ಕಮಲನಗರ: ‘ಮಹಾತ್ಮ ಗಾಂಧಿ ಅವರು ಶಾಂತಿಯಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಗಾಂಧೀಜಿ ತತ್ವಾದರ್ಶಗಳನ್ನು ಪಾಲಿಸಿ, ಅವರ ಮಾರ್ಗದಲ್ಲಿ ನಡೆದರೆ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ’ ಎಂದು ಕಮಲನಗರ ತಾಲ್ಲೂಕಿನ ಗ್ರೇಡ್–2 ತಹಶೀಲ್ದಾರರು ರಮೇಶ ಪೆದ್ದೆ ತಿಳಿಸಿದರು.
ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಉಭಯ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ದೇಶದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಧಾರಣ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದರು’ ಎಂದು ಬಣ್ಣಿಸಿದರು.
ಗೋಪಾಲ ಕೃಷ್ಣ, ಪ್ರವೀಣ್ ಬಿರಾದಾರ, ಝೇರೆಪ್ಪ ಸೇರಿದಂತೆ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಸಿದ್ಧರಾಮೇಶ್ವರ ಕಾಲೇಜು: ಪಟ್ಟಣದ ಸಿದ್ದರಾಮೇಶ್ವರ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ವಿಶ್ವನಾಥ ಕ್ವೀಡೆ ಮಾತನಾಡಿ, ‘ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆಯಾಗದಂತೆ ಅಹಿಂಸಾ ತತ್ವ ಅನುಸರಿಸಿ ನಮ್ಮ ದೇಶಕ್ಕೆ ಗಾಂಧೀಜಿ ಸ್ವಾತಂತ್ರ್ಯ ತಂದು ಕೊಟ್ಟರು. ನಾವೆಲ್ಲ ಅವರ ತತ್ವಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದರು.
ಗುರುನಾನಕ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಉಮಾಶಂಕರ್, ಎನ್ಎಸ್ಎಸ್ ಅಧಿಕಾರಿ ಪ್ರೊ.ರಮೇಶ ಚವಾಣ್, ಮಂಜುನಾಥ, ಬಾಲಾಜಿ ಬೋಂಡ್ಲೆ, ಪ್ರವೀಣ್ ಶಿಂದೆ, ಲಕ್ಷ್ಮಿ, ಶಿವಕುಮಾರ ಪಾಟೀಲ, ಶ್ರಾವಣ ಕಾರಬಾರಿ, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.