ಶುಕ್ರವಾರ, ಜೂನ್ 25, 2021
21 °C
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಹಿವಾಟು ಮೇಲೂ ಕೋವಿಡ್ ಪರಿಣಾಮ; ಅನುಮತಿ ಇದ್ದರೂ ಎಪಿಎಂಸಿಗೆ ಬಾರದ ರೈತರು

ಕಡಿಮೆಯಾದ ಆವಕ: ಕಳೆಗುಂದಿದ ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಧಿಸಲಾಗಿದ್ದ ಕಟ್ಟುನಿಟ್ಟಿನ ಕರ್ಫ್ಯೂನಿಂದ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣಗಳಲ್ಲಿ ವ್ಯಾಪಾರ, ವಹಿವಾಟು ಕುಸಿತ ಕಂಡಿದೆ.

ಕರ್ಫ್ಯೂ ಆರಂಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಧಾನ್ಯ ತಂದು ಮಾರಲು ಅವಕಾಶ ಕಲ್ಪಿಸಿದಾಗ, ಶೇ 25ರಷ್ಟು ವ್ಯಾಪಾರ ಆಗಿತ್ತು. ನಂತರ ಸಮಯ ಮಧ್ಯಾಹ್ನ 12ರವರೆಗೆ ವಿಸ್ತರಿಸಿದರೂ ಸಹಜ ಸ್ಥಿತಿಗೆ ಬರಲಿಲ್ಲ. ಕರ್ಫ್ಯೂಗೂ ಮುಂಚಿನ ದಿನಗಳಿಗೆ ಹೋಲಿಸಿದರೆ ವಹಿವಾಟು ಶೇ 40 ರಿಂದ ಶೇ 50 ರಷ್ಟು ಮಾತ್ರ ಆಗುತಿತ್ತು.

ಈಗ ಸುಗ್ಗಿ ಕಾಲ ಇಲ್ಲ. ಮಾರ್ಚ್ ವೇಳೆಗೆ ಬಹುತೇಕ ಆಹಾರಧಾನ್ಯಗಳು ಮಾರಾಟ ಆಗಿವೆ. ಮನೆಯಲ್ಲಿ ಅಲ್ಪಸ್ವಲ್ಪ ಆಹಾರಧಾನ್ಯದ ದಾಸ್ತಾನು ಉಳಿಸಿಕೊಂಡ, ಹಣದ ಅವಶ್ಯಕತೆ ಇರುವ ರೈತರು ಮತ್ತು ಧಾನ್ಯ ಖರೀದಿಸಿ ಇಟ್ಟುಕೊಂಡ ಕೆಲ ವ್ಯಾಪಾರಿಗಳು ಮಾತ್ರ ಮಾರುತ್ತಿದ್ದಾರೆ.

ರೈತರು ಗ್ರಾಮೀಣ ಪ್ರದೇಶಗಳಿಂದ ಟೆಂಪೊ, ಜೀಪ್, ಆಟೊ ಟ್ರ್ಯಾಲಿಗಳಲ್ಲಿ ಆಹಾರಧಾನ್ಯ ತುಂಬಿಕೊಂಡು ಬಂದು ಮಾರುತ್ತಿದ್ದಾರೆ. ಕೋವಿಡ್ ಭೀತಿಯ ಕಾರಣ ಅನೇಕರು ಮಾರುಕಟ್ಟೆಗೆ ಬರಲು ಒಲ್ಲೆ ಎನ್ನುತ್ತಿದ್ದಾರೆ. ಒಬ್ಬರೇ ರೈತರು ನಾಲ್ಕೈದು ರೈತರ ಆಹಾರಧಾನ್ಯ ತೆಗೆದುಕೊಂಡು ಬರುತ್ತಿದ್ದಾರೆ. ಮಾರಾಟದ ನಂತರ ಬಂದ ಹಣವನ್ನು ಅವರವರಿಗೆ ತಲುಪಿಸುತ್ತಿದ್ದಾರೆ. ಕೆಲವರು ವ್ಯಾಪಾರಿಗಳಿಂದ ಸ್ಥಳದಲ್ಲೇ ತಮ್ಮ ಖಾತೆಗೆ ಫೋನ್ ಪೇ, ಗೂಗಲ್ ಪೇ ಮೂಲಕವೂ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ.

ಕೋವಿಡ್ ಸುರಕ್ಷತಾ ನಿಯಮಗಳನ್ನು ಅನುಸರಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಈಗಾಗಲೇ ವ್ಯಾಪಾರಿಗಳಿಗೆ ಸೂಚನೆ ಕೊಟ್ಟಿದೆ. ನಿತ್ಯ ಧ್ವನಿವರ್ಧಕಗಳಲ್ಲಿ ಮಾಸ್ಕ್ ಧರಿಸಲು, ಸ್ಯಾನಿಟೈಸರ್ ಬಳಸಲು ಮತ್ತು ಸುರಕ್ಷಿತ ಅಂತರ ಕಾಪಾಡಲು ಸೂಚಿಸಲಾಗುತ್ತಿದೆ.

ಸದ್ಯ ಮಾರುಕಟ್ಟೆಗೆ ಬರುತ್ತಿರುವ ಆಹಾರಧಾನ್ಯಗಳಲ್ಲಿ ತೊಗರಿ, ಕಡಲೆ, ಜೋಳ ಪ್ರಮುಖವಾಗಿವೆ. ಸೋಯಾ ಅವರೆ, ಕುಸುಬೆ ಕೂಡ ಕೊಂಚ ಪ್ರಮಾಣದಲ್ಲಿ ಆವಕವಾಗುತ್ತಿವೆ.

ಸುಗ್ಗಿ ಕಾಲದಲ್ಲಿ ಬೀದರ್ ಎಪಿಎಂಸಿಗೆ ಮಾರಾಟಕ್ಕಾಗಿ ನಿತ್ಯ 10 ರಿಂದ 12 ಸಾವಿರ ಕ್ವಿಂಟಲ್ ತೊಗರಿ, ಕಡಲೆ ಬರುತ್ತಿದ್ದವು. ಈಗ ತೊಗರಿ ಸರಾಸರಿ 3,700 ಕ್ವಿಂಟಲ್ ಹಾಗೂ ಕಡಲೆ 1,750 ಕ್ವಿಂಟಲ್ ಆವಕ ಆಗುತ್ತಿದೆ. ಸೋಯಾ ಅವರೆ, ಕುಸುಬೆ ಬಂದರೂ ಅವುಗಳ ಪ್ರಮಾಣ 50 ಕ್ವಿಂಟಲ್ ಒಳಗೆ ಇದೆ.

ಸದ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಇರುವ ಎಲ್ಲ ಅಂಗಡಿಗಳು ತೆರೆದುಕೊಂಡಿದ್ದರೂ ಮೊದಲಿನ ವಾತಾವರಣ ಇಲ್ಲ. ಎಪಿಎಂಸಿ ಸಿಬ್ಬಂದಿ ಪ್ರಕಾರ, ಸದ್ಯ ತೊಗರಿ ಬೆಲೆ ಕ್ವಿಂಟಲ್‍ಗೆ ₹6,800 ರಿಂದ ₹7,000, ಕಡಲೆ ₹5,000, ಜೋಳ ₹3,500 ರಿಂದ ₹4,000 ಇದೆ.

ಎಪಿಎಂಸಿ ಬಂದ್; ರೈತರಿಗೆ ಸಂಕಟ

ಬಸವಕಲ್ಯಾಣ: ಮುಂಗಾರು ಬಿತ್ತನೆಗೆ ಎಲ್ಲೆಡೆ ಸಿದ್ಧತೆ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಯ ವಹಿವಾಟು ಕರ್ಫ್ಯೂ ಕಾರಣ ಬಂದ್ ಆಗಿದ್ದರಿಂದ ರೈತರು ಸಂಕಟದಲ್ಲಿದ್ದಾರೆ.

ಬಿತ್ತನೆ ಪೂರ್ವದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಿ ಹೊಲದಲ್ಲಿ ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಬಿತ್ತನೆ ಬೀಜ, ಗೊಬ್ಬರ ಖರೀದಿಸುವುದು ವಾಡಿಕೆ. ಆದರೆ, ಕೋವಿಡ್ ಹೆಚ್ಚಳದ ಕಾರಣ ಎರಡು ವಾರಗಳಿಂದ ಸರ್ಕಾರ ಜನಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಇಲ್ಲಿನ ಮಾರುಕಟ್ಟೆಯ ವ್ಯವಹಾರ ಬಂದ್ ಆಗಿದೆ. ಈಗ ಮತ್ತೆ ಮೇ 10ರಿಂದ ಪೂರ್ಣ ಕರ್ಫ್ಯೂ ವಿಧಿಸುತ್ತಿರುವ ಕಾರಣ ಈ ತಿಂಗಳಲ್ಲಿ ಮಾರುಕಟ್ಟೆ ಆರಂಭ ಆಗುವುದು ಅಸಾಧ್ಯವಾಗಿದೆ.

‘ಸಣ್ಣಪುಟ್ಟ ರೈತರು ಅಗತ್ಯವಿದ್ದಾಗ ಉತ್ಪನ್ನವನ್ನು ಮಾರಾಟ ಮಾಡಿ ಕುಟುಂಬದ ಬೇಕು ಬೇಡಿಕೆಗಳನ್ನು ಪೊರೈಸುತ್ತಾರೆ. ಈಗ ಮದುವೆಗಳ ಸಮಯವೂ
ಇರುವುದರಿಂದ ಹೊಲದಲ್ಲಿನ ಬೆಳೆ ಮಾರಾಟವಾಗದೆ ಕೆಲವರಿಗೆ ಬಟ್ಟೆ, ಬಂಗಾರ ಖರೀದಿಗೆ ತೊಂದರೆ
ಆಗಿದೆ’ ಎಂದು ನಾರಾಯಣಪುರದ ರೈತ ಹಣಮಂತಪ್ಪ ಹೇಳಿದ್ದಾರೆ.

‘ಮಾರುಕಟ್ಟೆ ಬಂದ್ ಮಾಡಲಾ ಗಿಲ್ಲ. ಆದರೆ ರೈತರೇ ಬರುತ್ತಿಲ್ಲ. ಆದ್ದರಿಂದ ವಹಿವಾಟು ನಡೆಯುತ್ತಿಲ್ಲ’ ಎಂದು ಎಪಿಎಂಸಿ ಅಧಿಕಾರಿ ಶ್ರೀನಿವಾಸ ಬಿರಾದಾರ ತಿಳಿಸಿದ್ದಾರೆ.

ಕೂಲಿ ಕೆಲಸಕ್ಕಾಗಿ ಪರದಾಟ

ಖಟಕಚಿಂಚೋಳಿ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮೊದಲಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಹಮಾಲರು ಕೂಲಿ ಕೆಲಸಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

‘ಹಲವು ವರ್ಷಗಳಿಂದ ಎಪಿಎಂಸಿ ಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಹಿಂದೆಂದೂ ಈ ಪರಿಸ್ಥಿತಿ ಬಂದಿರಲಿಲ್ಲ. ಜೀವನ ನಿರ್ವಹಣೆಗೆ ಸಾಕಾಗುವಷ್ಟು ಕೂಲಿ ಸಿಗುತ್ತಿಲ್ಲ. ಈ ಕೆಲಸ ಬಿಟ್ಟರೆ ಬೇರೆ ಕೆಲಸ ಮಾಡುವುದು ಗೊತ್ತಿಲ್ಲ’ ಎಂದು ರವಿ ಅಳಲು ತೋಡಿಕೊಳ್ಳುತ್ತಾರೆ.

‘ಮೊದಲ ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರ ಮತ್ತು ಎಪಿಎಂಸಿ ನೆರವಿಗೆ ಬಂದಿದ್ದವು. ಮಾಸ್ಕ್, ಸ್ಯಾನಿಟೈಸರ್, ಆಹಾರ ಪದಾರ್ಥಗಳ
ಕಿಟ್ ವ್ಯವಸ್ಥೆ ಮಾಡಲಾಗಿತ್ತು. ಎರಡನೇ ಅವಧಿಯ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಹಮಾಲರ ನೆರವಿಗೆ ಯಾರೂ ಬರುತ್ತಿಲ್ಲ’ ಹಮಾಲರ ಸಂಘಟನೆ ಪದಾಧಿಕಾರಿ ಸುಂದರ ಬೇಸರ ವ್ಯಕ್ತಪಡಿಸಿದರು.

ಎಪಿಎಂಸಿಗೆ ಲಾಕ್‌ಡೌನ್‌ ಕರಿನೆರಳು

ಚಿಟಗುಪ್ಪ: ಪಟ್ಟಣದಲ್ಲಿ ಸ್ಥಳೀಯ ಆಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದ ಆದೇಶದಂತೆ ನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಕರ್ಫ್ಯೂ ಸಡಿಲಿಕೆ ಮಾಡಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ ಪಟ್ಟಣದ ಜನರು ಹೊರತುಪಡಿಸಿ ಕುಡಂಬಲ್‌, ನಿರ್ಣಾ, ಬೇಮಳಖೇಡಾ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನ ಇಲ್ಲಿಯ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಆಗಮಿಸದೆ ಇರುವುದರಿಂದ ಜನದಟ್ಟಣೆ ಕಡಿಮೆಯಾಗಿ ಬಿಕೋ ಎನ್ನುತ್ತಿದೆ.

‘ವ್ಯಾಪಾರಿ ಖರೀದಿಸಲು ಸಿದ್ಧರಿರಬೇಕು. ಹಮಾಲರು ಸಿಗಬೇಕು. ಬಹುತೇಕ ರೈತರು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಬಂದು ಹೋಗಲು ಪಾಸ್‌ ಕೇಳುತ್ತಾರೆ. ಪಾಸ್‌ ನೀಡುವ ಅಧಿಕಾರ ಎಪಿಎಂಸಿ ಬಳಿ ಇಲ್ಲ. ಒಬ್ಬಿಬ್ಬರು ಬೆಳೆ ಮಾರಾಟಕ್ಕೆ ಒಲವು ತೋರಿದರೂ ವ್ಯಾಪಾರಿಗಳು ಸಿಗುವುದಿಲ್ಲ. ವಾಹನ ಪಂಕ್ಚರ್ ಆದರೆ ಸರಿಮಾಡಲು, ಚಕ್ರಕ್ಕೆ ಗಾಳಿ ಹಿಡಿಯಲೂ ಸೌಲಭ್ಯ ಇಲ್ಲ. ಮಧ್ಯಾಹ್ನದ ನಂತರ ಡೀಸೆಲ್‌ ದೊರೆಯುವುದಿಲ್ಲ. ಹೀಗಾಗಿ ವಹಿವಾಟು ಅಸಾಧ್ಯ’ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ಗುಲಾಮ್.

‘ಊರುಗಳಿಂದ ಆಟೊಗಳಲ್ಲಿ ಲಭ್ಯ ಇರುವ ಎರಡು-ಮೂರು ಮೂಟೆ ದವಸ ಧಾನ್ಯ ಮಾರಾಟಕ್ಕಾಗಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ವರ್ತಕರು ಮೊದಲಿನಂತೆ ಸೂಕ್ತ ಬೆಲೆ ಕೊಡುತ್ತಿಲ್ಲ. ಕರ್ಫ್ಯೂ ಹೆಸರಿನಲ್ಲಿ ಲಾಭ ಮಾಡಿಕೊಳ್ಳುವುದಕ್ಕೆ ಅವಸರ ಅವಸರದಲ್ಲಿ ತಮಗೆ ತಿಳಿದಷ್ಟು ಬೆಲೆ ತಿಳಿಸಿ ನಮ್ಮ ಬೆಳೆ ಲೂಟಿ ಮಾಡುತ್ತಿದ್ದಾರೆ. ಹೀಗಾಗಿ ರೈತರು ಮಾರುಕಟ್ಟೆಯ ಸಂಕಟ ಎದುರಿಸುವಂತಾಗಿದೆ’ ಎಂದು ಮದರಗಿ ಗ್ರಾಮದ ರೈತ ಶಂಕರೆಪ್ಪ ತಿಳಿಸಿದ್ದಾರೆ.

ಗಡಿಯಲ್ಲಿ ವ್ಯಾಪಾರ ಸಂಪೂರ್ಣ ಸ್ಥಗಿತ

ಔರಾದ್: ಕೋವಿಡ್ ಸೋಂಕಿನ ಭೀತಿ ಹಾಗೂ ಲಾಕ್‍ಡೌನ್ ಮಾಡಿದ್ದರಿಂದ ಇಲ್ಲಿಯ ಎಪಿಎಂಸಿ ವಹಿವಾಟು ನಿಂತು ಹೋಗಿದೆ.

‘ಸರ್ಕಾರ ಕೃಷಿ ಉತ್ಪನ್ನ ಸಾಗಣೆಗೆ ವಿನಾಯಿತಿ ನೀಡಿದೆ. ಆದರೆ ಖಾಸಗಿ ವಾಹನ ಮಾಲೀಕರು ನಮ್ಮ ಉತ್ಪನ್ನ ಮಾರುಕಟ್ಟೆಗೆ ಕೊಂಡೊಯ್ಯಲು ಹೆದರುತ್ತಿದ್ದಾರೆ. ಸದ್ಯ ಮಾರಾಟ ಮಾಡಲು ಬರಬೇಡಿ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಬಹಳಷ್ಟು ರೈತರ ತಮ್ಮ ಉತ್ಪನ್ನ ಮಾರಾಟ ಆಗದೆ ಮನೆಯಲ್ಲಿ ಇಟ್ಟುಕೊಂಡಿದ್ದಾರೆ’ ಎಂದು ರೈತ ಮುಖಂಡ ಪ್ರಕಾಶ ಬಾವುಗೆ ತಿಳಿಸಿದ್ದಾರೆ.

‘ನಮ್ಮಲ್ಲಿ ಬಹುತೇಕ ವಹಿವಾಟು ಮಾರ್ಚ್ ತನಕ ಮುಗಿಯುತ್ತದೆ. ಈಗ ಲಾಕ್‍ಡೌನ್ ಘೋಷಣೆಯಿಂದ ಅಲ್ಪಸ್ವಲ್ಪ ಇರುವ ವಹಿವಾಟು ನಡೆಯುತ್ತಿಲ್ಲ’ ಎಂದು ಇಲ್ಲಿಯ ಎಪಿಎಂಸಿ ವರ್ತಕ ಶಿವರಾಜ ಅಲ್ಮಾಜೆ ತಿಳಿಸಿದ್ದಾರೆ.

‘ಬೆಳಿಗ್ಗೆ 10 ಗಂಟೆ ತನಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದೆ. ಆದರೂ ರೈತರು ಬರುತ್ತಿಲ್ಲ. ಹೀಗಾಗಿ ಸದ್ಯ ನಮ್ಮ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತವಾಗಿದೆ’ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಅಮಜದ್ ಖಾನ್ ತಿಳಿದಿದ್ದಾರೆ.

ವಹಿವಾಟು ಇಲ್ಲದೆ ಭಣಗುಡುತ್ತಿರುವ ಮಾರುಕಟ್ಟೆ

ಭಾಲ್ಕಿ: ರಾಜ್ಯ ಸರ್ಕಾರ ರಾಜ್ಯದಾದ್ಯಂತ ಏಪ್ರಿಲ್‌ ಕೊನೆಯ ವಾರದಿಂದ ಕರ್ಫ್ಯೂ ಘೋಷಿಸಿದ್ದರಿಂದ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಖರೀದಿ, ಮಾರಾಟವಿಲ್ಲದೆ ಭಣಗುಡುತ್ತಿದೆ. ರಾಜ್ಯ ಸರ್ಕಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ನಿಯಮ ಪಾಲಿಸಿ ಖರೀದಿ, ಮಾರಾಟಕ್ಕೆ ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ನೀಡಿದ್ದರೂ ಬಹುತೇಕ ರೈತರು ತಮ್ಮ ಉತ್ಪನ್ನವನ್ನು ಮಾರಾಟಕ್ಕೆ ಸಾಗಿಸುತ್ತಿಲ್ಲ.

ಹಣದ ಅವಶ್ಯಕತೆ ಇರುವ ರೈತರು ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ನೀಡಿ ಬೆಳೆಯನ್ನು ಮಾರುಕಟ್ಟೆಗೆ ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪಕ್ಕದ ಉದಗೀರ್‌ಗೆ ತೆರಳಲು ಕೊರೊನಾ ನಿರ್ಬಂಧ ಇರುವುದರಿಂದ ಕೆಲ ರೈತರು ಅನಿವಾರ್ಯವಾಗಿ ನಮ್ಮ ಮಾರುಕಟ್ಟೆಗೆ ಬೆಳೆಯನ್ನು ತರುತ್ತಿದ್ದಾರೆ ಎಂದು ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುವ ಶರಣಪ್ಪ, ರಾಜಕುಮಾರ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು