ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾರ್ಜುನ ಖರ್ಗೆ ಶ್ರಮದಿಂದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ: ಖಂಡ್ರೆ

371(ಜೆ) ತಿದ್ದುಪಡಿಗೆ ದಶಮಾನೋತ್ಸವ; 20ರಂದು ಮಲ್ಲಿಕಾರ್ಜುನ ಖರ್ಗೆ ನಾಗರಿಕ ಸನ್ಮಾನ
Published 18 ಫೆಬ್ರುವರಿ 2024, 10:36 IST
Last Updated 18 ಫೆಬ್ರುವರಿ 2024, 10:36 IST
ಅಕ್ಷರ ಗಾತ್ರ

ಬೀದರ್‌: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಟ್ಟು ಹಿಡಿದು ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಮಾಡಿದ್ದರಿಂದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಅದಕ್ಕೀಗ ದಶಮಾನೋತ್ಸವದ ಸಂಭ್ರಮವಿದ್ದು, ಇದಕ್ಕಾಗಿ ಶ್ರಮಿಸಿದ ಖರ್ಗೆ ಅವರಿಗೆ ಮಂಗಳವಾರ (ಫೆ.20‌ ) ನಗರದ ನೆಹರೂ ಕ್ರೀಡಾಂಗಣದಲ್ಲಿ ನಾಗರಿಕ ಅಭಿನಂದನಾ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಅಭಿನಂದನಾ ಸಮಾರಂಭಕ್ಕೆ ಈಗಾಗಲೇ ನೆಹರೂ ಕ್ರೀಡಾಂಗಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಉದ್ಘಾಟಿಸುವರು. ಪಕ್ಷದ ಮುಖಂಡರು, ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಳ್ಳುವರು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ಕಲ್ಪಿಸಬೇಕು. ಇದಕ್ಕಾಗಿ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಮಾಡಬೇಕೆಂದು ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಪ್ರಸ್ತಾವ ಕಳಿಸಿದ್ದರು. ಆದರೆ, ಅಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದ ಎಲ್‌.ಕೆ. ಅಡ್ವಾಣಿ ಅವರು ಅದನ್ನು ತಿರಸ್ಕರಿಸಿದ್ದರು. ಆನಂತರ ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂತು. ಚುನಾವಣೆಯ ಸಂದರ್ಭದಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರು ವಿಶೇಷ ಸ್ಥಾನಮಾನದ ಭರವಸೆ ಕೊಟ್ಟಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಪಟ್ಟು ಹಿಡಿದು, ಮನವೊಲಿಸಿದರು. ಅಂದಿನ ಬೀದರ್‌ ಸಂಸದ ಎನ್‌.ಧರ್ಮಸಿಂಗ್‌ ಕೂಡ ಶ್ರಮಿಸಿದ್ದರು. ಅಂತಿಮವಾಗಿ 2013ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ಈಗ ಹತ್ತು ವರ್ಷ ಪೂರ್ಣಗೊಂಡಿದೆ. ಅದಕ್ಕೆ ಶ್ರಮಿಸಿದ ಖರ್ಗೆ ಅವರನ್ನು ಅಭಿನಂದಿಸುವುದು ಈ ಭಾಗದವರ ಕರ್ತವ್ಯ ಎಂದರು.

371(ಜೆ) ತಿದ್ದುಪಡಿಯಾಗಿ ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಈ ಭಾಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರತಿವರ್ಷ ₹ 3 ಸಾವಿರ ಕೋಟಿ ಅನುದಾನ ಬರುತ್ತಿದೆ. ಉನ್ನತ ಶಿಕ್ಷಣ, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಸಿಕ್ಕಿದೆ. ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ಈ ವರ್ಷದ ಬಜೆಟ್‌ನಲ್ಲಿ ಈ ಭಾಗಕ್ಕೆ ₹ 5 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಈ ಭಾಗದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆಯವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಸಚಿವರಾಗಿ ಅನೇಕ ಹುದ್ದೆಗಳನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಯಾವುದೇ ಹುದ್ದೆ ಕೊಟ್ಟರೂ ಅದನ್ನು ನಿಭಾಯಿಸಿದ್ದಾರೆ. ಭಾಲ್ಕಿ ತಾಲ್ಲೂಕಿನ ವರವಟ್ಟಿ ಅವರ ಹುಟ್ಟೂರು. ಕಲಬುರಗಿ ಕಾರ್ಯಕ್ಷೇತ್ರ ಮಾಡಿಕೊಂಡು ಎತ್ತರಕ್ಕೆ ಬೆಳೆದಿದ್ದಾರೆ. ಅವರು ಒಂದು ರಾಜ್ಯ ಅಥವಾ ಸಮುದಾಯಕ್ಕೆ ಸೀಮಿತರಾಗಿಲ್ಲ ಎಂದು ತಿಳಿಸಿದರು.

‘ಬುಡಾ ಅಕ್ರಮ– ಕಾನೂನು ಕ್ರಮ’
‘ಬುಡಾ ಅಕ್ರಮದಲ್ಲಿ ಯಾರೇ ಅಕ್ರಮ ಎಸಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ತಿಳಿಸಿದರು. ‘ಬುಡಾ ಅಕ್ರಮದ ತನಿಖೆಲಿ ಎಲ್ಲಿಗೆ ಬಂತು’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಈ ಕುರಿತು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರನ್ನೇ ಕೇಳಿ ಎಂದು ಖಂಡ್ರೆ ಹೇಳಿದರು. ‘ನೀವು ಜಿಲ್ಲಾ ಉಸ್ತುವಾರಿ ಸಚಿವರು. ನೀವೇ ಉತ್ತರಿಸುವುದು ಸೂಕ್ತ’ ಎಂದು ಪತ್ರಕರ್ತರು ಹೇಳಿದಾಗ, ಅಕ್ರಮ ಎಸಗಿದವರು ಯಾರೇ ಆಗಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಂಡ್ರೆ ಪ್ರತಿಕ್ರಿಯಿಸಿದರು.

371 (ಜೆ) ಬಂದ ನಂತರ ಈ ಭಾಗದಲ್ಲಿ 35 ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳು ಲಭಿಸಿವೆ. ಪ್ರತಿವರ್ಷ 700 ಮೆಡಿಕಲ್‌ ಸೀಟುಗಳಲ್ಲಿ ನಮ್ಮ ಭಾಗದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಸಾವಿರಾರು ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಸಿಗುತ್ತಿದೆ. ಸರ್ಕಾರಿ ನೌಕರಿಗಳಲ್ಲಿ ಅನೇಕರಿಗೆ ಮುಂಬಡ್ತಿ ಸಿಗುತ್ತಿದೆ. ಖಾಲಿ ಇರುವ 40 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೋದ ವರ್ಷ ಈ ಭಾಗಕ್ಕೆ ನೀಡಿರುವ ₹ 3 ಸಾವಿರ ಕೋಟಿಗೆ ಕ್ರಿಯಾ ಯೋಜನೆಗೆ ಟೆಂಡರ್‌ ಆಗಿದೆ. ಈ ಸಲ ₹ 5 ಸಾವಿರ ಕೋಟಿ ಘೋಷಿಸಿದ್ದಾರೆ. ಶೀಘ್ರ ಕ್ರಿಯಾ ಯೋಜನೆ ರೂಪಿಸಿ 2025ರೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

371(ಜೆ) ತಿದ್ದುಪಡಿಯಾದ ಹತ್ತು ವರ್ಷಗಳಲ್ಲಿ ತಲಾ ಐದೈದು ವರ್ಷ ಬಿಜೆಪಿ, ಕಾಂಗ್ರೆಸ್‌ ಸರ್ಕಾರ ಇತ್ತು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಒಂದೇ ಒಂದು ಹುದ್ದೆ ಭರ್ತಿ ಮಾಡಲಿಲ್ಲ. ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿತ್ತು. 371(ಜೆ) ಸಮರ್ಪಕವಾಗಿ ಅನುಷ್ಠಾನಕ್ಕೂ ತರಲಿಲ್ಲ ಎಂದು ಟೀಕಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮುಖಂಡರಾದ ರಾಜಶೇಖರ ಪಾಟೀಲ ಹುಮನಾಬಾದ್‌, ಅಬ್ದುಲ್‌ ಮನ್ನಾನ್‌ ಸೇಠ್‌, ಅನಿಲ್‌ಕುಮಾರ್‌ ಬೇಲ್ದಾರ, ಪುಂಡಲೀಕರಾವ, ಬಸವರಾಜ ಮಾಳಗೆ, ಆನಂದ ದೇವಪ್ಪ, ದತ್ತು ಮೂಲಗೆ, ಲಕ್ಷ್ಮಣರಾವ ಬುಳ್ಳಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT