ಭಾನುವಾರ, ಫೆಬ್ರವರಿ 28, 2021
23 °C

ಕೋಟೆ ಊರಲ್ಲಿ ಬಸವಾದಿ ಶರಣರ ದರ್ಶನ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ವಡಗಾಂವ್ (ಡಿ) ಗ್ರಾಮದಲ್ಲಿ 12ನೇ ಶತಮಾನದ ಬಸವಾದಿ ಶರಣರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಭಾಗದ ಖ್ಯಾತ ಕಲಾವಿದ ಸಂತಪುರನ ಲಿಂಗೈಕ್ಯ ಶಿವರುದ್ರಪ್ಪ ಬಾಬಣೆ ಅವರ ಅದ್ಭುತ ಕಲೆ ವಡಗಾಂವ್ ಊರಲ್ಲಿ ನೋಡಲು ಸಿಗುತ್ತದೆ. ಬಸವಕಲ್ಯಾಣದ ಅನುಭವ ಮಂಟಪ ಮಾದರಿಯಲ್ಲಿ ನಿರ್ಮಿಸಲಾದ ಬಸವ ಮಂಟಪಕ್ಕೆ ಕಲಾವಿದ ಬಾಬಣೆ ಹೊಸ ರೂಪ ನೀಡಿದ್ದಾರೆ.

ಮಂಟಪದ ಸುತ್ತಲೂ 20 ಜನ ಶರಣರ ಮೂರ್ತಿಗಳಿವೆ. ಒಂದೊಂದು ಮೂರ್ತಿಯೂ 12ನೇ ಶತಮಾನದ ಇತಿಹಾಸ ಹೇಳುವಂತಿದೆ. ಅಕ್ಕಮಹಾದೇವಿ, ಚನ್ನಬಸವಣ್ಣ, ಕುಂಬಾರ ಗುಂಡಯ್ಯ, ಮೋಳಿಗೆ ಮಾರಯ್ಯ, ಕಿನ್ನರಿ ಬೊಮ್ಮಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಹಾಗೂ ಪವಾಡ ಪುರುಷ ನಾವದಗಿ ರೇವಪಯ್ಯ, ಕಲಬುರ್ಗಿಯ ಶರಣಬಸವೇಶ್ವರ ಪ್ರತಿಮೆಗಳು ನೋಡುಗರ ಕಣ್ಮನ ಸೆಳೆಯುವಂತಿವೆ.

’ಶರಣರು ಮತ್ತು ವಚನಗಳ ಬಗ್ಗೆ ಈ ಊರಿನ ಜನರಲ್ಲಿ ಪ್ರೀತಿ, ಅಭಿಮಾನ ಜಾಸ್ತಿ. ಹೀಗಾಗಿ ಲಿಂಗೈಕ್ಯ ಬಶೆಟ್ಟೆಪ್ಪ ದೇಶಮುಖ, ಶಿವಲಿಂಗಪ್ಪ ಖಾನಾಪುರೆ, ಮಾದಪ್ಪ ಖಳುರೆ ಅವರ ಪರಿಶ್ರಮದಿಂದ ಇಲ್ಲಿ ಬಸವ ಮಂಟಪ ಆಗಿದೆ. ಈ ಭಾಗದ ಜನರಿಗೆ ಶರಣರ ಬದುಕಿನ ನೈಜ ಜೀವನ ಅರ್ಥ ಮಾಡಿಕೊಡುವ ಉದ್ದೇಶದಿಂದ 20 ಜನ ಶರಣರ ಪ್ರತಿಮೆ ಹಾಗೂ 50 ಶರಣರ ಚಿತ್ರ ಬಿಡಿಸಲಾಗಿದೆ‘ ಎಂದು ವಡಗಾಂವ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಣಮಂತ ನೇಳಗೆ ಹೇಳುತ್ತಾರೆ.

’ಈ ಭಾಗದಲ್ಲಿ ಇದು ದೊಡ್ಡ ಬಸವ ಮಂಟಪ. ಬಸವ ಜಯಂತಿ ಇಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದ ಬಸವ ಭಕ್ತರು ಇಲ್ಲಿಗೆ ಬರುತ್ತಾರೆ‘ ಎಂದು ಗಣಪತರಾವ ದೇಶಮುಖ ತಮ್ಮ ಊರಿನ ಬಸವ ವೈಭವ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

’ಈ ಊರಿಗೆ ಬಹಳ ದೊಡ್ಡ ಇತಿಹಾಸ ಇದೆ. ನಿಜಾಮರ ಕಾಲದಲ್ಲಿ ಇದು ಕಂದಾಯ ವಸೂಲಿ ಕೇಂದ್ರವಾಗಿತ್ತು. ಈಗಲೂ ಇಲ್ಲಿಯ ಕೋಟೆ ನೋಡಲು ಅದ್ಭುತವಾಗಿದೆ. ಇಲ್ಲಿ ಹೋಳಿ ಹಬ್ಬದ ವೇಳೆ ನಡೆಯುವ ರಣಗಂಬ ಉತ್ಸವ ಬಹಳ ಅದ್ಧೂರಿಯಾಗಿ ಜರುಗುತ್ತದೆ. ಇಲ್ಲಿಯ ಭಾಷೆ, ಸಂಸ್ಕೃತಿ ವೈವಿದ್ಯತೆ ನಡುವೆಯೂ ಎಲ್ಲರೂ ಸೌಹಾರ್ದತೆಯಿಂದ ಬಾಳುವ ಅತಿ ದೊಡ್ಡ ಮಾನವೀಯ ಸಂಸ್ಕೃತಿ ಈ ಊರಲ್ಲಿ ಇದೆ‘ ಎಂದು ಇಲ್ಲಿಯ ಹಿರಿಯ ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಬಹಳ ಅಭಿಮಾನದಿಂದ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು