ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಆರೋಗ್ಯ ಸೇವೆ ಮರೀಚಿಕೆ: ವೈದ್ಯಕೀಯ ಸೇವೆ ಸಿಗದೆ ಜನರ ಪರದಾಟ

ಗುರುಪ್ರಸಾದ ಮೆಂಟೇ
Published 4 ಜುಲೈ 2024, 5:32 IST
Last Updated 4 ಜುಲೈ 2024, 5:32 IST
ಅಕ್ಷರ ಗಾತ್ರ

ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳು ಅಗತ್ಯ ವೈದ್ಯಕೀಯ ಸೇವೆಯಿಂದ ವಂಚಿತರಾಗಿದ್ದಾರೆ.

ಈ ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವೆಂದು ಮೇಲ್ದರ್ಜೆಗೆ ಏರಿಸಲಾಗಿದ್ದು ಲೇಬರ್ ವಾರ್ಡ್, ಸಾಮಾನ್ಯ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ಮೈನರ್ ಒ.ಟಿ, ಲಸಿಕೆ ಮತ್ತು ಚುಚ್ಚುಮದ್ದು ವಿಭಾಗ, ಪ್ರಯೋಗಶಾಲೆ, ಫಾರ್ಮಸಿ ವಿಭಾಗ, ಕ್ಷ–ಕಿರಣ ಕೊಠಡಿ, ದಂತ ಚಿಕಿತ್ಸಾ ವಿಭಾಗ, ಆಂಬುಲೆನ್ಸ್ ಸೇವೆ ಸೇರಿದಂತೆ ಇನ್ನಿತರ ಸೌಲಭ್ಯಗಳಿದ್ದು ಆದರೆ, ಈ ಆರೋಗ್ಯ ಕೇಂದ್ರ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಹಲವು ಸಮಸ್ಯೆಗಳು ಅಡ್ಡಿಯಾಗಿವೆ ಎನ್ನುತ್ತಾರೆ ಸ್ಥಳೀಯರು.

ಈ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳು ಆಸ್ಪತ್ರೆ ದುಸ್ಥಿತಿ ನೋಡಿ, ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತ ನೆರೆ ರಾಜ್ಯ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಇಲ್ಲವೇ ತಾಲ್ಲೂಕು ಆಸ್ಪತ್ರೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಣವಾದರೂ ಕೊರತೆಗಳ ಆಗರವಾಗಿದೆ.

ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿಯಿದೆ. ಇಲ್ಲಿಗೆ ತಜ್ಞ ವೈದ್ಯರು ಹಾಗೂ ಎಂ.ಬಿ.ಬಿ.ಎಸ್ ವೈದ್ಯರ ಹುದ್ದೆ ಮಂಜೂರಾಗಬೇಕಾಗಿದ್ದು, ಯಾರೊಬ್ಬರ ನೇಮಕಾತಿಯೂ ಆಗಿಲ್ಲ. ಆಸ್ಪತ್ರೆಯಲ್ಲಿ ದಾದಿಯರು, ಕ್ಷ-ಕಿರಣ ತಂತ್ರಜ್ಞ, ಪ್ರಥಮ ದರ್ಜೆ ಸಹಾಯಕರ, ದ್ವಿತೀಯ ದರ್ಜೆ ಸಹಾಯಕರ ಹಾಗೂ ಫಾರ್ಮಸಿಸ್ಟ್ ಹುದ್ದೆ ಖಾಲಿಯಿದ್ದು ಗುತ್ತಿಗೆ ಆಧಾರದ ಮೇಲೆ ಆದರೂ ನೇಮಕ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹ.

ಅಳವಾಯಿ, ಹಲಸಿ ತುಗಾಂವ, ಅಟ್ಟರಗಾ, ಮೆಹಕರ, ಸಾಯಗಾಂವ, ವಾಂಝರಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ 15ಕ್ಕೂ ಹೆಚ್ಚೂ ಹಳ್ಳಿಗಳ ಗ್ರಾಮಸ್ಥರು ಆಸ್ಪತ್ರೆಗೆ ಬಂದರೂ ಸೂಕ್ತ ಚಿಕಿತ್ಸೆ ಪಡೆಯದೆ ಮರಳಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವೈದ್ಯರು ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ.ಬಂದರೂ ಹೆಚ್ಚು ಸಮಯ ಇರುವುದಿಲ್ಲ’ ಎಂದು ಆಸ್ಪತ್ರೆಗೆ ಚಿಕಿತ್ಸಾಗಿ ಬಂದಿದ್ದ ಹೆಸರು ಹೇಳಬಯಸದ ಮಹಿಳೆಯೊಬ್ಬರು ಆರೋಪಿಸಿದರು.

ಮರಣೋತ್ತರ ಪರೀಕ್ಷೆಗಾಗಿ ಈ ಕೇಂದ್ರಕ್ಕೆ ತರುವ ಮೃತದೇಹಗಳನ್ನು ಸಮೀಪದ ಹುಲಸೂರ ಅಥವಾ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ವಿಷಯ ಆರೋಗ್ಯ ರಕ್ಷಣಾ ಸಮಿತಿ ಸಭೆಯಲ್ಲಿ ಹಲವಾರು ಬಾರಿ ಪ್ರಸ್ತಾಪವಾಗಿ ಚರ್ಚಿಸಲ್ಪಟ್ಟಿದೆ. ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪವಾಗಿ, ಆಶ್ವಾಸನೆ ದೊರೆತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

‘ಬಡವರಿಗೆ ಉತ್ತಮ ಚಿಕಿತ್ಸೆಯ ಗ್ಯಾರಂಟಿ ಭಾಗ್ಯ ಬೇಕಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಬೇಕು’ ಎಂದು ಸ್ಥಳಿಯ ಮುಖಂಡ ಭರತ್ ಪಾಟೀಲ್ ಒತ್ತಾಯಿಸಿದ್ದಾರೆ.

ಬಳಕೆಯಾಗದ ಆಂಬುಲೆನ್ಸ್: ಹೋಬಳಿಯ ಜನಸಂಖ್ಯೆ 40 ಸಾವಿರಕ್ಕೂ ಹೆಚ್ಚಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆರಿಗೆ ಸಂದರ್ಭ ರಕ್ತಸ್ರಾವ, ಹೃದಯಾಘಾತ, ಉಸಿರಾಟದ ಸಮಸ್ಯೆ ಸಂದರ್ಭಗಳಲ್ಲಿ ಆಂಬುಲೆನ್ಸ್ ತೀರಾ ಅವಶ್ಯವಾಗಿದೆ. ಸ್ಥಳೀಯವಾಗಿ ತುರ್ತು ಸೇವೆಗಳಿಗೆ ನಿರಂತರ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಯೋಗ ಕೇಂದ್ರ ಕುಡುಕರ ತಾಣ: ಹೋಬಳಿಯಲ್ಲಿ ಆಯುಷ್ ಇಲಾಖೆ ವತಿಯಿಂದ ಲಕ್ಷಗಟ್ಟಲೆ ಹಣ ಸುರಿದು ಯೋಗ ಅಭ್ಯಾಸ ಕೇಂದ್ರ ನಿರ್ಮಿಸಿದ್ದು ಅದರ ಬಳಕೆಯಾಗದೆ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಯೋಗ ತರಬೇತಿದಾರರು ಇಲ್ಲದೆ ಅನಾಥವಾಗಿವೆ.

ಸಮಪರ್ಕವಾಗಿ ಔಷಧ ವಿತರಿಸಲು ಒತ್ತಾಯ ಒಬ್ಬರೇ ವೈದ್ಯರು; ಚಿಕಿತ್ಸೆಗೆ ತೊಂದರೆ ರಾತ್ರಿ ವೇಳೆ ಆರೋಗ್ಯ ಕೇಂದ್ರ ಬಂದ್‌
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ .
ಡಾ. ರವಿ ಕಲಶೆಟ್ಟಿ ತಾಲ್ಲೂಕು ವೈದ್ಯಾಧಿಕಾರಿ
ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು 24 ಗಂಟೆಗಳ ಕಾಲ ಚಿಕಿತ್ಸೆ ನೀಡಬೇಕು ಆದರೆ ಸಂಜೆ 6 ಗಂಟೆಯ ನಂತರ ಆಸ್ಪತ್ರೆಗೆ ಬೀಗ ಹಾಕುತ್ತಾರೆ. ಹೀಗಿದ್ದ ಮೇಲೆ ಬಡ ಜನರಿಗೆ ಚಿಕಿತ್ಸೆ ಸಿಗುವುದು ಕಷ್ಟ ಸಾಧ್ಯ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ವೆಂಕಟ ಲಾಳೆ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT