ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮವರೇ ನಿಮಗೆ ಛೀ, ಥೂ ಎನ್ನುತ್ತಿದ್ದಾರೆ: ಖೂಬಾಗೆ ಖಂಡ್ರೆ ತಿರುಗೇಟು

Published 17 ಫೆಬ್ರುವರಿ 2024, 12:37 IST
Last Updated 17 ಫೆಬ್ರುವರಿ 2024, 12:37 IST
ಅಕ್ಷರ ಗಾತ್ರ

ಬೀದರ್‌: ‘ಕೇಂದ್ರ ಸಚಿವ ಭಗವಂತ ಖೂಬಾ ಅವರು ಹತ್ತು ವರ್ಷ ಸುಳ್ಳು ಹೇಳುವುದರಲ್ಲೇ ಕಳೆದಿದ್ದಾರೆ. ನಿಮ್ಮವರೇ ನಿಮಗೆ ಛೀ, ಥೂ ಎನ್ನುತ್ತಿದ್ದಾರೆ. ನಮ್ಮ ಸರ್ಕಾರದ ಬಜೆಟ್‌ ಟೀಕಿಸುವ ಬದಲು ಅವರು ಅದರ ಬಗ್ಗೆ ಏನು ಹೇಳುತ್ತಾರೆ’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಟೀಕಿಸಿದರು.

ಜಿಲ್ಲಾಡಳಿತದಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಖೂಬಾ ಅವರು ಕೇಂದ್ರ ಸಚಿವರಾಗಿದ್ದರೂ ಬೀದರ್‌–ಬೆಂಗಳೂರು ವಿಮಾನಯಾನ ಸೇವೆ ಸ್ಥಗಿತಗೊಂಡಿದೆ. ಇದು ಅವರ ಸಾಧನೆಯಾ? ನಾನು ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚಿಸಿ, ಅಧಿಕಾರಿಗಳ ಸಭೆ ನಡೆಸಿ ವಿಮಾನಯಾನ ಸೇವೆ ಆರಂಭಿಸಲು ಪ್ರಯತ್ನಿಸುತ್ತಿದ್ದೇನೆ. ‘ಸಿಪೆಟ್‌’ಗೆ ಬೇಕಿರುವ ಹುದ್ದೆಗಳಿಗೆ ಅನುಮೋದನೆಯೇ ಸಿಕ್ಕಿಲ್ಲ. ಆದರೆ, ತರಗತಿ ಆರಂಭಿಸಲಾಗಿದೆ ಎಂದು ಖೂಬಾ ಹೇಳುತ್ತಿದ್ದಾರೆ. ಜಿಎಸ್ಟಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಬರಗಾಲ ಪರಿಹಾರದಲ್ಲಿ ಮೋಸವಾಗಿದೆ. ಈ ಬಗ್ಗೆ ಎಂದಾದರೂ ಅವರು ಧ್ವನಿ ಎತ್ತಿದ್ದಾರಾ! ಮೋದಿ ಮುಂದೆ ನಿಲ್ಲುವ ತಾಕತ್‌ ಅವರಿಗಿದೆಯಾ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಹಾಕಿದರು.

ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿಯವರು ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮ ಮಾಡಿದ್ದಾರೆ. ಆದರೆ, ನಾವು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಬೇಕೆಂಬ ಬಹುವರ್ಷಗಳ ಬೇಡಿಕೆ ಇತ್ತು. ಆ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಇದರಲ್ಲಿ ಯಾವುದೇ ರಾಜಕೀಯ ಎಲ್ಲ. ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಬೀದರ್‌–ಬೆಂಗಳೂರು ಆರ್ಥಿಕ ಕಾರಿಡಾರ್‌ ಸೇರಿದಂತೆ ಹಲವು ಯೋಜನೆಗಳನ್ನು ಜಿಲ್ಲೆಗೆ ಕೊಟ್ಟಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

‘ಜಿಲ್ಲೆಯವರೇ ಆದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌ ಅವರು ಸಂಪುಟ ದರ್ಜೆ ಸಚಿವರಾಗಿದ್ದರೂ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಯೋಜನೆಗಳು, ಅನುದಾನ ತರುವಲ್ಲಿ ವಿಫಲರಾಗಿದ್ದಾರೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಶುಕ್ರವಾರ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT