ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಬೀದರ್‌: ಮಗನ ಕಣಕ್ಕಿಳಿಸಲು ಖಂಡ್ರೆ ಶತ ಪ್ರಯತ್ನ

‘ಕುಟುಂಬ ರಾಜಕಾರಣ’ಕ್ಕೆ ಕಾಂಗ್ರೆಸ್‌ ಮುಖಂಡರ ವಿರೋಧ; ಪಕ್ಷದ ನಿಷ್ಠಾವಂತರಿಗೆ ಮಣೆ ಹಾಕಲು ಆಗ್ರಹ
Published 13 ಫೆಬ್ರುವರಿ 2024, 0:30 IST
Last Updated 13 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೀದರ್‌: ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಈಶ್ವರ ಬಿ. ಖಂಡ್ರೆಯವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಬರುವ ಚುನಾವಣೆಯಲ್ಲಿ ತಮ್ಮ ಮಗ ಸಾಗರ್‌ ಖಂಡ್ರೆಯವರನ್ನು ಕಣಕ್ಕಿಳಿಸಲು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ.

26ರ ಹರೆಯದ ಸಾಗರ್‌ ಖಂಡ್ರೆ ಬಿ.ಎ., ಎಲ್‌ಎಲ್‌ಬಿ ಪದವೀಧರರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್‌ನ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಷ್ಟೇ ರಾಜಕಾರಣದ ಅನುಭವ ಪಡೆಯುತ್ತಿದ್ದಾರೆ. ರಾಜಕೀಯದ ಆಳ–ಅಗಲ ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ಈಶ್ವರ ಖಂಡ್ರೆ ಅವರು ಈಗಲೇ ಮಗನನ್ನು ಚುನಾವಣೆಗೆ ನಿಲ್ಲಿಸಿ ವೇದಿಕೆ ಕಲ್ಪಿಸಲು ಮುಂದಾಗಿದ್ದಾರೆ.

ಇದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಗರ, ಪಟ್ಟಣಗಳು ಹಾಗೂ ಪ್ರತಿಯೊಂದು ಗ್ರಾಮಗಳಲ್ಲಿ ಬೆಂಬಲಿಗರ ಮೂಲಕ ಮಗನ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ತೆರೆದ ವಾಹನಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಿ ತಂತ್ರಜ್ಞಾನದಿಂದ ಪ್ರಚಾರ ನಡೆಸುತ್ತಿದ್ದಾರೆ. ಸಂಘ–ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಆ ಮೂಲಕ ಮಗನ ಪರ ಪ್ರಚಾರ ಮಾಡುತ್ತಿದ್ದಾರೆ. ಮಗನಿಗೆ ಟಿಕೆಟ್‌ ಖಚಿತವಾಗಿರುವುದರಿಂದಲೇ ಇಷ್ಟೆಲ್ಲ ಮಾಡುತ್ತಿದ್ದಾರೆ ಎಂದು ಕ್ಷೇತ್ರದಲ್ಲಿ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಭಾಲ್ಕಿಯಲ್ಲಿ ಏರ್ಪಡಿಸಿದ್ದ ಭೀಮಣ್ಣ ಖಂಡ್ರೆಯವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಮೂಲಕ ಸಾಗರ್‌ ಖಂಡ್ರೆಯವರನ್ನು ಪರಿಚಯಿಸುವ ಕೆಲಸ ಮಾಡಿದ್ದರು. ಅದಾದ ಬಳಿಕ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಮಗನನ್ನು ರಾಜಕೀಯವಾಗಿ ಮುಂಚೂಣಿಗೆ ತರಲು ಮುಂದಾಗಿದ್ದಾರೆ.

ಪಕ್ಷದೊಳಗೆ ವಿರೋಧ:

ಹೇಗಾದರೂ ಮಾಡಿ ತಮ್ಮ ಮಗನಿಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸುತ್ತಿರುವ ಈಶ್ವರ ಬಿ. ಖಂಡ್ರೆಯವರಿಗೆ ಪಕ್ಷದೊಳಗೆ ವಿರೋಧ ವ್ಯಕ್ತವಾಗಿದೆ. ಇದುವರೆಗೆ ಯಾವೊಬ್ಬ ಮುಖಂಡರು ಬಹಿರಂಗವಾಗಿ ಇದರ ವಿರುದ್ಧ ಮಾತನಾಡಿಲ್ಲ. ಆದರೆ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ವಿರೋಧ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಸದ್ಯ ಈಶ್ವರ ಖಂಡ್ರೆಯವರು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಜೊತೆಗೆ ಅವರ ಸಹೋದರ ಅಮರ್‌ಕುಮಾರ ಖಂಡ್ರೆಯವರು ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷರಾಗಿದ್ದಾರೆ. ಈಗ ಸಾಗರ್‌ ಖಂಡ್ರೆಯವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ. ಕಾಂಗ್ರೆಸ್‌ ಪಕ್ಷವು ‘ಕುಟುಂಬ ರಾಜಕಾರಣ’ ಮಾಡುತ್ತಿದೆ ಎಂದು ಈಗಾಗಲೇ ಆರೋಪಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಾಗರ್‌ ಖಂಡ್ರೆಯವರಿಗೆ ಟಿಕೆಟ್‌ ಕೊಟ್ಟರೆ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ. ಪಕ್ಷದ ನಿಷ್ಠಾವಂತರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬುದಾಗಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಸಾಗರ್‌ ಖಂಡ್ರೆ
ಸಾಗರ್‌ ಖಂಡ್ರೆ

ಬೀದರ್‌ ಲೋಕಸಭಾ ಕ್ಷೇತ್ರದಿಂದ ಪಕ್ಷದಿಂದ ಯಾರಿಗೆ ಕಣಕ್ಕಿಳಿಸಬೇಕು ಎನ್ನುವುದು ಇದುವರೆಗೆ ಅಂತಿಮಗೊಂಡಿಲ್ಲ.

–ಬಸವರಾಜ ಜಾಬಶೆಟ್ಟಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಕಾಂಗ್ರೆಸ್‌ ಲೆಕ್ಕಾಚಾರವೇನು?

ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್‌ ಪಕ್ಷ ಯೋಜಿಸಿದೆ. ಇದರಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಕಣಕ್ಕಿಳಿಸಲು ಯೋಚಿಸಿದೆ. ಈಶ್ವರ ಖಂಡ್ರೆಯವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯವಾಗಿ ಪ್ರಭಾವ ಹೊಂದಿದ್ದಾರೆ. ಸಂಪನ್ಮೂಲದ ದೃಷ್ಟಿಯಿಂದಲೂ ಉತ್ತಮ ಎನ್ನುವ ಉದ್ದೇಶದಿಂದ ಪಕ್ಷವು ಖಂಡ್ರೆಯವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವುದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಆದರೆ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹಾಲಿ ಬಿಜೆಪಿಯ ಸಂಸದ ಭಗವಂತ ಖೂಬಾ ವಿರುದ್ಧ ಸ್ಪರ್ಧಿಸಿ ಈಶ್ವರ ಖಂಡ್ರೆ ಸೋಲು ಕಂಡಿದ್ದರು. ಸದ್ಯ ಖಂಡ್ರೆ ಸಂಪುಟ ದರ್ಜೆಯ ಸಚಿವರಾಗಿದ್ದು ಒಂದುವೇಳೆ ಗೆದ್ದು ಸಂಸದರಾದರೆ ಸಚಿವ ಸ್ಥಾನ ತೊರೆಯಬೇಕಾಗುತ್ತದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಸಕ್ತಿ ಹೊಂದಿದ್ದಾರೆ ಎಂದು ಗೊತ್ತಾಗಿದೆ. ‘ನಾನಂತೂ ಬರುವ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ’ ಎಂದು ಇತ್ತೀಚೆಗೆ ಖಂಡ್ರೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಈಶ್ವರ ಖಂಡ್ರೆ ಲೆಕ್ಕಾಚಾರವೇನು?

ಖಂಡ್ರೆ ಪರಿವಾರ ಮೊದಲಿನಿಂದಲೂ ಬೀದರ್‌ ಜಿಲ್ಲೆಯಲ್ಲಿ ಪ್ರಭಾವ ಹೊಂದಿದೆ. ಹಿಂದೆ ಭೀಮಣ್ಣ ಖಂಡ್ರೆಯವರು ಈಗ ಈಶ್ವರ ಖಂಡ್ರೆಯವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸಹೋದರ ಅಮರ್‌ಕುಮಾರ ಖಂಡ್ರೆ ಅವರನ್ನು ಗೆಲ್ಲಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆ ಮೂಲಕ ಸಹಕಾರ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಈಗ ಮಗ ಸಾಗರ್‌ ಖಂಡ್ರೆಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಕೊಡಿಸಿ ಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಸಲು ಮುಂದಾಗಿದ್ದಾರೆ. ಈ ಮೂಲಕ ಇಡೀ ಜಿಲ್ಲೆಯ ಮೇಲೆ ಹಿಡಿತ ಸಾಧಿಸುವುದು ಅವರ ಲೆಕ್ಕಾಚಾರವಾಗಿದೆ. ತಾನು ಪ್ರಭಾವಿ ಸ್ಥಾನದಲ್ಲಿದ್ದಾಗಲೇ ಮಗನಿಗೆ ರಾಜಕೀಯ ವೇದಿಕೆ ಕಲ್ಪಿಸಿಕೊಡುವ ಉದ್ದೇಶವೂ ಇದರ ಹಿಂದಿದೆ. ಒಂದುವೇಳೆ ಕಾಂಗ್ರೆಸ್‌ ಪಕ್ಷವು ತಮ್ಮನ್ನೇ ಕಣಕ್ಕಿಳಿಸಿದರೆ ಭಾಲ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಗ ಸಾಗರ್‌ ಖಂಡ್ರೆಯನ್ನು ನಿಲ್ಲಿಸುವ ಯೋಜನೆ ಕೂಡ ಈಶ್ವರ ಖಂಡ್ರೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT