ಗುರುವಾರ , ಜನವರಿ 28, 2021
18 °C

ನಿರ್ಲಕ್ಷ್ಯ ತೋರಿದರೆ ಪಕ್ಷದಿಂದ ಉಚ್ಚಾಟನೆ: ಡಿ.ಕೆ.ಶಿವಕುಮಾರ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸದಿದ್ದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಪಕ್ಷದಿಂದ ಕಿತ್ತು ಬಿಸಾಕಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಎಚ್ಚರಿಕೆ ನೀಡಿದರು.

ಇಲ್ಲಿಯ ಎ.ಕೆ.ಕಾಂಟಿನೆಂಟಲ್‍ನಲ್ಲಿ ಮಂಗಳವಾರ ಕಾಂಗ್ರೆಸ್ ಜಿಲ್ಲಾ ಘಟಕ, ಮುಂಚೂಣಿ ಘಟಕಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬೀದರ್‌ ಜಿಲ್ಲಾ ಪಂಚಾಯಿತಿಯಲ್ಲಿ ಭಿನ್ನಾಭಿಪ್ರಾಯ ಗಮನಿಸಿದ್ದೇನೆ. ಪಕ್ಷದಲ್ಲಿ ಗುಂಪುಗಾರಿಕೆ ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಬೇಕು’ ಎಂದು ಹೇಳಿದರು.

‘ಬಸವಕಲ್ಯಾಣ ಹಾಗೂ ಮಸ್ಕಿ ಉಪ ಚುನಾವಣೆಗಳಿಗೆ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಬೆಂಗಳೂರಲ್ಲಿ 28ರಂದು ಪಕ್ಷದ ಪ್ರಮುಖರ ಸಭೆ ಹಾಗೂ 30 ರಂದು ಹಿರಿಯ ಮುಖಂಡರ ಸಭೆ ಕರೆಯಲಾಗಿದೆ. ಇದಕ್ಕೂ ಮೊದಲು ಜನಾಭಿಪ್ರಾಯ ಸಹ ಪಡೆಯಲಾಗುವುದು. ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು’ ಎಂದು ಹೇಳಿದರು.

‘ಬಸವಕಲ್ಯಾಣ ಸೀಟು ರಾಜ್ಯಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಪಕ್ಷಕ್ಕೆ ಶಕ್ತಿ ತುಂಬಬೇಕು. ಬಸವಕಲ್ಯಾಣದ ಸ್ಥಾನವನ್ನು ಉಳಿಸಿಕೊಳ್ಳಬೇಕು. ಮುಲಾಜಿಗೆ ಬಿದ್ದು ಗೆಳೆಯರ, ಆಪ್ತರ ಹೆಸರನ್ನು ಶಿಫಾರಸು ಮಾಡಬಾರದು. ಗೆಲ್ಲಬಹುದಾದ ಅಭ್ಯರ್ಥಿಯನ್ನೇ ಸೂಚಿಸಬೇಕು’ ಎಂದು ಹೇಳಿದರು.

‘ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಒಳಗೊಂಡು ಶಾಸಕರು ಹೊಣೆ ಹೊತ್ತುಕೊಳ್ಳಬೇಕು. ಈಗಿನಿಂದಲೇ ಪ್ರಚಾರ ಕಾರ್ಯವನ್ನು ಆರಂಭಿಸಬೇಕು. ಇದೇ ಅವಧಿಯಲ್ಲಿ ಪಕ್ಷದಲ್ಲಿ ಹೊಸದಾಗಿ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಕಾರ್ಯವೂ ಆಗಬೇಕು’ ಎಂದು ಮನವಿ ಮಾಡಿದರು.

‘ಕೊಪ್ಪಳ, ರಾಯಚೂರ, ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲಡೆ ಉತ್ಸಾಹ, ನಂಬಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಬದಲಾವಣೆ ಆಗಲಿದೆ. ಕೇವಲ ನಂಬಿಕೆಯಿಂದ ಏನೂ ಆಗದು. ಪ್ರತಿಯೊಬ್ಬರು ಆಸಕ್ತಿ ಕಾರ್ಯನಿರ್ವಹಿಸಿದರೆ ಮಾತ್ರ ನಾವು ಬದಲಾವಣೆ ಕಾಣಲು ಸಾಧ್ಯ’ ಎಂದು ತಿಳಿಸಿದರು.

‘ಪಕ್ಷದ ಅಧ್ಯಕ್ಷರು, ಶಾಸಕರು ಮೊದಲು ಪಕ್ಷದ ಕಾರ್ಯಕರ್ತರು ಎನ್ನುವುದನ್ನು ಮರೆಯ ಕೂಡದು. ಮಸ್ಕಿಯಲ್ಲಿ 25 ಸಾವಿರ ಜನ ಕಾಂಗ್ರೆಸ್‌ಗೆ ಸೇರಿದ್ದಾರೆ. ಅಲ್ಲಿ ಎಲ್ಲರೂ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿದ್ದಾರೆ. ಬೆಂಗಳೂರಿನಿಂದ ಬಂದವರು ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ ಸಹ ಹೊಣೆ ಹೊತ್ತುಕೊಳ್ಳಬೇಕು’ ಎಂದರು.

‘ಮುಖಂಡರು ಬ್ಲಾಕ್‌ ಸಮಿತಿಗಳ ಸಭೆಗಳನ್ನು ನಡೆಸಬೇಕು. ಪಕ್ಷದ ಎಲ್ಲ ಮುಖಂಡರನ್ನು ಪ್ರಚಾರಕ್ಕೆ ಕರೆದುಕೊಂಡು ಬರಬೇಕು. ಪ್ರತಿವೊಂದು ವೋಟು ಮಹತ್ವದ್ದಾಗಿದೆ. ಮತದಾರರ ಪಟ್ಟಿ ಪಡೆದು ಕಾರ್ಯಪ್ರವೃತ್ತರಾಗಬೇಕು. ಶಾಸಕರು ಇದರ ಮುಂದಾಳತ್ವ ವಹಿಸಬೇಕು’ ಎಂದು ಹೇಳಿದರು.

‘ಜಿಲ್ಲಾ ಮಟ್ಟದಲ್ಲಿ ಒಂದು ತಂಡ ರಚಿಸಬೇಕು. ಮತದಾರ ಪಟ್ಟಿಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ದಳದ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಸಂದೇಶ ಬಂದಿದೆ. ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬರಲು ಇಚ್ಛಿಸಿದರೆ ಮೊದಲು ಬರ ಮಾಡಿಕೊಳ್ಳಬೇಕು’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ ಹುಮನಾಬಾದ್, ರಹೀಂಖಾನ್, ಅಜಯಸಿಂಗ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಹಿರಿಯ ಮುಖಂಡ ಬಸವರಾಜ ಬುಳ್ಳಾ, ಸಂಜುಕುಮಾರ ಡಿ.ಕೆ. ಅಮೃತರಾವ್‌ ಚಿಮಕೋಡ್, ಚಂದ್ರಾಸಿಂಗ್, ಸಂಜಯ ಜಾಗೀರದಾರ್, ಆನಂದ ದೇವಪ್ಪ, ಮುರಳೀಧರ ಏಕಲಾರಕರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು