ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿಸ್ಕ್ಯಾನಿಂಗ್‌ಗೆ ಹೆಚ್ಚಿದ ಬೇಡಿಕೆ

ತ್ವರಿತ ವರದಿ: ಪರಿಸ್ಥಿತಿಯ ದುರ್ಲಾಭಕ್ಕೆ ತಲೆ ಎತ್ತಿದ ಏಜೆಂಟರು
Last Updated 28 ಏಪ್ರಿಲ್ 2021, 15:54 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ನಿತ್ಯ ಸರಾಸರಿ 400 ರಿಂದ 450 ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಆರ್‌ಟಿಪಿಸಿಆರ್ ಪರೀಕ್ಷೆ ವರದಿ ನೆಗೆಟಿವ್ ಬಂದರೂ ಕೆಲವರಿಗೆ ಜ್ವರ ಹಾಗೂ ಗಂಟಲು ಕೆರೆತ ಕಡಿಮೆಯಾಗದ ಕಾರಣ ವೈದ್ಯರು ನಿಖರತೆಗೆ ಸಿಟಿಸ್ಕ್ಯಾನಿಂಗ್‌ ಮೊರೆ ಹೋಗುತ್ತಿದ್ದಾರೆ. ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಸ್ವಯಂ ಪ್ರೇರಣೆಯಿಂದ ಸಿಟಿಸ್ಕ್ಯಾನಿಂಗ್‌ ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ಜಿಲ್ಲೆಯಲ್ಲಿ 70 ಸ್ಕ್ಯಾನಿಂಗ್‌ ಸೆಂಟರ್‌ಗಳು ಇವೆ. ಆದರೆ, ಬ್ರಿಮ್ಸ್‌ ಹಾಗೂ ನಗರದ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಮಾತ್ರ ಎಚ್‌ಆರ್‌ಟಿಸಿ (ಹೈ-ರೆಸಲ್ಯೂಷನ್ ಕಂಪ್ಯೂಟೆಡ್ ಟೊಮೊಗ್ರಫಿ) ಮಾಡುವ ಸಾಮರ್ಥ್ಯ ಇದೆ. ಬ್ರಿಮ್ಸ್‌ನಲ್ಲಿ ಒಂದು ತಿಂಗಳ ಅವಧಿಯಲ್ಲಿ 1,650 ಜನರ ಸ್ಕ್ಯಾನಿಂಗ್‌ ಮಾಡಲಾಗಿದೆ. ನಿತ್ಯ ಸರಾಸರಿ 50ರಿಂದ 60 ರೋಗಿಗಳ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ.

‘ಬ್ರಿಮ್ಸ್‌ ಕೋವಿಡ್‌ ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸ್ಕ್ಯಾನಿಂಗ್‌ ಮಾಡಿದ ವರದಿಯ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಚೇತರಿಸಿಕೊಂಡರೂ ಪೂರ್ಣ ಗುಣವಾದ ನಂತರವೇ ಕೋವಿಡ್‌ ಆಸ್ಪತ್ರೆಯಿಂದ ಹೋಗುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಬೆಡ್‌ನ ಕೊರತೆ ನೀಗಿಸಲು ಚೇತರಿಸಿಕೊಂಡ ರೋಗಿಗಳಿಗೆ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಆದರೆ, ರೋಗಿಗಳು ಒಪ್ಪುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಹೇಳುತ್ತಾರೆ.

ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೈದ್ಯಕೀಯ ಸಿಬ್ಬಂದಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ಕೆಳ ಹಂತದ ಸಿಬ್ಬಂದಿ ಹಾಗೂ ಕೆಲ ಹೊರಗಿನ ವ್ಯಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆದು ಬೇಗ ಸ್ಕ್ಯಾನಿಂಗ್‌ ಮಾಡಿಸಿ ವರದಿ ಕೊಡಿಸುವ ವಿಶ್ವಾಸ ಮೂಡಿಸಿ ರೋಗಿಗಳ ಸಂಬಂಧಿಗಳಿಂದ ₹200 ರಿಂದ ₹500 ಪಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಆದರೆ, ಯಾರೊಬ್ಬರೂ ಬ್ರಿಮ್ಸ್‌ ಆಡಳಿತಕ್ಕೆ ಲಿಖಿತ ದೂರು ಕೊಡಲು ಮುಂದೆ ಬರುತ್ತಿಲ್ಲ.

‘ಬ್ರಿಮ್ಸ್‌ ಹಾಗೂ ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ದಿನದ 24 ಗಂಟೆಯೂ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವರ ಮೇಲೆ ನಿಗಾ ಇಡಲಾಗಿದೆ. ಕೆಲವು ಚಿಕಿತ್ಸೆಗಳಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿ ರಸೀದಿ ಕೊಡುವ ವ್ಯವಸ್ಥೆ ಇದೆ. ಹೊರಗಿನ ವ್ಯಕ್ತಿಗಳು ಸುಳ್ಳು ಹೇಳಿ ಹಳ್ಳಿಯ ಜನರಿಂದ ಹಣ ಪಡೆಯುತ್ತಿರಬಹುದು. ಯಾರೂ ಹಣ ಕೊಡಬೇಕಿಲ್ಲ. ಹಣ ಕೇಳಿದರೆ ನೇರವಾಗಿ ದೂರು ಸಲ್ಲಿಸಬೇಕು’ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಶೆಟಕಾರ ಮನವಿ ಮಾಡಿದ್ದಾರೆ.

‘ಪ್ರತಿಯೊಬ್ಬರೂ ಕೋವಿಡ್‌ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಮಾಸ್ಕ್‌ ಹಾಗೂ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಪ್ರಸ್ತುತ ವೈರಲ್‌ ಜ್ವರ ಕಾಣಿಸಿಕೊಂಡಿರುವ ಕಾರಣ ಮನೆಗಳಿಂದ ಅನಗತ್ಯವಾಗಿ ಹೊರಗೆ ಬರಬಾರದು. ಇದರಿಂದ ಮಾತ್ರ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿದೆ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT