ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗಿಂತ ರೇಷ್ಮೆ ಬೆಳೆಯಲು ಪ್ರೋತ್ಸಾಹಿಸಿ: ಕ್ರೀಡಾ ಸಚಿವ ಡಾ.ನಾರಾಯಣಗೌಡ ಸೂಚನೆ

Last Updated 25 ಅಕ್ಟೋಬರ್ 2021, 13:52 IST
ಅಕ್ಷರ ಗಾತ್ರ

ಬೀದರ್: ‘ಕಬ್ಬು ಬೆಳೆದರೆ ವಾರ್ಷಿಕ ಒಂದು ಬೆಳೆ ಮಾತ್ರ ತೆಗೆಯಬಹುದು. ರೇಷ್ಮೆ ಬೆಳೆದರೆ 10 ರಿಂದ 11 ಬಾರಿ ಇಳುವರಿ ಪಡೆಯಲು ಸಾಧ್ಯವಿದೆ. ಆದ್ದರಿಂದ ರೇಷ್ಮೆ ಇಲಾಖೆಯ ಅಧಿಕಾರಿಗಳು ರೇಷ್ಮೆ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ ನೀಡಬೇಕು’ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರೇಷ್ಮೆ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ರೇಷ್ಮೆ ಬೆಳೆಗೆ ಜಿಲ್ಲೆಯಲ್ಲಿ ಸೂಕ್ತ ಹವಾಗುಣ ಇದೆ. ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರೈತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿದೆ. ಈ ಯೋಜನೆಗಳ ಲಾಭ ದೊರಕುವಂತೆ ಮಾಡಬೇಕು’ ಎಂದರು.

ರೇಷ್ಮೆ ಇಲಾಖೆಯ ಉಪ ನಿರ್ದೇಶಕ ನಾಗಪ್ಪ ಬಿರಾದಾರ ಮಾತನಾಡಿ, ‘ಜಿಲ್ಲೆಯ ಹವಾಗುಣ, ಮಣ್ಣು ರೇಷ್ಮೆ ಕೃಷಿಗೆ ಸೂಕ್ತವಾಗಿದೆ. ಬೀದರ್‌ ಜಿಲ್ಲೆಯಲ್ಲಿ 545 ರೇಷ್ಮೆ ಬೆಳೆಗಾರರು 1,116 ಎಕರೆಯಲ್ಲಿ ಹಿಪ್ಪು ನೇರಳೆ ಬೆಳೆಯುತ್ತಿದ್ದಾರೆ. ರೇಷ್ಮೆ ಗೂಡನ್ನು ಹುಮನಾಬಾದ್ ಹಾಗೂ ರಾಮನಗರಕ್ಕೆ ತೆರಳಿ ಮಾರಾಟ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಆರು ಖಾಸಗಿ ರೀಲಿಂಗ್‌ ಘಟಕಗಳು ಹಾಗೂ ಎರಡು ಖಾಸಗಿ ಚಾಕಿ ಸಾಕಾಣಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 84 ಸಾವಿರ ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆಯಾಗಿದೆ. ಮಾರುಕಟ್ಟೆ ಸಮಸ್ಯೆಯಿಂದಾಗಿ ರಾಮನಗರ, ಶಿಢ್ಲಘಟ್ಟಕ್ಕೆ ತೆರಳಬೇಕಾಗಿದೆ’ ಎಂದು ತಿಳಿಸಿದರು.

‘ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಕನಿಷ್ಠ
ಐದು ಸಾವಿರ ರೈತರು ರೇಷ್ಮೆ ಬೆಳೆಯುವಂತೆ ಆಗಬೇಕು. ಸಾಧಕ ರೇಷ್ಮೆ ಬೆಳೆಗಾರರ ಹೊಲಗಳಿಗೆ ರೈತರನ್ನು ಕರೆದುಕೊಂಡು ಹೋಗಿ ಪ್ರಾತ್ಯಕ್ಷಿಕೆ ನಡೆಸಬೇಕು. ರೈತರು ಕಬ್ಬು ಬೆಳೆದು ಕಷ್ಟ ಅನುಭವಿಸುವುದಕ್ಕಿಂತ ರೇಷ್ಮೆ ಬೆಳೆದು ಆದಾಯ ಗಳಿಸುವಂತೆ ಜಾಗೃತಿ ಮೂಡಿಸಬೇಕು’ ಎಂದು ಸಚಿವರು ಸೂಚಿಸಿದರು.

ಉತ್ತಮ ಇಳುವರಿ ಪಡೆದಿರುವ ರೇಷ್ಮೆ ಬೆಳೆಗಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುವುದು. ಮುಖ್ಯಮಂತ್ರಿ ಸಮ್ಮುಖದಲ್ಲಿ ಸಾಧಕ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಅರ್ಹ ರೇಷ್ಮೆ ಬೆಳೆಗಾರರನ್ನು ಗುರುತಿಸಿ ಕೇಂದ್ರ ಕಚೇರಿಗೆ ಪಟ್ಟಿ ಕಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಎಸ್‌ಎಂಡಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸಿಇಒ ಡಾ.ಜಹೀರಾ ನಸೀಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ.ನಾಡಿಗೇರ, ರೇಷ್ಮೆ ವಿಸ್ತೀರ್ಣಾಧಿಕಾರಿ ಸೇಳಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT