ಭಾನುವಾರ, ಜೂನ್ 20, 2021
25 °C
ಮನೆಗಳಲ್ಲೇ ಕುಟುಂಬದ ಸದಸ್ಯರೊಂದಿಗೆ ಪ್ರಾರ್ಥನೆ; ಮೊಬೈಲ್‌ನಲ್ಲಿ ಶುಭಾಶಯ ವಿನಿಮಯ

ಈದ್ ಉಲ್ ಫಿತ್ರ್ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಈದ್ ಉಲ್ ಫಿತ್ರ್‌ ಪವಿತ್ರ ಹಬ್ಬವನ್ನು ಮುಸಲ್ಮಾನರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸರಳವಾಗಿ ಆಚರಿಸಿದರು.

ಕೋವಿಡ್ ತಡೆಗೆ ಜಾರಿಗೊಳಿಸಲಾದ ಲಾಕ್‍ಡೌನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಮುಸಲ್ಮಾನರು ಮನೆಯಲ್ಲೇ ಸರಳವಾಗಿ ಹಬ್ಬ ಆಚರಣೆ ಮಾಡಿದರು.

ತಮ್ಮ ತಮ್ಮ ಮನೆಗಳಲ್ಲೇ ಬೆಳಿಗ್ಗೆ ಕುಟುಂಬದ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಸುಖ, ಶಾಂತಿ, ಸಮೃದ್ಧಿ, ಸಹೋದರತ್ವ, ವಿಶ್ವಶಾಂತಿ ಹಾಗೂ ಕೋವಿಡ್ ಮುಕ್ತಿಗಾಗಿ ದೇವರಲ್ಲಿ ಕೇಳಿಕೊಂಡರು.

ಈದ್ ಉಲ್ ಫಿತ್ರ್‌ಗೆ ಒಂದು ವಾರ ಮೊದಲೇ ನಗರದ ಓಲ್ಡ್ ಸಿಟಿಯ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಇರುತ್ತಿತ್ತು. ಜನ ಹೊಸ ಬಟ್ಟೆ, ಪಾದರಕ್ಷೆ, ಟೊಪ್ಪಿಗೆ, ಸುಗಂಧದ್ರವ್ಯ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುತ್ತಿದ್ದರು. ಆದರೆ, ಲಾಕ್‍ಡೌನ್ ಕಾರಣ ಇದಾವುದಕ್ಕೂ ಅವಕಾಶ ಇರಲಿಲ್ಲ.

ಮುಂಚಿತವಾಗಿಯೇ ಖರೀದಿ ಮಾಡಿಕೊಂಡಿದ್ದ ಕೆಲವರು ಮಾತ್ರ ಹೊಸ ಬಟ್ಟೆ ಧರಿಸಿದ್ದರು. ಬಹುತೇಕರು ಮನೆಯಲ್ಲಿ ಇದ್ದ ಹಳೇ ಬಟ್ಟೆಗಳನ್ನು ತೊಟ್ಟಿದ್ದರು. ಶೀರ್‍ಕುರ್ಮಾ ಸೇರಿದಂತೆ ಹಬ್ಬದ ಖಾದ್ಯಗಳನ್ನು ಕುಟುಂಬದ ಸದಸ್ಯರೊಂದಿಗೆ ಸವಿದರು.

ಹಬ್ಬದ ದಿನ ಬಂಧುಗಳ ಮನೆಗೆ ತೆರಳಿ ಪರಸ್ಪರ ಆಲಂಗಿಸಿಕೊಂಡು ಶುಭ ಕೋರುವ ವಾಡಿಕೆ ಹಿಂದಿನಿಂದ ನಡೆದುಕೊಂಡು ಬಂದಿತ್ತು. ಈ ಬಾರಿ ಕೋವಿಡ್ ಹರಡುವಿಕೆ ಕಾರಣಕ್ಕೆ ಯಾರೂ ಬೇರೆಯವರ ಮನೆಗೆ ಹೋಗಿರಲಿಲ್ಲ.

ಹಬ್ಬದ ಶುಭಾಶಯ ವಿನಿಮಯ ಮೊಬೈಲ್ ಸಂದೇಶ, ವಾಟ್ಸ್‌ಆ್ಯಪ್ ಮೂಲಕವೇ ನಡೆದಿತ್ತು. ಬಂಧುಗಳು, ನೆರೆ ಹೊರೆಯವರನ್ನು ಊಟಕ್ಕೆ ಆಹ್ವಾನಿಸಿರಲಿಲ್ಲ.

ನಗರದ ಹೊಸ ಬಸ್ ನಿಲ್ದಾಣ ಸಮೀಪದ ಈದ್ಗಾ ಮೈದಾನ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್
ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು