ್ಧ ಧ್ವನಿ ಎತ್ತಬೇಕು’ ಎಂದು ತಿಳಿಸಿದರು.

‘ಮಕ್ಕಳ ಕನಸುಗಳು ನೂರಾರು. ಅವರ ಮನಸ್ಸು ಮೃದು. ಮಣ್ಣಿನ ಹಾಸಿಗೆ. ಅಲ್ಲಿ ಬಿತ್ತಿದ ಬೀಜಗಳೆಲ್ಲ ಮೊಳಕೆಯೊಡೆಯುತ್ತವೆ. ಅವರ ಮನದಲ್ಲಿ ಒಳಿತನ್ನೇ ಬೀಜವಾಗಿ ಬಿತ್ತಬೇಕು. ಅವರದೇ ಭಾವದ ಭಾಷೆಯಲ್ಲಿ ಕಲಿಯಬೇಕು, ಉಲಿಯಬೇಕು. ಮಕ್ಕಳ ಸರ್ವತೋಮುಖ ಪ್ರಗತಿಯಾಗುವಂತೆ, ಅವರ ಜೀವನಕ್ಕೆ ದಾರಿದೀಪವಾಗುವಂತೆ ಸಾಹಿತಿಗಳು ಮಕ್ಕಳ ಸಾಹಿತ್ಯ ರಚಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT