ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲೆಯ ಆರು ಸೇತುವೆ ಮುಳುಗಡೆ

ಮೇಘ ಸ್ಫೋಟ: ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆ
Last Updated 17 ಸೆಪ್ಟೆಂಬರ್ 2020, 15:47 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಧಾರಾಕಾರವಾಗಿ ಮಳೆ ಸುರಿದಿದೆ. ಮಾಂಜ್ರಾ ನದಿ ಸೇರಿದಂತೆ ಅನೇಕ ಹಳ್ಳ, ನಾಲಾಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಮೂರು ದೊಡ್ಡ ಸೇತುವೆ ಸೇರಿ ಒಟ್ಟು ಆರು ಸೇತುವೆಗಳು ಮುಳುಗಡೆಯಾಗಿವೆ. ಮಳೆಯ ಅಬ್ಬರಕ್ಕೆ ಬೀದರ್, ಭಾಲ್ಕಿ, ಔರಾದ್ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ.

ಔರಾದ್‌ ತಾಲ್ಲೂಕಿನ ಕೌಠಾ(ಬಿ) ಸಮೀಪದ ಮಾಂಜ್ರಾ ನದಿ ಸೇತುವೆ ಪಕ್ಕದ ಮಣ್ಣು ಇನ್ನಷ್ಟು ಕೆಳಗೆ ಕುಸಿದಿದೆ. ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿದೆ. ಮಾಂಜ್ರಾ ನದಿ ಪಾತ್ರದ ಹೊಲಗಳಲ್ಲಿನ ಬೆಳೆಗಳಲ್ಲಿ ನೀರು ನುಗ್ಗಿದೆ. ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ತಗರಖೇಡಾದ ಬ್ಯಾರೇಜ್‌ನ ಒಂದು ಗೇಟ್‌ ತೆರೆಯಲಾಗಿದೆ.

ಗೋದಾವರಿ ಜಲಾನಯನ ಪ್ರದೇಶದಲ್ಲಿ ರಾತ್ರಿ ಭಾರಿ ಮಳೆಯಾಗುತ್ತಿದ್ದು, ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯಕ್ಕೆ ಒಂದು ವಾರದ ಅವಧಿಯಲ್ಲಿ ಒಂದೂವರೆ ಟಿಎಂಸಿ ಅಡಿ ನೀರು ಹರಿದು ಬಂದಿದೆ. ಪ್ರತಿ ಗಂಟೆಗೆ 3,796 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಭಾಲ್ಕಿ ತಾಲ್ಲೂಕಿನಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದ ಉಚ್ಚಾ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಓಣಿಗಳಲ್ಲಿ ಅಪಾರ ನೀರು ಹರಿಯುತ್ತಿದೆ. ಗ್ರಾಮದ ವ್ಯಾಪ್ತಿಯ ಹೊಲಗಳಲ್ಲಿನ ಬೆಳೆ ಕೊಚ್ಚಿಕೊಂಡು ಹೋಗಿದೆ. ಮಳೆಯ ಅಬ್ಬರಕ್ಕೆ ತಾಲ್ಲೂಕಿನ 20 ಟಿ.ಸಿಗಳು ಕೆಟ್ಟು ಹೋಗಿದ್ದು, ವಿದ್ಯುತ್‌ ಕೈಕೊಟ್ಟಿದೆ.

ಕಮಲನಗರ ತಾಲ್ಲೂಕಿನ ಹೊಳಸಮುದ್ರದಿಂದ ಹುಲಸೂರಕ್ಕೆ ಹೋಗುವ ಮಾರ್ಗದಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. 150ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಬೆಳಕುಣಿ ಗ್ರಾಮದ ಸೇತುವೆ ಮೇಲೆ ಅಪಾರ ನೀರು ಬಂದು ಸಂಚಾರ ಸ್ಥಗಿತಗೊಂಡಿದೆ. ದಾಡಗಿ ಸೇತುವೆ ನೀರಿನಲ್ಲಿ ಮುಳುಗಿದೆ.

ಬೀದರ್‌ ತಾಲ್ಲೂಕಿನ ಬಗದಲ್‌ ಬಳಿ ಹಳೆಯ ಸೇತುವೆ ಮೇಲೆ ನೀರು ಬಂದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಚಿಲ್ಲರ್ಗಿ ಸಮೀಪದ ಮಾಂಜ್ರಾ ನದಿಗೆ ಅಪಾರ ನೀರು ಹರಿದು ಬಂದಿದೆ. ಕಾಡವಾದ, ಯದಲಾಪುರ, ಮರಕಲ್‌, ಮಾಳೆಗಾಂವ, ಚಿಲ್ಲರ್ಗಿ, ಚಿಮಕೋಡದಲ್ಲಿ ಭಾರಿ ಮಳೆಯಾಗಿ ಅಪಾರ ಬೆಳೆ ನಷ್ಟವಾಗಿದೆ.
ಬಸವಕಲ್ಯಾಣ ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಗಂಡೂರಿ ನಾಲಾ, ಬೆಣ್ಣೆತೊರೆ ತುಂಬಿ ಹರಿದು ಹೊಲಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಗೋರಟಾ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನೀರು ನುಗ್ಗಿ ಮನೆಗಳಿಗೆ ಹಾನಿಯಾಗಿದೆ.

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹುಮನಾಬಾದ್‌ ತಾಲ್ಲೂಕಿನಲ್ಲಿ 44 ಮನೆಗಳು ಬಿದ್ದಿವೆ.

ಬೀದರ್ ನಗರದಲ್ಲೂ ಅಬ್ಬರಿಸಿದ ಮಳೆ
ಬೀದರ್‌:
ಇಲ್ಲಿಯ ಓಲ್ಡ್‌ಸಿಟಿಯಲ್ಲಿ ಅನೇಕ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಸಿತು. ನಗರದ ಸಿಎಂಸಿ ಕಾಲೊನಿ, ವಿದ್ಯಾನಗರ ಕಾಲೊನಿ, ಲುಂಬಣಿನಗರದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು.

ನಗರದ ಗಟಾರಗಳು ಮಳೆಗೆ ಉಕ್ಕಿ ಹರಿದವು. ಬುಧವಾರ ರಾತ್ರಿಯಿಂದ ನಗರದ ಬಹುತೇಕ ಕಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನಗರದಲ್ಲಿನ ಅನೇಕ ಹೋಟೆಲ್‌, ಖಾನಾವಳಿ ಹಾಗೂ ರೆಸ್ಟೋರಂಟ್‌ಗಳು ತೆರೆದುಕೊಂಡಿರಲಿಲ್ಲ. ಗ್ರಾಹಕರು ಉಪಾಹಾರ ಹಾಗೂ ಭೋಜನಕ್ಕಾಗಿ ಪರದಾಡಬೇಕಾಯಿತು.

ಕೆಇಬಿ ಮುಂಭಾಗದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಹಳ್ಳದ ಸ್ವರೂಪ ಪಡೆದುಕೊಂಡಿತ್ತು. ರೋಟರಿ ವೃತ್ತದಲ್ಲ್ಲಿ ನೀರು ನಿಂತುಕೊಂಡಿತ್ತು. ಭಗತ್‌ಸಿಂಗ್‌ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ಹೋಗುವ ಮಾರ್ಗದಲ್ಲಿರುವ ರೈಲ್ವೆ ಮೇಲ್ಸೇತುವೆ ಕೆಳಗೆ ನೀರು ನಿಂತು ವಾಹನ ಸಂಚಾರಕ್ಕೆ ತಡೆ ಉಂಟಾಯಿತು.

ಬೀದರ್‌ನಲ್ಲಿ 121 ಮಿ.ಮೀ ಮಳೆ
ಬೀದರ್‌ ಹಾಗೂ ತಾಲ್ಲೂಕಿನ ಮನ್ನಳ್ಳಿಯಲ್ಲಿ 121 ಮಿ.ಮೀ, ತಾಲ್ಲೂಕಿನ ಬಗದಲ್‌ನಲ್ಲಿ 68 ಮಿ.ಮೀ, ಬಸವಕಲ್ಯಾಣದಲ್ಲಿ 74 ಮಿ.ಮೀ, ಹುಲಸೂರಲ್ಲಿ 73 ಮಿ.ಮೀ, ಹುಮನಾಬಾದ್‌ನಲ್ಲಿ 50 ಮಿ.ಮೀ, ಹಳ್ಳಿಖೇಡದಲ್ಲಿ 40 ಮಿ.ಮೀ, ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾದಲ್ಲಿ 59 ಮಿ.ಮೀ., ಭಾಲ್ಕಿಯಲ್ಲಿ 36 ಮಿ.ಮೀ, ಹಲಬರ್ಗಾದಲ್ಲಿ 83 ಮಿ.ಮೀ, ಹಾಲಹಳ್ಳಿಯಲ್ಲಿ 80 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT