ಬುಧವಾರ, ಫೆಬ್ರವರಿ 1, 2023
16 °C

ರಸ್ತೆ ಮೇಲೆ ಚರಂಡಿ ನೀರು: ಸಾಂಕ್ರಾಮಿಕ ರೋಗ ಹರಡುವ ಭೀತಿ, ಬೇಸತ್ತ ಜನ

ಗಿರಿರಾಜ.ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಕಟ್ಟಿ ತುಗಾಂವ್ ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಗಳೇ ಚರಂಡಿಯಂತಾಗಿವೆ. ಇದರಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

ಚಳಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಮನೆಗಳಿವೆ. ಆದರೆ ಸೂಕ್ತ ಚರಂಡಿ ಇಲ್ಲದಿರುವುದರಿಂದ ಹೊಲಸು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಎಲ್ಲೆಡೆ ದುರ್ವಾಸನೆ ಬೀರುತ್ತಿದೆ.

ಸದ್ಯ ಮಳೆಗಾಲ ಇರುವುದರಿಂದ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ತುಂಬಿ ಹರಿಯುತ್ತಿದೆ. ಇದರಿಂದ ಪಾದಚಾರಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷೆ, ಸದಸ್ಯರು, ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಭಂಡೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಸ್ತೆ ಮೇಲೆ ಹರಿಯುವ ಚರಂಡಿ ನೀರಿನಿಂದ ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದೆ. ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುತ್ತಿವೆ. ಆದರೆ ಕೆಲಸವೆಲ್ಲವು ಕಡತಗಳಲ್ಲಿ ಆಗುತ್ತಿದೆ. ಗ್ರಾಮದ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಗೊಣಗುತ್ತಾರೆ.

ಈಗಾಗಲೇ ಹಲವು ಬಾರಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಗಿದೆ. ಆದರೂ ಕೂಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ. ಬದಲಾಗಿ ಎರಡು ಮೂರು ದಿನಗಳಲ್ಲಿ ಬಂದು ಸರಿಪಡಿಸಲಾಗುವುದು ಎಂದು ಹೇಳುತ್ತಾರೆ. ಹೊರತು ಸ್ಥಳಕ್ಕೆ ಬರುವುದೇ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗಣಪತಿ ಬೂದೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪಂಚಾಯಿತಿ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಹೊಲಸು ನೀರು ಹಾಗೂ ಕಸ ಕಡ್ಡಿಯನ್ನು ಬೇರೆಡೆಗೆ ಸಾಗಿಸುವ ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು