ಬೀದರ್: ‘ಸುಳ್ಳು ಸತ್ಯ ಎನ್ನುವ ರೀತಿಯಲ್ಲಿ ಮಾಧ್ಯಮಗಳು ಸುದ್ದಿ ಪ್ರಕಟಿಸುತ್ತಿರುವುದರಿಂದ ಸಮಾಜದಲ್ಲಿ ಅರಾಜಕತೆ, ಸಂಘರ್ಷ ಉಂಟಾಗಬಹುದು. ಅದಕ್ಕೆ ಪತ್ರಕರ್ತರು ಆಸ್ಪದ ಮಾಡಿಕೊಡಬಾರದು. ಹೆಚ್ಚು ಜಾಗೃತರಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಮಾನ್ಯತೆ ಪಡೆದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಇಲ್ಲಿನ ಪ್ರತಾಪ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ರೋಚಕತೆಗೆ ಅಸತ್ಯವಾದ ಸುದ್ದಿಗಳನ್ನು ಪ್ರಕಟಿಸಬಾರದು. ಎಲ್ಲಾ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರವೂ ಕಲುಷಿತಗೊಂಡಿದೆ. ವಿಶ್ವಾಸಾರ್ಹತೆ ಬಹಳ ಮುಖ್ಯ. ಕೆಲವೇ ಕೆಲವು ಮುದ್ರಣ ಮಾಧ್ಯಮದವರು ಅದನ್ನು ಉಳಿಸಿಕೊಂಡಿದ್ದಾರೆ. ತಿರುಚಿ ಬರೆಯುವುದು, ರೋಚಕತೆಗೆ ಅಸತ್ಯವಾದ ಸುದ್ದಿ ಪ್ರಕಟಿಸುವುದು ಎಷ್ಟು ಸರಿ? ಇದರಿಂದ ಸಮಾಜದಲ್ಲಿ ಗೊಂದಲ ಆಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಸುದ್ದಿಗಳನ್ನು ನೋಡಿದರೆ ಮಾನಸಿಕ ಪರಿಸ್ಥಿತಿ ಹಾಳಾಗಬಹುದು. ಸುಳ್ಳು ಸತ್ಯ ಎನ್ನುವ ರೀತಿಯಲ್ಲಿ ತೋರಿಸಿ, ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ಸಾಮರಸ್ಯ ಕದಡುವುದು ಸರಿಯಲ್ಲ ಎಂದರು.
ಎಂದೆಂದಿಗಿಂತಲೂ ಇಂದು ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ. ಸತ್ಯದ ಅನ್ವೇಷಣೆ ಮಾಡಿ ಸುದ್ದಿಗಳನ್ನು ಪ್ರಕಟಿಸಬೇಕು. ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಭಾವನಾತ್ಮಕವಾಗಿ ಕೆರಳಿಸಬಾರದು. ಅದಕ್ಕೆ ಕಡಿವಾಣ ಹಾಕಬೇಕು. ಜೊತೆಗೆ ಮಾಧ್ಯಮದವರು ಜಾಗೃತರಾಗಿರಬೇಕೆಂದು ತಿಳಿಸಿದರು.
ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಏರುಪೇರಾದರೆ ಜನ, ಸರ್ಕಾರದ ಗಮನಕ್ಕೆ ತಂದು ಲೋಪದೋಷ ಸರಿಪಡಿಸುವ ಕೆಲಸ ಮಾಧ್ಯಮ ಆರಂಭದಿಂದಲೂ ಮಾಡುತ್ತಿದೆ. ಅದು ಹಾಗೆಯೇ ಮುಂದುವರೆಯಬೇಕು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರ ವ್ಯವಸ್ಥೆ ನಡೆಯಬೇಕಾದರೆ ಅದಕ್ಕೆ ಮಾಧ್ಯಮದ ಕೊಡುಗೆ ದೊಡ್ಡದಿದೆ. ಜನಾಭಿಪ್ರಾಯ ರೂಪಿಸುವ ಬಹುದೊಡ್ಡ ಶಕ್ತಿ ಮಾಧ್ಯಮಕ್ಕಿದೆ. ಪ್ರಭಾವಿ ರಾಜಕಾರಣಿಗಳು, ಬಂಡವಾಳಷಾಹಿಗಳ ಅನ್ಯಾಯ, ಅತ್ಯಾಚಾರ, ದೌರ್ಜನ್ಯ ಬಯಲಿಗೆಳೆಯುವ ಶಕ್ತಿಯೂ ಇದೆ ಎಂದರು.
ಮಾಧ್ಯಮ ವೃತ್ತಿಯಲ್ಲ ಸಮಾಜ ಸೇವೆ, ಪವಿತ್ರ ಕೆಲಸ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ, ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಲೇಖನಿಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ದೇಶಪ್ರೇಮದ ಕಿಚ್ಚು ಹೊತ್ತಿಸಿದ್ದರು. ಭಾರತೀಯ ಪತ್ರಿಕೋದ್ಯಮಕ್ಕೆ 240 ವರ್ಷಗಳ ಇತಿಹಾಸವಿದೆ. ರಾಜ್ಯಕ್ಕೆ 180 ವರ್ಷಗಳ ಚರಿತ್ರೆ ಇದೆ. ಖಾದ್ರಿ ಶಾಮಣ್ಣ, ಪಾಟೀಲ ಪುಟ್ಟಪ್ಪ, ಜಯಶೀಲರಾವ ಸೇರಿದಂತೆ ಹಲವರು ಈ ಕ್ಷೇತ್ರಕ್ಕಾಗಿ ದುಡಿದಿದ್ದಾರೆ ಎಂದು ಸ್ಮರಿಸಿದರು.
ಪತ್ರಕರ್ತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಯಶಸ್ವಿನಿ ಯೋಜನೆಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಗ್ರಾಮೀಣ ಪತ್ರಕರ್ತರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸಲು ಉಚಿತ ಪಾಸ್ ಕೊಡಿಸಬೇಕೆಂಬ ಕೂಗು ಇದೆ. ಇದಕ್ಕೆ ಸಂಬಂಧಿಸಿ ಸಿ.ಎಂ. ಜೊತೆ ಚರ್ಚಿಸುವೆ. ನಿವೃತ್ತ ಪತ್ರಕರ್ತರ ನಿವೃತ್ತಿ ವೇತನವನ್ನು ನಮ್ಮ ಸರ್ಕಾರ ₹10 ಸಾವಿರದಿಂದ ₹12 ಸಾವಿರಕ್ಕೆ ಏರಿಕೆ ಮಾಡಿದೆ ಎಂದರು.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, ಅಭಿವೃದ್ಧಿ ನನ್ನ ಗುರಿ. ಬೀದರ್ ವಿ.ವಿಗೆ ಹಿಂದಿನ ಸರ್ಕಾರ ಎರಡು ಕೋಟಿ ಕೊಟ್ಟಿದೆ. ಇನ್ನೂರು ಕೋಟಿ ಕೊಡಲು ಕ್ರಮ ಜರುಗಿಸಲಾಗುವುದು ಎಂದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಪತ್ರಕರ್ತರಿಂದ ಅನೇಕರು ಮೇಲೆ ಬಂದಿದ್ದಾರೆ. ಕೆಲವರು ಕೆಳಗೂ ಬಂದಿದ್ದಾರೆ ಎಂದು ಹೇಳಿದರು.
ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ಹುಮನಾಬಾದ್ ನಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಸಿ.ಎ ಸೈಟ್ ಕೊಟ್ಟರೆ ಹತ್ತು ಲಕ್ಷ ಅನುದಾನ ಕೊಡುವೆ ಎಂದು ಘೋಷಿಸಿದರು.
ಮಾನ್ಯತೆ ಪಡೆದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಬಾಬುವಾಲಿ ಮಾತನಾಡಿ, ಸಮಾನ ಸೂತ್ರದಡಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಒಂದೇ ವೇದಿಕೆಗೆ ಬಂದಿದ್ದೇವೆ. ಇನ್ಮುಂದೆ ಮಾನ್ಯತೆ ಪಡೆದ ಪತ್ರಕರ್ತರ ಎಲ್ಲಾ ಚಟುವಟಿಕೆಗಳು ಪತ್ರಿಕಾ ಭವನದಲ್ಲಿ ನಡೆಯುತ್ತವೆ. ಪ್ರತಿವರ್ಷ ಪದಾಧಿಕಾರಿಗಳು ಬದಲಾಗುತ್ತಾರೆ. ಪಾರದರ್ಶಕವಾಗಿ ಸಂಘ ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಭವನ ನಿರ್ಮಾಣಕ್ಕೆ ದೇಣಿಗೆ ನೀಡಿದ ಸಮಾಜ ಸೇವಕ ಗುರುನಾಥ ಕೊಳ್ಳೂರ ಹಾಗೂ ಆಗಸ್ಟ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿರುವ ವಾರ್ತಾ ಇಲಾಖೆಯ ವಾಹನ ಚಾಲಕ ಬಿಂದು ಅವರನ್ನು ಸಚಿವರು ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಮಾನ್ಯತೆ ಪಡೆದ ಪತ್ರಕರ್ತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜೆ.ಆರ್.ಕೆಂಚೆಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ, ಏಸಿಯಾ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ, ಸಮಾಜ ಸೇವಕ ಬಸವರಾಜ ಧನ್ನೂರ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶಟ್ಟಿ, ಪತ್ರಕರ್ತರಾದ ದೀಪಕ್ ವಾಲಿ, ಎಸ್.ಎಸ್. ಖಾದ್ರಿ, ಗಂಧರ್ವ ಸೇನಾ ಹಾಗೂ ಜಿಲ್ಲೆಯ ವಿವಿಧ ಭಾಗದ ಪತ್ರಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.