ಬುಧವಾರ, ಡಿಸೆಂಬರ್ 8, 2021
27 °C
ಜಿಲ್ಲೆಯ ಗಡಿಗ್ರಾಮದಲ್ಲಿ ಹಲವಾರು ಸಮಸ್ಯೆ, ಸೌಲಭ್ಯ ಕಲ್ಪಿಸಲು ಆಗ್ರಹ

ಕಲಖೋರಾ: ಪೂರ್ಣ ಡಾಂಬರು ಕಾಣದ ರಸ್ತೆ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಗಡಿಗ್ರಾಮ ಕಲಖೋರಾದಿಂದ ಹಾದು ಹೋಗುವ ರಸ್ತೆಯಲ್ಲಿ ಅರ್ಧ ಭಾಗದಷ್ಟು ಮಾತ್ರ ಡಾಂಬರೀಕರಣ ಮಾಡಲಾಗಿದೆ. ಇದರಿಂದ ರಸ್ತೆಯು ಇಕ್ಕಟ್ಟಾದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ.

ಬಸವಕಲ್ಯಾಣದಿಂದ ಕಲಬುರ್ಗಿಗೆ ಹೋಗುವ ಮಾರ್ಗವು ಇಲ್ಲಿಂದ ಹಾದು ಹೋಗುತ್ತದೆ. ಈ ರಸ್ತೆ ಹದಗೆಟ್ಟಿದ್ದರಿಂದ ಡಾಂಬರೀಕರಣ ಕೈಗೊಳ್ಳಲಾಗಿದೆ. ಆದರೂ, ಅರ್ಧ ಭಾಗದಲ್ಲಿ ಮಾತ್ರ ಡಾಂಬರೀಕರಣ ನಡೆಸಿದ್ದರಿಂದ ಎದುರಿನಿಂದ ವಾಹನ ಬಂದರೆ ಹೋಗುವುದಕ್ಕೆ ಜಾಗವೇ ಇಲ್ಲದಂತಾಗಿದೆ. ಅಲ್ಲದೆ ಕೆಲಸ ನಡೆಯದ ಭಾಗದಲ್ಲಿನ ಮಣ್ಣು ಮಳೆಯಿಂದ ಕೊಚ್ಚಿಕೊಂಡು ಹೋಗಿದ್ದರಿಂದ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಈ ಕಾರಣ ಅಪಘಾತಗಳು ಕೂಡ ಸಂಭವಿಸುತ್ತಿವೆ.

‘ರಸ್ತೆ ಕೆಲಸ ವಿಳಂಬ ಗತಿಯಲ್ಲಿ ಸಾಗಿದೆ. ಕೆಲ ತಿಂಗಳುಗಳಿಂದ ಕಾಮಗಾರಿ ನಡೆದಿಲ್ಲ. ಹೀಗಾಗಿ ಜಲ್ಲಿ ಕಲ್ಲುಗಳು ಹರಡಿ ಜನರಿಗೆ ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಇನ್ನು ಮುಂದಾದರೂ ಪೂರ್ಣ ಪ್ರಮಾಣದಲ್ಲಿ ರಸ್ತೆ ಡಾಂಬರೀಕರಣ ಕೈಗೊಳ್ಳಬೇಕು’ ಎಂದು ಗ್ರಾ.ಪಂ ಮಾಜಿ ಸದಸ್ಯ ಮಹಾದೇವ ಹೊಸಮನಿ ಆಗ್ರಹಿಸಿದ್ದಾರೆ.

‘ದೇವಿತಾಂಡಾದ ರಸ್ತೆಗೆ ಹತ್ತಿ ಕೊಂಡಂತೆ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದರೂ ಅದು ಉಪಯೋಗಕ್ಕೆ ಬಾರದೆ ಹಂದಿ, ನಾಯಿಗಳ ವಾಸಸ್ಥಾನವಾಗಿದೆ. ಅದರ ಉಪಯೋಗ ಆಗುವಂತೆ ಸಂಬಂಧಿತರು ಕ್ರಮ ತೆಗೆದುಕೊಳ್ಳಬೇಕು’ ಎಂದು ವಾಲ್ಮೀಕಿ ಯೂಥ್ ಕ್ಲಬ್ ಅಧ್ಯಕ್ಷ ದಯಾನಂದ ಒತ್ತಾಯಿಸಿದ್ದಾರೆ.

‘ರಸ್ತೆ ಕೆಲಸ ಶೀಘ್ರದಲ್ಲಿ ಪೂರ್ಣ ಗೊಳಿಸಿ ಪಕ್ಕದಲ್ಲಿ ಚರಂಡಿ ನಿರ್ಮಿಸಿ ಮಳೆ ಹಾಗೂ ಮನೆ ಬಳಕೆ ನೀರು ಸರಾಗವಾಗಿ ಹಾದುಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಬಸವೇಶ್ವರ ಯೂಥ್ ಕ್ಲಬ್ ನ ಪಿಂಕುನಾಥ ಧಮ್ಮೂರ ಕೇಳಿಕೊಂಡಿದ್ದಾರೆ.

‘ಗ್ರಾಮದ ಕೆಲ ಭಾಗದಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಇಲ್ಲ. ಸಾಮೂಹಿಕ ಶೌಚಾಲಯ ಇಲ್ಲದ್ದರಿಂದ ಮಹಿಳೆಯರು ಸಂಕಟ ಅನುಭವಿಸುತ್ತಿದ್ದಾರೆ’ ಎಂದು ಪಾರ್ವತಮ್ಮ ಗೋಳು ತೋಡಿಕೊಂಡಿದ್ದಾರೆ.

‘ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 29 ಗ್ರಾಮಗಳು ಬರುತ್ತವೆ. ಆದರೆ, ಒಬ್ಬರು ವೈದ್ಯರು ಹಾಗೂ ಕೆಲ ಸಿಬ್ಬಂದಿ ಮಾತ್ರ ಇಲ್ಲಿದ್ದಾರೆ. ಈ ಗ್ರಾಮದ ಸುತ್ತಲಿನಲ್ಲಿ ಅನೇಕ ತಾಂಡಾಗಳು ಇರುವುದರಿಂದ ಜನರು ಹೆಚ್ಚಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಆದ್ದರಿಂದ ಹೆಚ್ಚಿನ ಸಿಬ್ಬಂದಿ ನೇಮಿಸಿ ಆಸ್ಪತ್ರೆಯಲ್ಲಿ ಸೌಲಭ್ಯಗಳು ದೊರಕುವಂತೆ ವ್ಯವಸ್ಥೆ ಕಲ್ಪಿಸಬೇಕು' ಎಂದು ರಮೇಶ ರಾಠೋಡ ವಿನಂತಿಸಿದ್ದಾರೆ.

‘ಗ್ರಾಮದಲ್ಲಿನ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುನಿಲಕುಮಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.