ಭಾನುವಾರ, ಫೆಬ್ರವರಿ 28, 2021
20 °C
ಕಾಂಗ್ರೆಸ್ ನಡಿಗೆ ಅನ್ನದಾತರ ಕಡೆಗೆ ಅಭಿಯಾನ; ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಕೃಷಿ ಕಾಯ್ದೆ ರೈತರಿಗೆ ಮಾರಕ: ಡಾ. ಪುಷ್ಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆ ರೈತರಿಗೆ ಮಾರಕವಾಗಿವೆ’ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ. ಪುಷ್ಪಾ ಅಮರನಾಥ ಹೇಳಿದರು.

ಪಟ್ಟಣದ ಅಮರೇಶ್ವರ ನಿರ್ಮಳೆ ಅವರ ಹೊಲದಲ್ಲಿ ಭಾನುವಾರ ‘ಕಾಂಗ್ರೆಸ್ ನಡಿಗೆ ಅನ್ನದಾತರ ಕಡೆಗೆ’ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕೇಂದ್ರದ ಬಿಜೆಪಿ ಸರ್ಕಾರ ಜನಸಾಮಾನ್ಯರು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ. ಸುಳ್ಳು ಹೇಳಿ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರ ಉದ್ಯಮಿಗಳ ಪರ ಕೆಲಸ ಮಾಡುತ್ತಿದೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುತ್ತಿದೆ. ಕೃಷಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಆಕ್ರೋಶ ಹೊರ ಹಾಕಿದರು.

‘ಕಾಂಗ್ರೆಸ್ ಪಕ್ಷ ರೈತರ ಬಳಿ ಹೋಗಿ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿಕೊಡಲು ನಾವು ಅಭಿಯಾನ ನಡೆಸುತ್ತಿದ್ದೇವೆ. ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಈ ವೇಳೆ ಗ್ರಾಮೀಣ ಪ್ರದೇಶದ ಜನರು ವಿಶೇಷವಾಗಿ ರೈತರು ಎದುರಿಸುತ್ತಿರುವ ಸಮಸ್ಯೆ ತಿಳಿದುಕೊಂಡು ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ‘ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಜನರು ಜಾಗೃತರಾಗಬೇಕು. ರೈತ ವಿರೋಧಿ ಕಾಯ್ದೆಗಳ ಬಗ್ಗೆ ಮನೆ ಮನೆಗೆ ಮುಟ್ಟಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ‘ಡಾ. ಪುಷ್ಪಾ ಅವರ ನೇತೃತ್ವದಲ್ಲಿ ಕೃಷಿ ಕಾಯ್ದೆ ವಿರುದ್ಧ ದೊಡ್ಡ ಮಟ್ಟದ ಜಾಗೃತಿ ಅಭಿಯಾನ ನಡೆಯುತ್ತಿದೆ. ಇದಕ್ಕೆ ಇಲ್ಲಿ ಪಾಲ್ಗೊಂಡ ನೂರಾರು ರೈತ ಮಹಿಳೆರೇ ಸಾಕ್ಷಿ’ ಎಂದರು.

ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಕೆ.ಪುಂಡಲಿಕರಾವ, ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಕನ್ನಿರಾಮ ರಾಠೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವಾಣ್, ಪಕ್ಷದ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೊಳ್ಳೂರ್, ತಾಲ್ಲೂಕಿನ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಶ್ರೀ ದೇಶಮುಖ, ಅಂಜಲಿ ಪಾಟೀಲ, ಉಮಾದೇವಿ ಭಾಲ್ಕೆ, ರೈತ ಮುಖಂಡ ಪ್ರಕಾಶ ಬಾವುಗೆ, ಸ್ಥಳೀಯ ಮುಖಂಡ ರಾಮಣ್ಣ ವಡೆಯರ್, ಬಾಬುರಾವ ತಾರೆ, ಡಾ.ಫಯಾಜಅಲಿ, ಅನೀಲ ನಿರ್ಮಳೆ, ಬಂಟಿ ದರಬಾರೆ, ರಾಜಕುಮಾರ ಕಂದಗೂಳ, ಶಾಮಣ್ಣ ಉಜನಿಕರ್, ದತ್ತಾತ್ರಿ ಬಾಪುರೆ, ರಾಜು ಯಡವೆ, ಶಂಕರ ಪಾಟೀಲ, ಹರಿದೇವ ಸಂಗನಾಳ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು