ಮಂಗಳವಾರ, ಜುಲೈ 27, 2021
25 °C
ಜೀವನ ನಿರ್ವಹಣೆಗೆ ಸರ್ಕಾರದಿಂದ ನೆರವಿನ ನಿರೀಕ್ಷೆ

ಲಾಕ್‌ಡೌನ್‌ ತೆರವು; ಉಪನ್ಯಾಸಕರಿಗೆ ತಪ್ಪದ ಸಂಕಷ್ಟ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಅನ್‌ಲಾಕ್‌ ಘೋಷಣೆ ಆದರೂ ಅನುದಾನ ರಹಿತ ವಿವಿಧ ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸಂಕಷ್ಟದಿಂದ ಹೊರಬಂದಿಲ್ಲ. ಖಾಸಗಿ ಶಾಲಾ ಶಿಕ್ಷಕರಂತೆ ಸರ್ಕಾರದಿಂದ ವಿಶೇಷ ಆರ್ಥಿಕ ಪ್ಯಾಕೇಜ್‌ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಲಾಕ್‌ಡೌನ್ ಸಡಿಲಗೊಳಿಸಿ ದರೂ ಜುಲೈ 15ರಿಂದ ಕಾಲೇಜು ಪ್ರಾರಂಭಿಸಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ ಖಾಸಗಿ ಅನುದಾನ ರಹಿತ ಕಾಲೇಜು ಉಪನ್ಯಾಸಕರು ಜುಲೈನಲ್ಲಿ ಕರ್ತವ್ಯಕ್ಕೆ ಹಾಜರಾದರೂ ಕೂಡ ಅವರಿಗೆ ಸೆಪ್ಟೆಂಬರ್‌ನಲ್ಲಿ ಅವರಿಗೆ ವೇತನ ಕೊಡಬಹುದು. ಈಗಾಗಲೇ ಸಂಕಷ್ಟದಲ್ಲಿರುವ ಉಪನ್ಯಾಸಕರಿಗೆ ಸೆಪ್ಟೆಂಬರ್‌ರವರೆಗೆ ಜೀವನ ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.

‘ಕೋವಿಡ್ ಎರಡನೇ ಅಲೆಯಲ್ಲಿ ಉದ್ಯೋಗ, ವೇತನ ಇಲ್ಲದೆ ಮನೆ ಬಾಡಿಗೆ, ಕಿರಾಣಿ, ತರಕಾರಿಯಂತಹ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದಂತಹ ದುಸ್ಥಿತಿ ಎದುರಾಗಿದೆ. ಮುಂದೆ ಕೋವಿಡ್‌ ಮೂರನೇ ಅಲೆ ಬರುವ ಸೂಚನೆಗಳು ಇರುವುದರಿಂದ ಉದ್ಯೋಗ ಮಾಡುವ ಭರವಸೆ ಕಳೆದುಕೊಂಡು ಆತಂಕದಲ್ಲಿ ಉಪನ್ಯಾಸಕರು ಬದುಕು ನಡೆಸುತ್ತಿದ್ದಾರೆ’ ಎಂದು ಉಪನ್ಯಾಸಕ ಶರಣು ಶಿರ್ಸೆ ಕಳವಳ ವ್ಯಕ್ತಪಡಿಸಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಅನುದಾನ ರಹಿತ ಖಾಸಗಿ ಶಾಲೆಯ ಶಿಕ್ಷಕರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ₹5,000 ಪರಿಹಾರ ಘೋಷಿಸಿರುವುದು ಸಂತಸದ ಸಂಗತಿ. ಆದರೆ, ಎರಡ್ಮೂರು ಪದವಿ ಹಾಗೂ ವೃತ್ತಿಪರ ತರಬೇತಿ ಕೋರ್ಸ್‌ ಮಾಡಿಕೊಂಡು ಖಾಸಗಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಪ್ಯಾಕೇಜ್‌ ಘೋಷಿಸದಿರುವುದು ದುರದೃಷ್ಟಕರ ಸಂಗತಿ’ ಎಂದು ಉಪನ್ಯಾಸಕ ಶ್ರೀಕಾಂತ ಭೂರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಕರ್ತವ್ಯ ನಿರ್ವಹಿಸಿದರೂ ಸಕಾಲಕ್ಕೆ ವೇತನ ಕೊಟ್ಟಿಲ್ಲ. ಮತ್ತೆ ಕೆಲವು ಸಂಸ್ಥೆಯವರು ವೇತನದಲ್ಲಿ ಅರ್ಧದಷ್ಟು ಕೊಟ್ಟಿದ್ದಾರೆ. ಆ ವೇತನ ಜೀವನ ನಿರ್ವಹಣೆಗೂ ಸಾಕಾಗಿಲ್ಲ. ನೇರ ತರಗತಿಗಳು ಆರಂಭವಾಗಿ ನಾಲ್ಕೈದು ತಿಂಗಳು ಕಳೆಯುತ್ತಿದ್ದಂತೆ ಕೋವಿಡ್‌ 2ನೇ ಅಲೆ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿ ಆಗಿದ್ದರಿಂದ ಕಾಲೇಜುಗಳು ಬಂದ್‌ ಆಗಿವೆ. ಮತ್ತೆ ನಾಲ್ಕು ತಿಂಗಳಿಂದ ವೇತನ ಇಲ್ಲದೇ ಕಾಲೇಜು ಸಿಬ್ಬಂದಿ ಪರದಾಡುವಂತಾಗಿದೆ’ ಎಂದು ಹೇಳುತ್ತಾರೆ ಉಪನ್ಯಾಸಕ ಕೈಲಾಸಪತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು