ಭಾನುವಾರ, ಏಪ್ರಿಲ್ 11, 2021
28 °C

ಸಾಲ ವಸೂಲಾತಿಗೆ ಒತ್ತಾಯ ಬೇಡ; ಹಣಕಾಸು ಸಂಸ್ಥೆಗಳಿಗೆ ಸಚಿವ ಪ್ರಭು ಚವಾಣ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೋವಿಡ್‌ ಕಾರಣ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿದ್ದು, ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಅಥವಾ ಕಿರುಕುಳ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮನವಿ ಮಾಡಿದ್ದಾರೆ.

ಸಾಲಗಾರರ ಕಿರುಕುಳದಿಂದಾಗಿ ಕಲಬುರ್ಗಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳು ಸ್ಥಗಿತಗೊಂಡಿದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಂಗಾಲಾಗಿವೆ. ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗಲು ಸಾಲ ಮಾಡಿಕೊಂಡಿದ್ದಾರೆ. ಈಗಲೂ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಇರುವುದರಿಂದ ಸಾಲದ ಕಂತುಗಳನ್ನು ಪಾವತಿಸಲು ಶಾಲಾ, ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ ನಂತರ ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆ, ಕಾಲೇಜುಗಳಲ್ಲಿ ಮೂಲಸೌಕರ್ಯ ವೃದ್ಧಿ, ಶಾಲಾ ವಾಹನ ಖರೀದಿ ಅಥವಾ ಇನ್ನಿತರೆ ಉದ್ದೇಶಗಳಿಗಾಗಿ ಸಾಲ ಪಡೆದಿದ್ದಾರೆ. ಮಕ್ಕಳಿಂದ ಹೆಚ್ಚುವರಿ ಶುಲ್ಕ ಪಡೆಯದಂತೆ ಸೂಚನೆಯಿದೆ. ಕೆಲವು ಶಿಕ್ಷಣ ಸಂಸ್ಥೆಯವರು ಮಾನವೀಯತೆಯ ದೃಷ್ಟಿಯಿಂದ ಯಾವುದೇ ಶುಲ್ಕವಿಲ್ಲದೆ ಬೋಧನೆ ಮಾಡುತ್ತಿರುವ ಉದಾಹರಣೆಗಳಿವೆ ಎಂದು ಹೇಳಿದ್ದಾರೆ.

ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಜಪ್ತಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‍ಗಳು ಹಾಗೂ ಹಣಕಾಸು ಸಂಸ್ಥೆಗಳು ಮಾನವೀಯತೆಯಿಂದ ವರ್ತಿಸಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆಯಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು