ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಗೆ ತೋಟಗಾರಿಕೆ ಬೆಳೆ ಹಾನಿ

ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿ ತಾಲ್ಲೂಕಿನ ರೈತರು
Last Updated 14 ಅಕ್ಟೋಬರ್ 2020, 3:42 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನ ದಾಬಕಾ ವಲಯ, ಠಾಣಾ ಕುಶನೂರ ವಲಯ ಹಾಗೂ ಕಮಲನಗರ ವಲಯದಲ್ಲಿ ಅತಿವೃಷ್ಟಿಯಿಂದಾಗಿ 154.80 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಗಡಿನಾಡಿನಲ್ಲಿ ಸುರಿದ ದಾಖಲೆಯ ಮಳೆಯಿಂದಾಗಿ ಸೋಯಾ ಜೊತೆ ತೋಟಗಾರಿಕೆ ಬೆಳೆಗಳೂ ಹಾಳಾಗಿವೆ. ತೋಟಗಾರಿಕೆ ಬೆಳೆ ಬೆಳೆಯಲು ದೀರ್ಘಾವಧಿ ಸಮಯ ಬೇಕು. ಈ ಮಧ್ಯೆ ಪ್ರಕೃತಿ ವಿಕೋಪಕ್ಕೆ ಒಳಗಾದರೆ ರೈತರ ಬಾಳು ದುಸ್ತರವಾಗುತ್ತದೆ.

ತೋಟಗಾರಿಕೆ ಬೆಳೆಗಳಾದ ಪಪಾಯ, ಮೆಣಸಿನಕಾಯಿ, ಟೊಮೆಟೊ, ಚೆಂಡು ಹೂ, ಬೆಂಡೆಕಾಯಿ, ಮಾವು, ನಿಂಬೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಸೋರೆಕಾಯಿ, ನುಗ್ಗೆಕಾಯಿ, ಈರುಳ್ಳಿ, ಬದನೆಕಾಯಿ, ಅದ್ರಕ, ಅರಶಿನ ಮತ್ತು ಕಬ್ಬು ಸೇರಿದಂತೆ ಹಲವು ರೀತಿಯ ಬೆಳೆಗಳು ಜಮೀನಿನಲ್ಲಿ ನೀರು ನಿಂತಿದ್ದರಿಂದ ಕೊಳೆಯುತ್ತಿವೆ. ಅಲ್ಲದೆ, ಭಾರಿ ಮಳೆಯಿಂದಾಗಿ ಕೈಗೆ ಬಂದ ಫಸಲು ನೆಲಕಚ್ಚಿವೆ.

ತಾಲ್ಲೂಕಿನಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಇಲ್ಲಿವರೆಗೂ ಯಾವುದೇ ತರಹದ ಪರಿಹಾರ ದೊರಕಿಲ್ಲ. ಈಗಾಗಲೇ ತಮ್ಮ ಜಮೀನಿನಲ್ಲಿ ನಳನಳಿಸುತ್ತಿದ್ದ ಸೋಯಾ, ತೊಗರಿ, ಉದ್ದು, ಹೆಸರು ಹಾಗೂ ಇನ್ನಿತರ ಬೆಳೆಗಳು ಕೂಡ ಮಳೆಯಿಂದ ಕೊಚ್ಚಿಕೊಂಡು ಹೋಗಿವೆ. ರೈತರು ತಮ್ಮ ದೈನಂದಿನ ಜೀವನ ಸಾಗಿಸಲು ಕೂಡ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಸರ್ಕಾರ ಸರ್ವೆ ನಡೆಸಿದ ದಾಖಲೆ ಮೇರೆಗೆ ಬೆಳೆ ಪರಿಹಾರ, ಬೆಳೆ ವಿಮೆ ನೀಡಿ ನೆರವಾಗಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

‘ವಿಮೆ ಪರಿಹಾರ ರೈತರಿಗೆ ತಡವಾಗಿ ಬರುತ್ತಿದೆ. ಹೀಗಾಗಿ ರೈತರು ಜೀವನ ನಡೆಸಲು ಕಷ್ಟವಾಗುತ್ತಿದೆ. ಇದರಿಂದ ಆತ್ಮಹತ್ಯೆಯಂತಹ ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ’ ಭಾರತ ಕೃಷಿಕ ಸಮಾಜದ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಅಂಕುಶ ವಾಡೇಕರ ಎಚ್ಚರಿಸಿದ್ದಾರೆ.

ಪರಿಹಾರ ಒದಗಿಸಲು ಯತ್ನ: ದಾಬಕಾ ವಲಯದಲ್ಲಿ ಅತಿವೃಷ್ಟಿಯಿಂದ 44.40 ಹೆಕ್ಟೆರ್, ಠಾಣಾ ಕುಶನೂರ ವಲಯದಲ್ಲಿ 91 ಹೆಕ್ಟೆರ್ ಹಾಗೂ ಕಮಲನಗರ ವಲಯದಲ್ಲಿ 19.40 ಹೆಕ್ಟೆರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಸಮೀಕ್ಷೆಯ ವರದಿ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಿದ್ದು ರೈತರಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT