ಮಂಗಳವಾರ, ಮೇ 18, 2021
30 °C

ಮೃತ್ಯುಕೂಪವಾಗುತ್ತಿದೆ ಬ್ರಿಮ್ಸ್: ಈಶ್ವರ ಖಂಡ್ರೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ‘ಜನರ ಪ್ರಾಣ ಉಳಿಸಬೇಕಿದ್ದ ಬ್ರಿಮ್ಸ್ ಮೃತ್ಯುಕೂಪವಾಗಿ ಪರಿವರ್ತನೆ ಯಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಇದನ್ನು ಶುಕ್ರವಾರ ಕಣ್ಣಾರೆ ಕಂಡು ಕಿಡಿಕಾರಿದ್ದಾರೆ. ಆದರೆ, ಈ ಅವ್ಯವಸ್ಥೆಯ ಸಂಪೂರ್ಣ ಹೊಣೆಯನ್ನೂ ಅವರೇ ಹೊರಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

‘ಬ್ರಿಮ್ಸ್‌ನಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ ಬಳಕೆ ಆಗುತ್ತಿಲ್ಲ. ಪಿಪಿಇ ಕಿಟ್, ಮಾಸ್ಕ್ ಸಹ ನೀಡಲಾಗುತ್ತಿಲ್ಲ. ಹೋಮ್ ಐಸೋಲೇಷನ್‌ ನಲ್ಲಿರುವ ಸೋಂಕಿತರಿಗೆ ಔಷಧಿಗಳ ಕಿಟ್ ಸಹ ನೀಡುತ್ತಿಲ್ಲ ಎಂಬುದನ್ನು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ಅಂದರೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಾವಿಗೆ ವೈದ್ಯಕೀಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ’ ಎಂದು ಅವರು ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಕಾಯಂ ಆಡಳಿತಾಧಿಕಾರಿ ಇಲ್ಲ, ಕಾಯಂ ನಿರ್ದೇಶಕರಿಲ್ಲ, ಪ್ರಾಚಾರ್ಯರಿಲ್ಲ. ಎಲ್ಲರೂ ಉಸ್ತುವಾರಿಗಳೇ ತುಂಬಿದ್ದಾರೆ. ಮಿಗಿಲಾಗಿ ಇಲ್ಲಿ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ವೈದ್ಯಕೀಯ ಮೂಲ ಸೌಕರ್ಯದ ಸುಧಾರಣೆ ಆಗಲಿಲ್ಲ. ವೈದ್ಯಕೀಯ ಮತ್ತು ಆರೋಗ್ಯ ಖಾತೆ ಎರಡನ್ನೂ ನಿಭಾಯಿಸುತ್ತಿರುವ ಸಚಿವರೇ ನಿಮ್ಮ ಜವಾಬ್ದಾರಿ ಏನು ಹೇಳಿ?’ ಎಂದೂ ಪ್ರಶ್ನಿಸಿದರು.

ಸಾವಿನ ಸಂಖ್ಯೆಯಲ್ಲೂ ಸುಳ್ಳು: ‘ಬ್ರಿಮ್ಸ್‌ನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಸುಳ್ಳು ಹೇಳಲಾಗುತ್ತಿದೆ ಎಂಬುದನ್ನು ದಾಖಲೆ ಸಹಿತ ಡಾ.ಸುಧಾಕರ್ ಅವರಿಗೆ ನೀಡಿದ್ದೇನೆ. ಸದ್ಯ ಸಚಿವರು ಸಭೆ ನಡೆಸಿದ್ದು ಇದು ಕಾಟಾಚಾರಕ್ಕೆ ಆಗಬರದು. ಅವ್ಯವಸ್ಥೆಯ ಆಗರವಾಗಿರುವ ಬ್ರಿಮ್ಸ್‌ಗೆ ಕಾಯಕಲ್ಪ ಆಗಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ವೈದ್ಯರ ಮತ್ತು ನರ್ಸ್‍ಗಳ ಕೊರತೆ ಹೆಚ್ಚಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಿದಂತೆ ವೈದ್ಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇವೆ ಲಭಿಸುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಮೂರು ತಿಂಗಳ ಮಟ್ಟಿಗಾದರೂ ತ್ವರಿತವಾಗಿ ಆನ್‍ಲೈನ್ ಮೂಲಕ ನೇಮಕಾತಿ ಮಾಡಿಕೊಂಡು ರೋಗಿಗಳ ಪ್ರಾಣ ಉಳಿಸಬೇಕಾಗಿದೆ’ ಎಂದೂ ಖಂಡ್ರೆ ಸಲಹೆ ನೀಡಿದರು.

‘ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಪರಮಾಧಿಕಾರ ನೀಡುವುದು ಸೂಕ್ತ. ಇದರಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡಬೇಡಿ’ ಎಂದೂ ಸಲಹೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.