ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಪೌಷ್ಟಿಕಾಂಶದ ಭವಿಷ್ಯದ ಶಕ್ತಿ ಕೇಂದ್ರ ಭಾರತ: ಡಾ.ಬಿ.ಎನ್.ತ್ರಿಪಾಠಿ

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ.ಬಿ.ಎನ್.ತ್ರಿಪಾಠಿ
Last Updated 28 ಏಪ್ರಿಲ್ 2022, 11:15 IST
ಅಕ್ಷರ ಗಾತ್ರ

ಬೀದರ್‌: ವಿಶ್ವದ ಪೌಷ್ಟಿಕಾಂಶದ ಭವಿಷ್ಯದ ಶಕ್ತಿ ಕೇಂದ್ರವಾಗಿ ಭಾರತ ಹೊರ ಹೊಮ್ಮುತ್ತಿದೆ. ಪಶು ಸಂಗೋಪನೆ ಹಾಗೂ ಕೃಷಿ ಸಂಶೋಧನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಉಪ ಮಹಾ ನಿರ್ದೇಶಕ (ಪ್ರಾಣಿ ವಿಜ್ಞಾನ) ಡಾ.ಬಿ.ಎನ್.ತ್ರಿಪಾಠಿ ಹೇಳಿದರು.

ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ವೃತ್ತಿಪರರು ಸಮಸ್ಯೆ ವಿಶ್ಲೇಷಣೆ ಮತ್ತು ಸಮಸ್ಯೆ ಪರಿಹರಿಸುವ ವಿಧಾನಗಳ ಜತೆಗೆ ವಿವಿಧ ನಿರ್ವಹಣಾ ಸಾಧನ ಮತ್ತು ತಂತ್ರಗಳಲ್ಲಿನ ಕೌಶಲಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ತಾಂತ್ರಿಕ ಆವಿಷ್ಕಾರಗಳ ಲಾಭ ಪಡೆಯಲು ಅನುಕೂಲವಾಗುವಂತೆ ರೈತರಿಗೆ ಸೇವೆ ವಿಸ್ತರಿಸಬೇಕಾಗಿದೆ ಎಂದು ತಿಳಿಸಿದರು.

ಹೈನುಗಾರಿಕೆ ಪಶುಗಳ ಆನುವಂಶಿಕ ಸುಧಾರಣೆಗೆ ಪ್ರಾಮುಖ್ಯ ನೀಡಬೇಕಾಗಿದೆ. ಪಶು ಸಂಗೋಪನೆಯನ್ನು ಆಹಾರ ಸಂಸ್ಕರಣಾ ಉದ್ಯಮ, ಕೃಷಿ, ಸಂಶೋಧನೆ ಹಾಗೂ ಪೇಟೆಂಟ್‌ಗಳೊಂದಿಗೆ ಜೋಡಿಸಬೇಕಾಗಿದೆ ಎಂದು ಹೇಳಿದರು.

ಮೀನುಗಾರಿಕೆಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿ:

ಮೀನುಗಾರಿಕೆ ವಾರ್ಷಿಕ ಸರಾಸರಿ ಶೇಕಡ 8 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸುತ್ತಿದೆ. ಕೃಷಿ ಅಭಿವೃದ್ಧಿ ದರವು ಶೇ 7.28 ಪಾಲನ್ನು ಹೊಂದಿದೆ. ಭಾರತದ ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕ ಶೇ 4.46 ರಷ್ಟು ಕೊಡುಗೆ ನೀಡಿದೆ. ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು

ಹೊಸ ಪಠ್ಯಕ್ರಮ ರಚನೆ ಹಾಗೂ ನೂತನ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ಈ ವಿಶ್ವವಿದ್ಯಾಲಯವನ್ನು ವಿಶ್ವ ದರ್ಜೆಯ ವಿಶ್ವವಿದ್ಯಾಲಯಗಳ ಸ್ಥಾನಮಾನಕ್ಕೆ ಕೊಂಡೊಯ್ಯುವ ಅಗತ್ಯವಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು, ಅಧ್ಯಾಪಕರು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕಿದೆ. ವಿದೇಶದ ವಿಶ್ವವಿದ್ಯಾಲಯಗಳೊಂದಿಗೆ ಜಂಟಿ ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಅಭಿವೃದ್ಧಿಗೆ ನೆರವು:

ವಿಶ್ವವಿದ್ಯಾಲಯದ ಬೆಳವಣಿಗೆಗೆ ಕಳೆದ ಹತ್ತು ವರ್ಷಗಳಲ್ಲಿ ಐಸಿಎಆರ್ ₹ 87 ಕೋಟಿ ಅನುದಾನ ಒದಗಿಸಿದೆ. ಎಸ್‌ಎಯು ಅಭಿವೃದ್ಧಿ ಅನುದಾನವಾಗಿ ₹3.17 ಕೋಟಿ, ಗ್ರಂಥಾಲಯ ಬಲವರ್ಧನೆಗೆ ₹ 5.95 ಕೋಟಿ ಹಾಗೂ ಕೃಷಿ ವಿಜ್ಞಾನ ಕೇಂದಕ್ಕೆ ₹ 5.56 ಕೋಟಿ, ಐಸಿಎಆರ್ ವಿದ್ಯಾರ್ಥಿಗಳಿಗೆ ಜೆಆರ್‌ಎಫ್, ಎಸ್‌ಆರ್‌ಎಫ್, ಇಂಟರ್ನ್‌ಶಿಪ್ ಭತ್ಯೆ, ಶಿಷ್ಯವೇತನವಾಗಿ ₹ 1.18 ಕೋಟಿ ನೀಡಿದೆ ಎಂದು ತಿಳಿಸಿದರು.

ಭಾರತೀಯ ಜಾನುವಾರು ವಲಯವು ಜನಸಂಖ್ಯೆಯ ಶೇಕಡ 8.8 ರಷ್ಟು ಉದ್ಯೋಗಿಗಳನ್ನು ಹೊಂದಿದೆ. ವಿಶ್ವದ ಶೇ 23ರಷ್ಟು ಹಾಲು ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಜಾನುವಾರು ವಲಯವು ಒಟ್ಟು ಮೌಲ್ಯವರ್ಧನೆಯಲ್ಲಿ ಶೇ 4.9ರಷ್ಟು ಹಾಗೂ ಕೃಷಿಯಲ್ಲಿ ಶೇ 30.13ರಷ್ಟು ಕೊಡುಗೆ ನೀಡಿದೆ. ವರ್ಷಕ್ಕೆ 14.16 ದಶಲಕ್ಷ ಮೆಟ್ರಿಕ್‌ ಟನ್ ಮೀನು ಉತ್ಪಾದಿಸುವ ಮೂಲಕ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಮೊಟ್ಟೆಯಲ್ಲಿ ಮೂರನೇ ಮತ್ತು ಮಾಂಸ ಉತ್ಪಾದನೆಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹಾಲು, ಮಾಂಸ ಮತ್ತು ಮೊಟ್ಟೆಗಳಂತಹ ಕ್ಷೇತ್ರಗಳಲ್ಲಿ ಸರಾಸರಿ ವಾರ್ಷಿಕ ಬೆಳವಣಿಗೆ ದರವು 5 ಪ್ರತಿಶತಕ್ಕಿಂತ ಹೆಚ್ಚಿದೆ. ಪ್ರಾಣಿ ಪ್ರೋಟಿನ್‌ಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಅಭಿವೃದ್ಧಿ ದರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರು.

ರಾಜ್ಯದಲ್ಲಿ ಜಾನುವಾರು ಸಂಖ್ಯೆ 2.9 ಕೋಟಿ ಇದ್ದು, ಹತ್ತು ವರ್ಷಗಳಲ್ಲಿ ಶೇಕಡ 10.5 ರಷ್ಟು ಹೆಚ್ಚಾಗಿದೆ. ರಾಜ್ಯವು ಜಾನುವಾರು ಸಂಖ್ಯೆಯಲ್ಲಿ ದೇಶದಲ್ಲಿ 9ನೇ ಸ್ಥಾನ, ಕುರಿಗಳಲ್ಲಿ 3ನೇ ಸ್ಥಾನ, ಕೋಳಿಯಲ್ಲಿ 6ನೇ ಮತ್ತು ಮೇಕೆ ಸಂಖ್ಯೆಯಲ್ಲಿ 10ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಪಾಠ ಕಲಿಸಿದ ಕೋವಿಡ್:

ಕೋವಿಡ್‌ ಹೊಸ ಪಾಠ ಕಲಿಸಿದೆ. ಆನ್‌ಲೈನ್‌ ಮೋಡ್‌ ಕಲಿಕೆಯನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ.

ವೃತ್ತಿಪರರು, ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಹೀಗಾಗಿ ಬೇಡಿಕೆ ಚಾಲಿತ ಪಠ್ಯಕ್ರಮವನ್ನು ಅಳವಡಿಸಲು ಪಶು ವೈದ್ಯಕೀಯ, ಡೈರಿ ಮತ್ತು ಮೀನುಗಾರಿಕೆ ಶಿಕ್ಷಣವನ್ನು ಮರುರಚಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯಾದ ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ರಿಜಿಸ್ಟ್ರಾರ್ ಡಾ. ಬಿ.ವಿ. ಶಿವಪ್ರಕಾಶ, ಡಾ.ಎನ್.ಎ.ಪಾಟೀಲ ಇದ್ದರು. ಕುಲಪತಿ ಡಾ.ಕೆ.ಸಿ. ವೀರಣ್ಣ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT